ಬೆಂಗಳೂರು: ವೆಬ್ಸೈಟೊಂದರ ಮೂಲಕ ಡ್ರಗ್ಸ್ ತರಿಸಿಕೊಂಡು ಲಾಕ್ಡೌನ್ ಸಡಿಲಿಕೆ ಅವಧಿಯಲ್ಲಿ ಮಾರಾಟ ಮಾಡುತ್ತಿದ್ದ ಐವರು ದಂಧೆಕೋರರನ್ನು ಸಿಸಿಬಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ನಮಂಗಲದ ಮನೆಯೊಂದರಲ್ಲಿ ಡ್ರಗ್ಸ್ ಅವ್ಯವಹಾರ ನಡೆಸುತ್ತಿದ್ದ ಐವರು ಆರೋಪಿಗಳನ್ನು ಈ ಹಿಂದೆ ಬಂಧಿಸಲಾಗಿತ್ತು. ಇವರು ನೀಡಿದ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಮಾದಕ ಜಾಲವನ್ನು ಬಯಲಿಗೆಳೆದಿದ್ದಾರೆ.
ಬಯಾನ್ ಅನ್ಸಾರಿ, ಅರ್ನಾಲ್ಡ್ ಫಾಸ್ಕಲ್ ಡಿಸೌಜಾ, ಅನಿವೃದ್ಧ ವೆಂಕಟಾಚಲಮ್, ಕನಿಷ್ಕ್ ರೆಡ್ಡಿ ಹಾಗೂ ಸಂತೋಷ್ ಎಂಬುವರನ್ನು ಸಿಸಿಬಿ ಮಾದಕ ವಸ್ತು ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ. ಆರೋಪಿಗಳಿಂದ 30 ಲಕ್ಷ ರೂ. ಮೌಲ್ಯದ 119 ಮಾದಕ ವಸ್ತುಗಳನ್ನು ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಫೋನ್ಗಳನ್ನು ಜಪ್ತಿ ಮಾಡಲಾಗಿದೆ.
ಬಂಧಿತ ಆರೋಪಿಗಳು ವೆಬ್ಸೈಟ್ನಲ್ಲಿ ಆರ್ಡರ್ ಮಾಡಿ ಆ್ಯಪ್ವೊಂದನ್ನು ಬಳಸಿ ಕೊರಿಯರ್ ಮುಖಾಂತರ ಡ್ರಗ್ಸ್ ತರಿಸಿಕೊಳ್ಳುತ್ತಿದ್ದರು. ಅಲ್ಲದೆ, ಬಿಟ್ ಕಾಯಿನ್ ಮೂಲಕ ಸ್ಥಳೀಯ ದಂಧೆಕೋರನಿಂದ ಡ್ರಗ್ಸ್ ಪಡೆದುಕೊಳ್ಳುತ್ತಿದ್ದರು ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಲಾಕ್ ಡೌನ್ ಸಡಿಲಿಕೆ ಅವಧಿಯಲ್ಲಿ ದಂಧೆ
ಲಾಕ್ಡೌನ್ ಅಗತ್ಯ ವಸ್ತುಗಳಿಗಾಗಿ ಖರೀದಿಸಲು ಬೆಳಗ್ಗೆ 6 ರಿಂದ 10ರವರೆಗೆ ನೀಡಿದ ವಿನಾಯಿತಿ ಅವಧಿಯಲ್ಲಿ ಆರೋಪಿಗಳು ನಗರದ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಟೆಕ್ಕಿಗಳಿಗೆ ಮತ್ತು ಪರಿಚಿತರಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ಒಂದು ಮಾತ್ರೆಗೆ 4 ರಿಂದ 5 ಸಾವಿರಕ್ಕೆ ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆಯ ದಾರಿ ಕಂಡುಕೊಂಡಿದ್ದರು.
ಪೊಲೀಸರಿಂದ ತಪ್ಪಿಸಿಕೊಳ್ಳಲು ತರಬೇತಿ
ಆರೋಪಿಗಳ ಪೈಕಿ ಬಯಾನ್ ಅನ್ಸಾರಿ ಶ್ರೀರಂಗಪಟ್ಟಣದಲ್ಲಿ ರೆಸಾರ್ಟ್ ಮಾಲೀಕನಾಗಿದ್ದ. ಆನ್ಲೈನ್ ಮುಖಾಂತರ ಡ್ರಗ್ಸ್ ತರಿಸಿಕೊಂಡು ರೆಸಾರ್ಟ್ನಲ್ಲಿ ಶೇಖರಿಸುತ್ತಿದ್ದ. ಅನಂತರ ಅಲ್ಲಿಂದ ನಗರದ ಗ್ರಾಹಕರಿಗೆ ಸಹಚರರ ಮೂಲಕ ಡ್ರಗ್ಸ್ ಸರಬರಾಜು ಮಾಡುತ್ತಿದ್ದ. ತಾಂತ್ರಿಕವಾಗಿ ಪಳಗಿದ್ದ ಅನ್ಸಾರಿ ವೆಬ್ಸೈಟ್ನಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬ ತರಬೇತಿ ಪಡೆಯುತ್ತಿದ್ದ. ಬಳಿಕ ತನ್ನ ಜೊತೆಯಲ್ಲಿದ್ದ ಆರೋಪಿಗಳಿಗೆ ಈ ವಿಚಾರವನ್ನು ಹಂಚಿಕೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.