ಬೆಂಗಳೂರು: ಕೋವಿಡ್ ಸಾಂಕ್ರಾಮಿಕ ರೋಗದ ಕಾರಣ ಕಳೆದ 15 ತಿಂಗಳಿಂದ ಮಕ್ಕಳು ತಮ್ಮ ಬೌಧಿಕ ವಿಕಾಸದ ಮಂದಿರವಾಗಿದ್ದ ಶಾಲೆಯನ್ನು ನೋಡದೆ ಮನೆಯಲ್ಲಿಯೇ ಇದ್ದು ಮಾನಸಿಕ ಖಿನ್ನತೆ ಹಾಗೂ ಅನೇಕ ದುಶ್ಚಟಗಳಿಗೆ ದಾಸರಾಗುವ ಸಾಧ್ಯತೆ ಇದೆ. ಆದ ಕಾರಣ ರಾಜ್ಯದಲ್ಲಿ ಭೌತಿಕ ತರಗತಿಗಳನ್ನ ಪ್ರಾರಂಭಿಸುವಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ರುಪ್ಸಾ ಸಂಘ ಮನವಿ ಮಾಡಿದೆ.
ಶಾಲೆಗಳು ಕೇವಲ ಕಲಿಕಾ ಕೇಂದ್ರಗಳಾಗಿರದೇ ಕ್ರೀಡೆ ಆಟ-ಪಾಠಗಳು ಸ್ನೇಹಿತರ ಜೊತೆ ಒಡನಾಟ ಇತ್ಯಾದಿ ಸ್ವಾತಂತ್ರ್ಯ ಸಲಿಗೆಯಿಂದ ವಿಕಾಸ ಕಂಡುಕೊಳಲಿರುವ ಜಾಗ. ಮಕ್ಕಳು ತಮ್ಮ ಬಾಲ್ಯ ಅನುಭವಿಸುವ ಶಾಲೆಗಳನ್ನು ಈ ಕೊರೊನಾ ದೂರ ಮಾಡಿ ವಿದ್ಯಾರ್ಥಿಗಳ ಸುಂದರ ಬದುಕು ನಾಶ ಮಾಡಿದೆ. ಆನ್ಲೈನ್ ಶಿಕ್ಷಣ ಕೇವಲ ಒಂದು ಚಿಕ್ಕ ಪರಿಹಾರವೇ ಹೊರತು ಇದು ಮೇಲಿನ ಯಾವುದೇ ಬೇಡಿಕೆ ಪೂರೈಸುವುದಿಲ್ಲ. ಬದಲಿಗೆ ಬಾಲ್ಯ ವಿವಾಹಗಳು ದೊಡ್ಡಮಟ್ಟದಲ್ಲಿ ಹೆಚ್ಚಿವೆ. ಬಾಲಕರ ಕಳ್ಳ ಸಾಗಣೆ ಮಾಡಿ ಭಿಕ್ಷಾಟನೆಗೆ ಹೆಚ್ಚಿರುವ ಉದಾಹರಣೆ ಕಣ್ಣ ಮುಂದಿವೆ. ಮಾನಸಿಕ ಹಾಗೂ ಲೈಂಗಿಕ ದೌರ್ಜನ್ಯ ಹೆಚ್ಚಿವೆ ಎಂದು ತಿಳಿಸಿದ್ದಾರೆ.
ಯುನಿಸೆಫ್ ಯುನೆಸ್ಕೋ ವರದಿಯಲ್ಲಿ ಶೇಕಡ 30ರಷ್ಟು ಮಕ್ಕಳು ಶಾಲೆಗೆ ಮರಳಿ ಬರುವ ಸಾಧ್ಯತೆ ಇಲ್ಲ ಎಂದಿದೆ. ಲಾನೈಟ್ ಸಂಸ್ಥೆಯು ಅಧ್ಯಯನದ ಪ್ರಕಾರ ಮಕ್ಕಳಿಗೆ ಕೊರೊನಾ ವೈರಸ್ ಸಾಧ್ಯತೆಗಳಿಗೆ ಪುರಾವೆ ಇಲ್ಲ ಎಂದಿದೆ. ಈಗ ಕೊರೊನಾ ಮರುಕಳಿಸುವ ಸಾಧ್ಯತೆ ಮೂರು ತಿಂಗಳ ನಂತರವೇ ಎಂದು ವರದಿಗಳು ಹೇಳಿವೆ. ಆದ್ದರಿಂದ ಪ್ರಮುಖ ಎಚ್ಚರಿಕೆಗಳೊಂದಿಗೆ ಶಾಲಾ ಕಾಲೇಜುಗಳನ್ನು ಪ್ರಾರಂಭಿಸುವಂತೆ ಮನವಿ ಪತ್ರ ನೀಡಿದ್ದಾರೆ.
ರುಪ್ಸಾ ಸಲಹೆ ಏನು?
- ಗ್ರಾಮೀಣ ಪ್ರದೇಶದ ಶಾಲಾ ಕಾಲೇಜುಗಳು
- ಕಠಿಣ ಎಸ್ಒಪಿ (SOP) ನಿಯಮಗಳನ್ನು ಪಾಲಿಸಲು ಸೂಚಿಸಬೇಕು.
- ಸ್ಥಳೀಯವಾಗಿಯೇ ಪಾಸಿಟಿವಿಟಿ ಶೇ 5ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಎಲ್ಲಾ ತರಗತಿಗಳನ್ನು ಪ್ರಾರಂಭಿಸಲು ಅನುವು ಮಾಡಿಕೊಡಬಹುದು.
- ಶಿಕ್ಷಕ, ಶಿಕ್ಷಕೇತರರಿಗೆ ಕೋರ್ಟ್ ಲಸಿಕೆ ಕಡ್ಡಾಯ ಮಾಡಲು ಸೂಚಿಸಬೇಕು.
- ಮಕ್ಕಳ ಲಸಿಕೆ ಬಂದ ತಕ್ಷಣ ಪ್ರಥಮ ಆದ್ಯತೆಯಲ್ಲಿ ಎಲ್ಲಾ ಮಕ್ಕಳಿಗೂ ಕಡ್ಡಾಯಗೊಳಿಸಬೇಕು.
- ಪಾಳಿ ಪದ್ಧತಿಯನ್ನು ಅನುಸರಿಸಬಹುದು.
- ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಕ್ಕಳಿಗೆ ಪ್ರತ್ಯೇಕ ಆರೋಗ್ಯ ತಪಾಸಣಾ ವಿಭಾಗಗಳನ್ನು ತೆರೆಯಬೇಕು.
- ನಗರ ಪ್ರದೇಶದ ಶಾಲಾ ಕಾಲೇಜುಗಳು
- ಎಸ್ಒಪಿ (SOP) ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಲು ಕಟ್ಟಾಜ್ಞೆ ಮಾಡಬೇಕು.
- ಖಾಸಗಿ ಸರ್ಕಾರಿ ಶಾಲಾ-ಕಾಲೇಜುಗಳು ಎನ್ನದೆ ಎಲ್ಲಾ ಶಾಲಾ - ಕಾಲೇಜು ಬೋಧಕ ಬೋಧಕೇತರರಿಗೆ ಲಸಿಕೆಯನ್ನು ಕೊಡಲೇಬೇಕು.
- 6ನೇ ತರಗತಿಯ ನಂತರದ ತರಗತಿಗಳಿಗೆ ಪಾಳಿ ಪದ್ಧತಿಯಲ್ಲಿ ಪ್ರಾರಂಭ ಮಾಡಿ ನಂತರ ಎಲ್.ಕೆ.ಜಿ. ಯಿಂದ 5ನೇ ತರಗತಿವರೆಗೆ ಶಾಲೆಗಳು ಪ್ರಾರಂಭಿಸಬಹುದು.
- ನಗರ ಪ್ರದೇಶದ ಆರೋಗ್ಯ ಕೇಂದ್ರಗಳಲ್ಲಿ ಮಕ್ಕಳ ವಿಭಾಗ ತೆರೆಯಬೇಕು.
- 75 ಬೋಧಕ ದಿನಗಳು ಸಿಗಲಿದೆ
ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಸಮೂಹ ಆರೋಗ್ಯ ಸುರಕ್ಷ ಯೋಜನೆಯನ್ನು ಸರ್ಕಾರವೇ ಅನುಷ್ಠಾನಗೊಳಿಸಬೇಕು. ಶಾಲಾ - ಕಾಲೇಜುಗಳು ಪ್ರಾರಂಭವಾದರೆ ಮೂರನೆಯ ಅಲೆ ಬರುವುದರೊಳಗೆ ಕನಿಷ್ಠ ಮೂರು ತಿಂಗಳಾಗುತ್ತದೆ ಎಂದು ವರದಿಗಳು ಹೇಳುತ್ತಿವೆ. ಹಾಗಾದರೆ ಅವರ ಪ್ರಕಾರ 75 ಬೋಧಕ ದಿನಗಳು ಸಿಗುವುದರಿಂದ ಶೇಕಡಾ 50ರಷ್ಟು ಪಠ್ಯ ವಿಷಯ ಕಲಿಸಬಹುದು.
ಒಂದು ವೇಳೆ ಮೂರನೇ ಅಲೆಯ ಸಂದರ್ಭ ಬಂದಾಗ ಒಂದೆರಡು ತಿಂಗಳು ರಜೆ ಘೋಷಿಸಿ ನಂತರ ಪುನಃ ಶಾಲಾ ಕಾಲೇಜುಗಳನ್ನು ಮುಂದುವರಿಸುವ ಮೂಲಕ ಕಲಿಕೆಯಲ್ಲಿ ನಿರಂತರತೆ ಕಾಯ್ದುಕೊಳ್ಳುವ ಮೂಲಕ ಶೈಕ್ಷಣಿಕವಾಗಿ ಏನೆಲ್ಲ ಸಮಸ್ಯೆಗಳನ್ನು ವಿದ್ಯಾರ್ಥಿಗಳು ಅನುಭವಿಸುತ್ತಾರೊ ಅವರ ಬಹುತೇಕ ಸಮಸ್ಯೆಗಳು ನಿವಾರಣೆಯಾಗುತ್ತವೆ. ಸದ್ಯ ಈ ಕುರಿತು ಸರ್ಕಾರ ಮಹತ್ತರವಾದ ಹೆಜ್ಜೆ ಇಡಬೇಕೆಂದು ಕರ್ನಾಟಕ ಖಾಸಗಿ ಶಾಲಾ ಕಾಲೇಜುಗಳ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಒತ್ತಾಯಿಸಿದ್ದಾರೆ.