ಬೆಂಗಳೂರು: ಕೊರೊನಾ ವೈರಸ್ ಜನರನ್ನ ಬಿಟ್ಟು ಬಿಡದೇ ಕಾಡ್ತಿದ್ದು, ಇದರ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಹಂತ ಹಂತವಾಗಿ ಹಲವು ಕ್ರಮಗಳನ್ನ ಕೈಗೊಳ್ತಾ ಬರ್ತಿದೆ. ಕಳೆದ ಎರಡು ವಾರದಿಂದ ಇಳಿಕೆ ಕಂಡಿದ್ದ ಸೋಂಕಿತರ ಸಂಖ್ಯೆಯು ನಿನ್ನೆ ದಿಢೀರ್ ಏರಿಕೆ ಕಂಡಿದೆ. ಈ ನಿಟ್ಟಿನಲ್ಲಿ ಮೂರನೇ ಅಲೆ ಎಂಟ್ರಿ ಕೊಟ್ಟು ಬಿಡ್ತಾ ಅನ್ನೋ ಆತಂಕ ಶುರುವಾಗಿದೆ.
ಹೌದು, ನೆರೆಯ ಕೇರಳ, ಮಹಾರಾಷ್ಟ್ರ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ ಆಗ್ತಿದ್ದು, ಇದರ ಪರಿಣಾಮ ಕರ್ನಾಟಕದ ಮೇಲೂ ಬೀಳುವ ಭಯ ಶುರುವಾಗಿದೆ. ಈಗಷ್ಟೇ ಚೇತರಿಕೆಯತ್ತ ಹೆಜ್ಜೆ ಇಡ್ತಿರುವ ಜನರ ಚಟುವಟಿಕೆಗಳಿಗೆ ಎಲ್ಲಿ ಲಾಕ್ಡೌನ್ ಹೇರಲಾಗುತ್ತೋ ಅನ್ನೋ ಭೀತಿ ಶುರುವಾಗಿದೆ.
ಇತ್ತ ಕೋವಿಡ್ ಮೂರನೇ ಅಲೆ ಕಾರಣಕ್ಕೆ ಆರೋಗ್ಯ ಇಲಾಖೆ ಹಲವು ಟಫ್ ರೂಲ್ಸ್ ಜಾರಿ ಮಾಡಲು ಪ್ಲಾನ್ ಮಾಡಿದ್ದು, ಕೆಲ ನಿರ್ಬಂಧಕ್ಕೆ ಕೊಟ್ಟಿದ್ದ ವಿನಾಯಿತಿಯನ್ನೂ ಹಿಂಪಡೆದಿದೆ. ಅದರಲ್ಲಿ ಮುಖ್ಯವಾಗಿ, ಕೇರಳ ಮತ್ತು ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಪ್ರವೇಶಿಸುವ ಜನರಿಗೆ RTPCR ನೆಗೆಟಿವ್ ರಿಪೋರ್ಟ್ ತರುವುದು ಕಡ್ಡಾಯವಾಗಿದೆ.
ಈ ಹಿಂದೆ ಮೊದಲ ಕೋವಿಡ್ ಡೋಸ್ ಪಡೆದವರಿಗೆ ನೆಗೆಟಿವ್ ರಿಪೋರ್ಟ್ ತರುವುದಕ್ಕೆ ವಿನಾಯಿತಿ ನೀಡಲಾಗಿತ್ತು. ಆದರೆ, ಇದೀಗ ಲಸಿಕೆ ಪಡೆದಿದ್ದರೂ ರಾಜ್ಯಕ್ಕೆ ಬರಬೇಕು ಅಂದರೆ 72 ಗಂಟೆಗಳ ಕಡ್ಡಾಯ ರಿಪೋರ್ಟ್ ತರಲೇಬೇಕು. ಈ ವಿನಾಯಿಯಿ ವಾಪಸ್ ಪಡೆದಿದ್ದೇವೆ ಅಂತ ಆರೋಗ್ಯ ಇಲಾಖೆ ಆಯುಕ್ತ ತ್ರಿಲೋಕ ಚಂದ್ರ ತಿಳಿಸಿದ್ದಾರೆ.
ಕಳೆದೊಂದು ವಾರದಲ್ಲಿ ಎವರೇಜ್ ಕೇಸ್ಗಳು ವರದಿಯಾಗಿವೆ. ಕೇರಳದ ಬಳಿ ಇರುವ ದಕ್ಷಿಣ ಕನ್ನಡ, ಚಾಮರಾಜನಗರ, ಚಿಕ್ಕಮಗಳೂರು, ಹಾಸನದ ಕಡೆ ಪ್ರಕರಣಗಳು ಹೆಚ್ಚಾಗ್ತಿದೆ. ಹೀಗಾಗಿ ಆ ಭಾಗದಲ್ಲಿ ಕೋವಿಡ್ ಟೆಸ್ಟಿಂಗ್ ಹೆಚ್ಚು ಮಾಡಿದ್ದೇವೆ. ಹಾಗೇ ಕಾಂಟಾಕ್ಟ್ ಟ್ರೆಸಿಂಗ್ ಮಾಡಲಾಗುತ್ತಿದೆ. ಗಡಿ ಭಾಗದ ಚೆಕ್ ಪೋಸ್ಟ್ಗಳನ್ನ ಈಗಾಗಲೇ ನಿರ್ಮಾಣ ಮಾಡಿದ್ದು, ಆಯಾ ಜಿಲ್ಲಾಡಳಿತಕ್ಕೆ ಸೂಕ್ತ ಕ್ರಮಕ್ಕೆ ಸೂಚನೆ ನೀಡಲಾಗಿದೆ ಅಂತ ತಿಳಿಸಿದರು.
ನೆರೆಯ ರಾಜ್ಯದಲ್ಲಿ ಕೇಸ್ ಏರಿಕೆ, ಹಬ್ಬ- ಹರಿದಿನಕ್ಕೆ ಬ್ರೇಕ್ ಹಾಕಿ: ಪಕ್ಕದ ರಾಜ್ಯದಲ್ಲಿ ಕೋವಿಡ್ ಕೇಸ್ ಏರಿಕೆ ಆಗ್ತಿದ್ದು, ಜನರು ಹಬ್ಬ-ಹರಿದಿನಕ್ಕಾಗಿ ಪ್ರಯಾಣಿಸುವುದನ್ನ ನಿರ್ಬಂಧಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ, ಆಯುಕ್ತರು ದೇವಸ್ಥಾನಗಳಲ್ಲಿ ಹೆಚ್ಚು ಗುಂಪು ಸೇರದೇ, ಕೋವಿಡ್ ನಿಯಮವನ್ನ ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದ್ದಾರೆ. ಮುಂದಿನ ದಿನಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾದರೆ, ಟಾಸ್ಕ್ ಪೋರ್ಸ್ ಕಮಿಟಿ ಸಲಹೆ ಪಡೆದು ಟಫ್ ರೂಲ್ಸ್ ಜಾರಿ ಮಾಡಲಾಗುತ್ತೆ ಅಂತ ತಿಳಿಸಿದ್ದಾರೆ.
ಮೂರನೇ ಅಲೆ ಅಪ್ಪಳಿಸುವುದು ಜನರ ಕೈನಲ್ಲಿ ಇದ್ದು, ಮಾಸ್ಕ್, ದೈಹಿಕ ಅಂತರ ಕಾಪಾಡಿಕೊಳ್ಳುವಂತೆ ಸೂಚಿಸಿದರು.