ಬೆಂಗಳೂರು: ವಿವಿಧ ಅಪರಾಧ ಕೃತ್ಯಗಳಲ್ಲಿ ತೊಡಗಿಕೊಂಡು ಗೂಂಡಾ ವರ್ತನೆ ಮೂಲಕ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದ ರೌಡಿಶೀಟರ್ ಮೇಲೆ ಇದೇ ಮೊದಲ ಬಾರಿಗೆ ಒಂದು ವರ್ಷ ಕಾಲ ಬೆಂಗಳೂರು ನಗರ ಜಿಲ್ಲೆಯಿಂದ ಗಡಿಪಾರು ಮಾಡಿ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಆದೇಶ ಹೊರಡಿಸಿದ್ದಾರೆ.
ಹಲಸೂರು ಪೊಲೀಸ್ ಠಾಣೆಯ ರೌಡಿಶೀಟರ್ ಕಾರ್ತಿಕ್ ಗೆ ಏ.26ರಿಂದ ಮುಂದಿನ ವರ್ಷ ಏ.26 ವರೆಗೂ ಬೆಂಗಳೂರು ನಗರ ಜಿಲ್ಲೆಯಿಂದ ಗಡಿಪಾರು ಮಾಡಿದ್ದಾರೆ. ಈ ಆದೇಶದಂತೆ ರೌಡಿಶೀಟರ್ ಕಾರ್ತಿಕ್ ನಗರದಲ್ಲಿ ಎಲ್ಲಿಯೂ ಇರುವಂತಿಲ್ಲ. ಒಂದು ವೇಳೆ ನಿಯಮ ಉಲ್ಲಂಘನೆ ಕಂಡುಬಂದರೆ ಅಂತಹವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬಹುದಾಗಿದೆ.
ಹಲಸೂರಿನ ಗೌತಮಪುರದ ನಿವಾಸಿಯಾದ ಕಾರ್ತಿಕ್, ಅತ್ಯಾಚಾರ ಯತ್ನ, ದರೋಡೆ, ಕೊಲೆಗೆ ಯತ್ನ, ಸುಲಿಗೆ, ಸರ್ಕಾರಿ ನೌಕರರ ವಿರುದ್ಧ ಹಲ್ಲೆ ಸೇರಿದಂತೆ 11 ಪ್ರಕರಣಗಳಲ್ಲಿ ಭಾಗಿಯಾಗಿದ್ದ. ನಿರಂತರವಾಗಿ ಗೂಂಡಾ ಚಟುವಟಿಕೆಯಲ್ಲಿ ಭಾಗಿಯಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಹಾಗೂ ಸಮಾಜದ ಸ್ವಾಸ್ಥ್ಯ ಹಾಳುಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದ. ಈ ಸಂಬಂಧ ಕ್ರಿಮಿನಲ್ ಪ್ರಕರಣಗಳಲ್ಲಿ ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಿದರೂ ಮತ್ತೆ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದ.
ಹತ್ತಾರು ವರ್ಷಗಳಿಂದ ಕುಕೃತ್ಯಗಳಲ್ಲಿ ಪಾಲ್ಗೊಂಡಿದ್ದ. ಈ ಸಂಬಂಧ ನಗರ ಪೂರ್ವ ವಿಭಾಗದ ಡಿಸಿಪಿ ಡಾ.ಶರಣಪ್ಪ ಅಪರಾಧ ಹಿನ್ನೆಲೆ ವರದಿ ಪರಿಶೀಲಿಸಿ ಒಂದು ವರ್ಷದವರೆಗೂ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.