ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರುಪ್ಸಾ ಸಂಘಟನೆ (ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘಟನೆ) ಸದಸ್ಯರು ಬೆಂಗಳೂರಿನ ಮೌರ್ಯ ವೃತ್ತದಿಂದ ಸ್ವತಂತ್ರ ಉದ್ಯಾನದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಈ ಕುರಿತು ಪ್ರತಿಕ್ರಿಯಿಸಿರುವ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ, ರಾಜ್ಯದ ನಾನಾ ಭಾಗಗಳಿಂದ ಅನುದಾನರಹಿತ ಖಾಸಗಿ ಶಾಲೆಗಳ ಶಿಕ್ಷಕರು ಆಗಮಿಸಿದ್ದಾರೆ. ರುಪ್ಸಾ ಸಂಘಟನೆ ಸರ್ಕಾರದ ಮುಂದೆ 13 ಬೇಡಿಕೆಗಳನ್ನು ಇಟ್ಟಿದೆ. ಆದರೆ, ಸರ್ಕಾರ ಯಾವುದೇ ಬೇಡಿಕೆಯನ್ನ ಈಡೇರಿಸಿಲ್ಲ. ಶಿಕ್ಷಣ ಸಚಿವರು ಬೇಜಾವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಇಂದು ಬೃಹತ್ ಧರಣಿ ನಡೆಸೋಕೆ ನಿರ್ಧಾರ ಮಾಡಲಾಗಿದೆ ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಶಾಲೆಗಳನ್ನು ನಾವು ತೆರೆದಿದ್ದೇವೆ. ಖಾಸಗಿ ಶಿಕ್ಷಣ ಸಂಸ್ಥೆಗಳು ನಾಶವಾಗಲು ಬೇಕಾದ ಸುತ್ತೋಲೆಗಳನ್ನು ಸಚಿವ ಸುರೇಶ್ ಕುಮಾರ್ ಹೊರಡಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ರುಪ್ಸಾ ಒಕ್ಕೂಟದಿಂದ ಸರ್ಕಾರಕ್ಕೆ ಇಟ್ಟಿರುವ ಬೇಡಿಕೆಗಳು:
- ಸಂಕಷ್ಟದಲ್ಲಿರುವ ಖಾಸಗಿ ಶಾಲೆಗಳ ಶಿಕ್ಷಕರಿಗೆ ಪರಿಹಾರ ಘೋಷಣೆ ಮಾಡಬೇಕು.
- ಕನಿಷ್ಠ ಒಂದು ಸಾವಿರ ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡಬೇಕು.
- ಸಂಬಳ ಇಲ್ಲದ ಶಿಕ್ಷಕರಿಗೆ ಪ್ರತಿ ತಿಂಗಳು 10 ಸಾವಿರ ನೀಡಬೇಕು.
- 1985 ರಿಂದ ಅನುದಾನ ರಹಿತ ಶಾಲೆಗಳನ್ನ ಅನುದಾನಕ್ಕೆ ಒಳಪಡಿಸಬೇಕು.
- 10-11-2020 ರಂದು ಹೊರಡಿಸಿರುವ ಸುತ್ತೋಲೆ ಸರ್ಕಾರ ಮರು ಪರಿಶೀಲನೆಗೆ ಒತ್ತಾಯ.
- ಶಾಲೆಗಳ ಮಾನ್ಯತೆ ನವೀಕರಣವನ್ನ ಅದಾಲತ್ ರೂಪದಲ್ಲಿ ವಿಲೇವಾರಿ ಮಾಡಬೇಕು.
- ಗಡಿಭಾಗದ ಶಾಲೆಗಳನ್ನು ಮುಚ್ಚುವ ನಿರ್ಧಾರ ಹಿಂಪಡೆಯಬೇಕು.
- 2020-21 ನೇ ಸಾಲಿನ ಆರ್.ಟಿ.ಇ ಹಣ ಒಂದೇ ಕಂತಿನಲ್ಲಿ ಮರು ಪಾವತಿ ಮಾಡಬೇಕು.
- ಆರ್.ಟಿ.ಇ ಪುನರ್ ಅನುಷ್ಠಾನಕ್ಕೆ ತರುವಂತೆ ಖಾಸಗಿ ಶಾಲೆಗಳ ಒತ್ತಾಯ