ಬೆಂಗಳೂರು: ಲಾಕ್ಡೌನ್ನಿಂದ ಸಾಕಷ್ಟು ಉದ್ಯಮಗಳು ನೆಲಕಚ್ಚಿವೆ. ಜನ ಉದ್ಯೋಗ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ. ನಾಗರಿಕರಿಗೆ ಅಗತ್ಯ ಮೂಲಸೌಕರ್ಯ ನೀಡುವ ಸ್ಥಳೀಯ ಸಂಸ್ಥೆಗಳಿಗೂ ಲಾಕ್ಡೌನ್ನಿಂದ ವಿಪರೀತ ತೊಂದರೆಯಾಗಿದೆ. ಸ್ಥಳೀಯ ಸಂಸ್ಥೆಗಳಾದ ಬೆಸ್ಕಾಂ, ಜಲಮಂಡಳಿ, ಬಿಡಿಎ ಸೇರಿದಂತೆ ಬಿಬಿಎಂಪಿಗೂ ಕೋಟ್ಯಂತರ ರೂಪಾಯಿ ನಷ್ಟವಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
ಬಿಬಿಎಂಪಿ ಆಸ್ತಿ ಮಾಲೀಕರಿಗೆ ನೆರವಾಗಲು ತೆರಿಗೆಯಲ್ಲಿ ಎರಡು ತಿಂಗಳ ಕಾಲ ಶೇಕಡಾ ಐದರಷ್ಟು ರಿಯಾಯಿತಿ ನೀಡಿತ್ತು. ಹೀಗಾಗಿ ಜನರು ಇದರ ಸದುಪಯೋಗ ಪಡೆದು ಟ್ಯಾಕ್ಸ್ ಕಟ್ಟಿದ್ದಾರೆ. ಕಳೆದ ವರ್ಷಕ್ಕೂ, ಈ ವರ್ಷಕ್ಕೂ ಹೋಲಿಕೆ ಮಾಡಿದ್ರೆ ಕೇವಲ ಒಂದು ಕೋಟಿ ಮಾತ್ರ ವ್ಯತ್ಯಾಸ ಇದೆ. ಜೂನ್ 15, 2019ರಲ್ಲಿ 1,600 ಕೋಟಿ ರೂ. ತೆರಿಗೆ ಸಂಗ್ರಹವಾಗಿದ್ದರೆ, ಈ ಬಾರಿ 1599 ಕೋಟಿ ರೂ. ಸಂಗ್ರಹವಾಗಿದೆ. ಮಾರ್ಚ್, ಏಪ್ರಿಲ್ ವೇಳೆಗೆ ವಾಣಿಜ್ಯ ಪರವಾನಗಿ ನವೀಕರಿಸಬೇಕಿದ್ದು, ಲಾಕ್ಡೌನ್ ಹಿನ್ನೆಲೆ ಶೇಕಡಾ ಐವತ್ತರಷ್ಟು ಜನ ಪರವಾನಗಿ ನವೀಕರಣ ಮಾಡಿಲ್ಲ.
ಜೊತೆಗೆ ಪಾಲಿಕೆ ಕಂದಾಯ ವಸೂಲಿ ಆಂದೋಲನವನ್ನು ಸ್ಥಗಿತಗೊಳಿಸಿದ ಕಾರಣ ಬಾಕಿ ಆಸ್ತಿ ತೆರಿಗೆ ಈಗ ಸಂಗ್ರಹವಾಗುತ್ತಿಲ್ಲ ಎಂದು ಕಮಿಟಿ ಅಧ್ಯಕ್ಷ ಶ್ರೀನಿವಾಸ್ ತಿಳಿಸಿದ್ದಾರೆ. ಕೊರೊನಾ ತಡೆಗಟ್ಟಲು ಸರ್ಕಾರ ಮೊದಲ ಹಂತದಲ್ಲಿ ಇಪ್ಪತ್ತು ಕೋಟಿ ರೂ. ನೀಡಿದ್ದು, ಎರಡನೇ ಹಂತದಲ್ಲಿ 25 ಕೋಟಿ ರೂ. ನೀಡುತ್ತಿದೆ ಎಂದು ಆಯುಕ್ತರಾದ ಬಿ.ಹೆಚ್ ಅನಿಲ್ ಕುಮಾರ್ ತಿಳಿಸಿದ್ದಾರೆ. ನಷ್ಟ ಸರಿದೂಗಿಸಲು ಯಾವುದೇ ಹೊಸ ತೆರಿಗೆ ವಿಧಿಸುತ್ತಿಲ್ಲ. ಸಾಲವನ್ನೂ ಮಾಡಿಲ್ಲ ಎಂದು ಆಯುಕ್ತರು ಸ್ಪಷ್ಟಪಡಿಸಿದ್ದು, ಇತ್ತೀಚೆಗಷ್ಟೇ ಘನತ್ಯಾಜ್ಯ ನಿರ್ವಹಣೆಗೆಂದು ಪ್ರತಿ ಮನೆಗೆ ಇನ್ನೂರು ರೂಪಾಯಿ ಸೇವಾ ಶುಲ್ಕ ವಿಧಿಸುವ ನಿಯಮ ಮುನ್ನಲೆಗೆ ಬಂದಿದ್ದು, ಮೂರು ತಿಂಗಳಲ್ಲಿ ಜಾರಿಯಾಗುವ ಸಾಧ್ಯತೆ ಇದೆ. ಇದರ ಮೂಲಕ ಪಾಲಿಕೆಯ ಅತಿ ಹೆಚ್ಚು ವೆಚ್ಚವಾಗುವ ಘನತ್ಯಾಜ್ಯ ನಿರ್ವಹಣೆ ಸರಿದೂಗಿಸಲು ಪಾಲಿಕೆ ಚಿಂತಿಸಿದೆ ಎಂದು ಮಾಹಿತಿ ನೀಡಿದರು.
ಬೆಸ್ಕಾಂಗೆ ಕೋಟ್ಯಂತರ ರೂಪಾಯಿ ನಷ್ಟ: ಬೆಂಗಳೂರಿನ ವಸತಿ ಕಟ್ಟಡ, ವಾಣಿಜ್ಯ ಹಾಗೂ ಕೈಗಾರಿಕೆಗಳಿಗೆ ವಿದ್ಯುತ್ ಪೂರೈಕೆ ಮಾಡುವ ಬೆಸ್ಕಾಂಗೆ ಲಾಕ್ಡೌನ್ ವಿಪರೀತ ನಷ್ಟ ತಂದೊಡ್ಡಿದೆ. ಎಲ್ಲ ವಾಣಿಜ್ಯ ಕಟ್ಟಡಗಳು ಹಾಗೂ ಕೈಗಾರಿಕೆಗಳು ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ,ಬಾಗಿಲು ಮುಚ್ಚಿದ್ದವು. ಇದರಿಂದಾಗಿ 1238.62 ಕೋಟಿ ರೂಪಾಯಿ ನಷ್ಟವಾಗಿದೆ. 2019ರಲ್ಲಿ ಮೂರು ತಿಂಗಳ ವಿದ್ಯುತ್ ಕಂದಾಯ 4,726.28 ವಸೂಲಾತಿಯಾಗಿದೆ. 2020ರಲ್ಲಿ ಕೇವಲ 3487.66 ಕೋಟಿ ರೂ. ಸಂಗ್ರಹವಾಗಿದೆ. ಅಂದರೆ ಈ ವರ್ಷ 1,238.62 ಕೋಟಿ ರೂ. ಕಡಿಮೆ ಕಂದಾಯ ವಸೂಲಿಯಾಗಿದೆ.
ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಹೈ ಟೆನ್ಶನ್ ವಿದ್ಯುತ್ ಬಳಕೆ ಮಾಡುವ ಗ್ರಾಹಕರಿಗೆ ನೀಡುವ ವಿದ್ಯುತ್ನಲ್ಲಿ ಶೇಕಡಾ 38.81ರಷ್ಟು ಕಡಿಮೆ ಸೇಲ್ ಆಗಿದೆ. ಕೈಗಾರಿಕೆಗಳಿಂದ ಹೈಟೆನ್ಶನ್ ಹಾಗೂ ಲೋ ಟೆನ್ಶನ್ ವೋಲ್ಟೇಜ್ನ ಬಳಕೆಯ ಶೇಕಡಾ 46.51ರಷ್ಟು ಕಡಿಮೆ ಬಳಕೆಯಾಗಿದೆ. ವಾಣಿಜ್ಯ ಕಟ್ಟಡಗಳಲ್ಲಿ ಶೇಕಡಾ 38.2ರಷ್ಟು ಬೇಡಿಕೆ ಕಡಿಮೆಯಾಗಿದೆ ಎಂದು ಬೆಸ್ಕಾಂ ರೆವೆನ್ಯೂ ಜನರಲ್ ಮ್ಯಾನೇಜರ್ ರಾಮದಾಸ್ ಈಟಿವಿ ಭಾರತ್ಗೆ ತಿಳಿಸಿದ್ದಾರೆ.
ಜಲಮಂಡಳಿಗೂ ಲಾಕ್ಡೌನ್ನಿಂದ ಲಾಸ್..!: ಜಲಮಂಡಳಿಯಲ್ಲಿ ಪ್ರತಿ ತಿಂಗಳೂ 115 ಕೋಟಿ ರೂಪಾಯಿ ಸಂಗ್ರಹವಾಗುತ್ತದೆ. ಆದರೆ ಲಾಕ್ಡೌನ್ ಆದ ಮಾರ್ಚ್ ತಿಂಗಳಲ್ಲಿ 97 ಕೋಟಿ ರೂ. ಹಾಗೂ ಏಪ್ರಿಲ್ ತಿಂಗಳಲ್ಲಿ ಕೇವಲ 57 ಕೋಟಿ ರೂಪಾಯಿಯಷ್ಟೇ ಬಿಲ್ ಪಾವತಿಯಾಗಿದೆ. ಮೇ ತಿಂಗಳಲ್ಲಿ ಪ್ರತೀ ಮನೆಗೆ ಬಿಲ್ ನೀಡಿದರೂ, ಕೇವಲ 120 ಕೋಟಿ ರೂಪಾಯಿ ಮಾತ್ರ ಸಂಗ್ರಹವಾಗಿದ್ದು, ಹಳೆಯ ಬಾಕಿ ಯಾರೂ ಕಟ್ಟಿಲ್ಲ. ಬಡ್ಡಿ ರಹಿತ ಮಾಡಿದ್ರೂ, ಜಲಮಂಡಳಿಗೆ ಬರಬೇಕಾದ ಬಿಲ್ ಬಾರದೆ ಆದಾಯ ಕಡಿಮೆಯಾಗಿದೆ ಎಂದು ಜಲಮಂಡಳಿ ಅಧಿಕಾರಿ ತಿಳಿಸಿದ್ದಾರೆ.
ಬಿಡಿಎ ಕಾರ್ಯಚಟುವಟಿಕೆ ಸ್ಥಗಿತ: ಲಾಕ್ಡೌನ್ ಹಿಂದೆಯೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಷ್ಟದಲ್ಲಿತ್ತು. ಈಗಲೂ ನಷ್ಟದಲ್ಲಿ ಮುಂದುವರಿದಿದೆ. ಬಿಡಿಎ ನಿರ್ಮಾಣ ಮಾಡಿದ ಫ್ಲಾಟ್ಗಳು ಬಹುತೇಕ 2,500 ಸಾವಿರ ಖಾಲಿ ಇವೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಜನರಿಗೆ ಖರೀದಿಸಲು ಸಾಧ್ಯವಾಗಿಲ್ಲ. ಕಾರ್ನರ್ ಸೈಟ್ಗಳ ಹರಾಜು ಪ್ರಕ್ರಿಯೆ ಸ್ಥಗಿತಗೊಂಡಿದ್ದು, ಬಿಡಿಎ ಆದಾಯಕ್ಕೆ ಕುತ್ತು ತಂದಿದೆ. ಈ ವಾರದಿಂದ ಮತ್ತೆ ಪ್ರಕ್ರಿಯೆ ಆರಂಭಿಸಲು ಸಿದ್ಧತೆ ನಡೆಸಲಾಗಿದೆ. ಕೆಂಪೇಗೌಡ, ಅರ್ಕಾವತಿ ನಿವೇಶನಗಳ ಮೂಲಸೌಕರ್ಯ ಅಭಿವೃದ್ಧಿಯೂ ಸಾಧ್ಯವಾಗಿಲ್ಲ. 900 ಕೋಟಿ ರೂಪಾಯಿ ಗುತ್ತಿಗೆದಾರರ ಹಣವೂ ಬಾಕಿ ಇದೆ. ಕೆಂಪೇಗೌಡ ನಗರದ ನಿವೇಶನ ಹಂಚಿಕೆಯಾಗಿದ್ದರೂ, ಜನರು ಇನ್ನೂ ದುಡ್ಡು ಕಟ್ಟಿಲ್ಲ. ಲಾಕ್ಡೌನ್ ಮಧ್ಯಮವರ್ಗವನ್ನು ಸಂಕಷ್ಟಕ್ಕೆ ಸಿಲುಕಿಸಿರುವುದರಿಂದ ಬಿಡಿಎಗೆ ಬರಬೇಕಾದ ಆದಾಯಕ್ಕೂ ಹಿನ್ನಡೆಯಾಗಿದೆ.
ಒಟ್ಟಿನಲ್ಲಿ ಕೊರೊನಾ ಲಾಕ್ಡೌನ್ ಜನರ ಜೀವನವನ್ನು ಸಂಕಷ್ಟಕ್ಕೆ ತಳ್ಳಿದ್ದಲ್ಲದೇ ಸ್ಥಳೀಯ ಸಂಸ್ಥೆಗಳ ಆದಾಯಕ್ಕೂ ಹೊಡೆತ ಬಿದ್ದಿದೆ. ಇದು ಇಡೀ ಆರ್ಥಿಕ ವರ್ಷದ ಮೇಲೆಯೇ ಪರಿಣಾಮ ಬೀರಲಿದೆ ಎಂದು ಅಂದಾಜಿಸಲಾಗಿದೆ.