ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಗೆ ಸೂಕ್ತ ಕ್ಷೇತ್ರದ ಹುಡುಕಾಟದಲ್ಲಿರುವ ಸಿದ್ದರಾಮಯ್ಯಗೆ ಇದೀಗ ಕಾಫಿನಾಡು ಚಿಕ್ಕಮಗಳೂರಿನಿಂದಲೂ ಸ್ಪರ್ಧಿಸುವ ಆಹ್ವಾನ ಬಂದಿದೆ. ದಾವಣಗೆರೆಯಲ್ಲಿ ಹಮ್ಮಿಕೊಂಡಿದ್ದ ಸಿದ್ದರಾಮಯ್ಯ ಅಮೃತ ಮಹೋತ್ಸವ ಸಮಾರಂಭದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಾಂಗ್ರೆಸ್ ನಾಯಕ ಹಾಗೂ ಕರ್ನಾಟಕ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ ಈ ಆಹ್ವಾನ ನೀಡಿದ್ದಾರೆ.
ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಸಿದ್ದರಾಮಯ್ಯಗೆ ಆಹ್ವಾನ ಬರುತ್ತಿದೆ. ಚಾಮರಾಜಪೇಟೆ ವರುಣ, ಚಾಮುಂಡೇಶ್ವರಿ ಬಾದಾಮಿ, ಕೋಲಾರ ನಗರ, ತುಮಕೂರು ನಗರ ಸೇರಿದಂತೆ 10ಕ್ಕೂ ಹೆಚ್ಚು ಕ್ಷೇತ್ರಗಳಿಂದ ಸಿದ್ದರಾಮಯ್ಯಗೆ ಸ್ಪರ್ಧೆಗೆ ಆಹ್ವಾನ ಕೇಳಿ ಬರುತ್ತಿದೆ.
ಸುರಕ್ಷಿತ ಕ್ಷೇತ್ರದ ಹುಡುಕಾಟದಲ್ಲಿರುವ ಸಿದ್ದರಾಮಯ್ಯ ಈ ಹಿಂದೆ ಸ್ಪರ್ಧಿಸಿ ಸೋತಿರುವ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಉಳಿದಂತೆ ಬಾದಾಮಿ ಬೆಂಗಳೂರು ನಗರದಿಂದ ದೂರವಾಗುವ ಹಿನ್ನೆಲೆ ಅಲ್ಲಿಂದ ಮತ್ತೊಮ್ಮೆ ಸ್ಪರ್ಧಿಸುವ ಆಸಕ್ತಿ ಹೊಂದಿಲ್ಲ ಎಂಬ ಮಾತಿದೆ.
ಎರಡು ತಿಂಗಳ ಹಿಂದಿನವರೆಗೂ ಅವರು ಚಾಮರಾಜಪೇಟೆ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಮಾತು ಕೇಳಿ ಬರುತ್ತಿತ್ತು. ಆದರೆ ಇದೀಗ ಕೋಲಾರದಿಂದ ಸ್ಪರ್ಧಿಸುತ್ತಾರೆ ಎಂಬ ಮಾಹಿತಿ ಇದೆ. ಇದಕ್ಕೆ ಪೂರಕ ಎಂಬಂತೆ ನಿರಂತರವಾಗಿ ಕೋಲಾರ ಜಿಲ್ಲೆಯ ನಾಯಕರ ಜೊತೆ ಸಿದ್ದರಾಮಯ್ಯ ಸಭೆ ನಡೆಸಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ನಡುವೆ ಸಮಾರಂಭದಲ್ಲಿ ಸಚಿನ್ ಮೀಗಾ ಚಿಕ್ಕಮಗಳೂರಿಗೆ ಬರುವಂತೆ ಆಹ್ವಾನ ನೀಡಿದ್ದಾರೆ. ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕರ ವರ್ತನೆಯಿಂದ ಬೇಸತ್ತಿದ್ದಾರೆ. ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಗೆ ಪುನರ್ಜನ್ಮ ನೀಡಿದ ಕ್ಷೇತ್ರದಿಂದ ನಿಮ್ಮಂತಹ ಜನನಾಯಕರು ಈ ಬಾರಿ ಸ್ಪರ್ಧಿಸಿದರೆ ಮತ್ತೊಮ್ಮೆ ಕಾಂಗ್ರೆಸ್ ಪಕ್ಷಕ್ಕೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪುನರ್ಜನ್ಮವಾಗಲಿದೆ ಎಂದು ಒತ್ತಾಯಿಸಿದ್ದಾರೆ.
ಇದೇ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಆಯ್ಕೆಯಾಗಿ ಪ್ರಸ್ತುತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಮೂರು ರಾಜ್ಯಗಳ ಉಸ್ತುವಾರಿ ಸಹ ಹೊತ್ತಿರುವ ಮಾಜಿ ಸಚಿವ ಸಿ.ಟಿ ರವಿ ಪ್ರತಿನಿಧಿಸುತ್ತಿರುವ ಈ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಸಚಿನ್ ಮೀಗಾ ಮಾಡಿರುವ ಮನವಿ ಈಗ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ತಮ್ಮ ಜನಪ್ರಿಯತೆ ಹೆಚ್ಚಿರುವ ಹಾಗೂ ಕುರುಬ ಸಮುದಾಯದ ಮತದಾರರು ಸಾಕಷ್ಟು ಸಂಖ್ಯೆಯಲ್ಲಿ ಇರುವ ಜೊತೆಗೆ ಮುಸಲ್ಮಾನ್ ಸಮುದಾಯದವರು ದೊಡ್ಡ ಸಂಖ್ಯೆಯಲ್ಲಿರುವ ಕ್ಷೇತ್ರದ ಹುಡುಕಾಟದಲ್ಲಿರುವ ಸಿದ್ದರಾಮಯ್ಯಗೆ ಈ ಕ್ಷೇತ್ರ ತದ್ವಿರುದ್ಧವಾದ ವಾತಾವರಣವನ್ನು ಹೊಂದಿದೆ.
ಈ ಸಂದರ್ಭ ಸಚಿನ್ ಮೀಗಾ ಮಾಡಿರುವ ಮನವಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಈ ಹಿಂದೆ ಕಾಂಗ್ರೆಸ್ ರಾಷ್ಟ್ರೀಯ ನಾಯಕರು ಗೆಲುವು ಸಾಧಿಸಿದ್ದರೂ ಸಹ ಈಗ ಇದು ಬಿಜೆಪಿಯ ಭದ್ರಕೋಟೆಯಾಗಿದೆ. ಧರ್ಮ ಆಧಾರಿತ ರಾಜಕಾರಣ ಇಲ್ಲಿ ನಡೆಯುತ್ತಿದ್ದು, ಸಿದ್ದರಾಮಯ್ಯ ಸ್ಪರ್ಧಿಸಿದರೆ ಗೆಲುವು ಕಷ್ಟ ಸಾಧ್ಯವಾಗಲಿದೆ.
ತಮ್ಮ ಕಡೆಯ ವಿಧಾನಸಭಾ ಚುನಾವಣೆ ಗೆಲುವಿನ ಮೂಲಕವೇ ಸಮಾಪ್ತಿಯಾಗಲಿ ಎಂದು ಬಯಸಿರುವ ಸಿದ್ದರಾಮಯ್ಯ ಇದಕ್ಕೆ ಪೂರಕವಾಗುವ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಬೆಂಗಳೂರಿನ ಚಾಮರಾಜಪೇಟೆ ಇಲ್ಲವೇ ಮೈಸೂರಿನ ವರುಣ ಕ್ಷೇತ್ರದಿಂದ ಸಿದ್ದರಾಮಯ್ಯ ಕಣಕ್ಕಿಳಿಯಬಹುದು ಎಂಬ ಮಾತು ಗಟ್ಟಿಯಾಗಿ ಕೇಳಿ ಬರುತ್ತಿದೆ.
ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಸ್ಪರ್ಧಿಸುವಂತೆ ಸಿದ್ದರಾಮಯ್ಯಗೆ ಕಿಸಾನ್ ಕಾಂಗ್ರೆಸ್ ಒತ್ತಾಯ