ಬೆಂಗಳೂರು: ಇಂದಿನಿಂದ ಸ್ವಾವಲಂಬಿ - ನಿಮ್ಮ ಪೋಡಿ ನೀವೇ ಮಾಡಿ ಯೋಜನೆ ಆರಂಭಿಸಲಾಗಿದ್ದು, ಇದಕ್ಕಾಗಿ ಹೊಸ ಆ್ಯಪ್, ವೆಬ್‌ಸೈಟ್ ಮಾಡಲಾಗಿದೆ. ಶುಲ್ಕ ನಗರ ಪ್ರದೇಶ ಹಾಗು ಗ್ರಾಮೀಣ ಪ್ರದೇಶಗಳಿಗೆ ಬೇರೆ ಬೇರೆ ಇರಲಿದೆ. ಆ್ಯಪ್ ಮುಖಾಂತರ ಮಾಡಬಹುದಾದ ದೇಶದ ಮೊದಲ ವ್ಯವಸ್ಥೆ ಇದಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಯೋಜನೆಗಾಗಿ ದೇಶದಲ್ಲೇ ಮೊದಲ ಬಾರಿಗೆ ವಿನೂತನ ಆ್ಯಪ್ನ್ನು ನಮ್ಮ ಇಲಾಖೆ ಮಾಡಿದೆ. ಸ್ವಯಂ ಸ್ವಾವಲಂಬಿ ಯೋಜನೆ ಇದು, ಕಂದಾಯ ಇಲಾಖೆಯ ಎಲ್ಲಾ ಕೆಲಸಗಳನ್ನು ಸರಳೀಕರಣ ಮಾಡಲಿದೆ. ಈ ಆ್ಯಪ್ ಮುಖಾಂತರ ಎಲ್ಲವನ್ನು ಫಿಲ್ ಮಾಡಬಹುದು. ಆಧಾರ್ ನಂಬರ್ ಹಾಗೂ ಮೊಬೈಲ್ ನಂಬರ್ ಬಳಸಿ ನಿಮ್ಮ ದಾಖಲೆಗಳನ್ನ ಪಡೆಯಬಹುದು ಎಂದರು.
ಸ್ವಾವಲಂಭಿಯಾಗಿ ಇ ಸ್ಕೆಚ್: ಸ್ವಾವಲಂಬಿ ಅಂದರೇ 11 ಇ ಸ್ಕೆಚ್ ಹಾಗೂ ಪೋಡಿ ವಿಧಾನವನ್ನು ಮಾಡುವುದು. ಪ್ರತಿವರ್ಷ 10 ಲಕ್ಷ ಮಂದಿ ಪೋಡಿಗೆ ಅರ್ಜಿ ಹಾಕುತ್ತಾರೆ. ಆದರೆ ಕ್ಲಿಯರ್ ಆಗುವುದು ಕೇವಲ 4 ಲಕ್ಷದಷ್ಟು ಮಾತ್ರ. ಹೀಗಾಗಿ ಜನರಿಗೆ ಇದರ ಬಗ್ಗೆ ಬೇಸರವಿದೆ, ತಮ್ಮ ಜಮೀನನ್ನು ಪೋಡಿ ಮಾಡಲು, ಅಣ್ಣ ತಮ್ಮಂದಿರು ಭಾಗ ಮಾಡಿಕೊಳ್ಳಲು ಕಷ್ಟವಾಗುತ್ತಿದೆ. ಹೀಗಾಗಿ ಇದಕ್ಕೆ ಪರಿಹಾರವಾಗಿ ಒಂದು ವ್ಯವಸ್ಥೆಯನ್ನ ಮಾಡಿದ್ದೇವೆ ಎಂದು ಸಚಿವರು ಮಾಹಿತಿ ನೀಡಿದರು.
ಮಧ್ಯವರ್ತಿಗಳ ಹಾವಳಿಗೆ ತಡೆ: ಅಧಿಕಾರಿಗಳಿಗೆ ನಿರಂತರ ಟ್ರೈನಿಂಗ್ ಮಾಡಿ ಒಂದು ಆ್ಯಪ್ನ್ನ ಘೋಷಣೆ ಮಾಡಿದ್ದೇವೆ. ಭೂ ಪರಿವರ್ತನೆ, ವಿಭಜನೆ ನಕ್ಷೆ ತಾವೇ ತಯಾರಿಸಿ ಆ್ಯಪ್ನಲ್ಲಿ ಅಪ್ ಲೋಡ್ ಮಾಡಬಹುದು. ಅದಕ್ಕೆ ಕಾನೂನಾತ್ಮಕ ಅನುಮೋದನೆಯನ್ನು ಸಹ ನಾವು ಕೊಡುತ್ತೇವೆ. ಭೂ ಪರಿವರ್ತನಾ ಪೂರ್ವ ನಕ್ಷೆ, 11 ಇ ಪೋಡಿ ವಿಭಜನೆ ನಕ್ಷೆ, ಹೀಗೆ ಹಲವು ಕೆಲಸಗಳನ್ನು ರೈತರೇ ಮಾಡಿಕೊಳ್ಳಬಹುದು. ಸರ್ವೆಯರ್ ಬಂದು ಅಪ್ರೂವಲ್ ಮಾಡಲು ತುಂಬಾ ತಡವಾಗುತ್ತಿತ್ತು. ಆದರೆ ಈಗ ಅವರೇ ಭೂ ಪರಿವರ್ತನೆ ಮಾಡಿಕೊಳ್ಳಬಹುದು. ಇದರಿಂದ ಮಧ್ಯವರ್ತಿಗಳ ಹಾವಳಿಗೆ ತಡೆ ಬೀಳುತ್ತದೆ. ಗೋಮಾಳ, ಖರಾಬು ಭೂಮಿ ಹಂಚಿಕೆಯಲ್ಲಿ ಸಮಸ್ಯೆ ಮೊದಲಿಂದಲೂ ಇದೆ. ಒಂದು ಸರ್ವೆ ನಂಬರಿನ ಗೋಮಾಳ ಭೂಮಿಯಲ್ಲಿ ನೂರಾರು ಜನಕ್ಕೆ ಹಂಚಿಕೆ ಮಾಡಿರುತ್ತಾರೆ. ಇದರಿಂದ ಪೋಡಿ ಮಾಡುವುದು ಸಮಸ್ಯೆ ಆಗುತ್ತಿದೆ. ಇದಕ್ಕೆ ಶೀಘ್ರದಲ್ಲೇ ಪರಿಹಾರವನ್ನು ಕಂಡುಕೊಳ್ಳುತ್ತೇವೆ ಎಂದು ತಿಳಿಸಿದರು.
ಸ್ವಯಂ ಘೋಷಣೆ ಆಧಾರಿತ ಭೂಪರಿವರ್ತನೆಗೆ ಅನುಮತಿ ಕೊಡಲಾಗಿದೆ. ಸ್ವಯಂ ಘೋಷಣೆ ಮೂಲಕ ಕೃಷಿ ಭೂಮಿಯನ್ನು ಕೃಷಿಯೇತರ ಬಳಕೆಗೆ ಭೂಪರಿವರ್ತನೆ ಮಾಡಬಹುದು. ಇದರಿಂದ ರೈತರು ತಮ್ಮ ಜಮೀನನ್ನು ಆರ್ಥಿಕತೆಗೆ ಬಳಸಬಹುದು. ಭೂಪರಿವರ್ತನೆಯೂ ದೀರ್ಘ ಸಮಯ ಹಿಡಿಯಲ್ಲ. ಇದು ಎಸ್ಸಿ, ಎಸ್ಟಿ ಸಮುದಾಯಗಳ ಜಮೀನು, ಸರ್ಕಾರಿ ಜಮೀನುಗಳು, ಕೆರೆ ಕುಂಟೆ, ಕಾಲುವೆ ಜಮೀನಿಗೆ ಅನ್ವಯಿಸಲ್ಲ ಎಂದು ಸಚಿವರು ಇದೇ ವೇಳೆ ಸ್ಪಷ್ಟಪಡಿಸಿದರು.
72 ಗಂಟೆಯಲ್ಲಿ ಮನೆ ಬಾಗಿಲಿಗೆ ಪಿಂಚಣಿ: ನಾಗರಿಕರು ದೂರವಾಣಿ ಕರೆ ಮೂಲಕ ಪಿಂಚಣಿ ಸೌಲಭ್ಯ ಕೋರಿಕೆ ಸಲ್ಲಿಸಬಹುದಾದ ವಿನೂತನ ಯೋಜನೆಗೆ ದೇಶದಲ್ಲಿಯೇ ಪ್ರಥಮ ಬಾರಿಗೆ ಚಾಲನೆ ನೀಡಲಾಗಿದೆ. ರಾಜ್ಯ ಸರ್ಕಾರ ಅಶಕ್ತ ವೃದ್ಧರ ರಕ್ಷಣೆಗಾಗಿ ವೃದ್ಧಾಪ್ಯ ವೇತನ ಹಾಗೂ ಸಂಧ್ಯಾ ಸುರಕ್ಷಾ ಯೋಜನೆ, ಅಂಗವಿಕಲರು, ವಿಧವೆಯರು ಅವಿವಾಹಿತ ಅಥವಾ ವಿಚ್ಛೇದಿತ ಮಹಿಳೆಯರು, ತೃತೀಯ ಲಿಂಗದವರು, ಆಸಿಡ್ ದಾಳಿಗೊಳಗಾದ ಮಹಿಳೆಯರು ಮತ್ತು ಎಂಡೋಸಲ್ಫಾನ್ ಸಂತ್ರಸ್ತರಿಗೆ ಸಾಮಾಜಿಕ ಭದ್ರತೆ ಒದಗಿಸಿ ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ 9 ವಿವಿಧ ಮಾಸಿಕ ಪಿಂಚಣಿ ಯೋಜನೆಗಳು ಅನುಷ್ಠಾನಲ್ಲಿವೆ ಎಂದು ವಿವರಿಸಿದರು.
ರಾಜ್ಯದಲ್ಲಿ ಒಟ್ಟು 73.23 ಲಕ್ಷ ಫಲಾನುಭವಿಗಳಿಗೆ ಮಾಸಿಕ ಪಿಂಚಣಿ ಸೌಲಭ್ಯ ನೀಡಲಾಗುತ್ತಿದೆ. ಪಿಂಚಣಿ ನೀಡಲು 2020-21ನೇ ಸಾಲಿನಲ್ಲಿ ರೂ.7,800 ಕೋಟಿ, ಪ್ರಸಕ್ತ ವರ್ಷ ರೂ. 9,483.51 ಕೋಟಿ ಅನುದಾನ ನೀಡಲಾಗಿದೆ. ಸರ್ಕಾರವು 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ಪಿಂಚಣಿಯನ್ನು ರೂ. 1,000 ರಿಂದ 1,200 ಕ್ಕೆ ಏರಿಸಲಾಗಿದೆ. ವಿಕಲಚೇತನ ಹಾಗೂ ವಿಧವಾ ವೇತನ ಯೋಜನೆಯಡಿ ಮೊತ್ತವನ್ನು ರೂ. 600 ರಿಂದ 800 ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ಸುಮಾರು 59.45 ಲಕ್ಷ ಫಲಾನುಭವಿಗಳಿಗೆ ಉಪಯೋಗವಾಗಿದೆ. ಶೇಕಡಾ 75 ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮನೋವೈಕಲ್ಯತೆಯಿಂದ ಬಳಲುತ್ತಿರುವವರಿಗೆ ಮಾಸಿಕ ಪಿಂಚಣಿ ಮೊತ್ತವನ್ನು ರೂ. 1,400 ರಿಂದ ರೂ. 2,000 ಕ್ಕೆ ಹೆಚ್ಚಿಸಲಾಗಿದೆ. ಸರ್ಕಾರವು ಮನಸ್ವಿನಿ ಯೋಜನೆಯ ಫಲಾನುಭವಿಗಳಿಗೆ ಮಾಸಿಕ ಪಿಂಚಣಿಯನ್ನು ರೂ. 600 ರಿಂದ 800 ಕ್ಕೆ ಹಾಗೂ ಆಸಿಡ್ ದಾಳಿಗೊಳಗಾದ ಮಹಿಳೆಯರಿಗೆ ರೂ. 3,000 ದಿಂದ ರೂ. 10,000 ಕ್ಕೆ ಹೆಚ್ಚಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ಹಣ ಸಂದಾಯ: ಸ್ವಯಂ ಪ್ರೇರಿತ ಪಿಂಚಣಿ ಮಂಜೂರಾತಿ ಅಭಿಯಾನ (ನವೋದಯ ಆಪ್ ಮೂಲಕ) ಅರ್ಹರನ್ನು ಸ್ವಯಂ ಪ್ರೇರಿತವಾಗಿ ಗುರುತಿಸಿ ಅರ್ಜಿರಹಿತ ಪಿಂಚಣಿ ಮಂಜೂರು ಮಾಡುವ ನಿಟ್ಟಿನಲ್ಲಿ “ಮನೆಬಾಗಿಲಿಗೇ ಮಾಸಾಶನ ಕಾರ್ಯಕ್ರವನ್ನು ರಾಜ್ಯದಲ್ಲಿ ಜನವರಿ 2021 ರಲ್ಲಿ ಜಾರಿಗೆ ತರಲಾಗಿದ್ದು, 53 ಸಾವಿರ ಜನರಿಗೆ ಪಿಂಚಣಿ ನೀಡಲಾಗಿದೆ ಎಂದು ಸಚಿವ ಅಶೋಕ್ ತಿಳಿಸಿದರು.
ಸಮಗ್ರ ವಾರ್ಷಿಕ ಪರಿಶೀಲನೆ: ನವೋದಯ ಮೊಬೈಲ್ ಆ್ಯಪ್ ಮೂಲಕ ಪುಸ್ತುತ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಸಮಗ್ರ ವಾರ್ಷಿಕ ಪರಿಶೀಲನಾ ಕಾರ್ಯವನ್ನು ನಡೆಸಲಾಗುತ್ತಿದ್ದು, ಇಲ್ಲಿಯವರೆಗೆ 3.58 ಲಕ್ಷ ಮರಣ/ಅನರ್ಹರನ್ನು ಗುರುತಿಸಿ ಒಟ್ಟು, ವಾರ್ಷಿಕ ರೂ. 430 ಕೋಟಿಗಳನ್ನು ಸರ್ಕಾರದ ಬೊಕ್ಕಸಕ್ಕೆ ಉಳಿತಾಯ ಮಾಡಲಾಗಿದೆ ಎಂದರು.
ಪಿಂಚಣಿ ವಿತರಣೆಗೆ ಇ-ಕಾಮರ್ಸ್: ಬೆಂಗಳೂರಿನ ನಾಗರೀಕರಿಗೆ ವಿವಿಧ ಪಿಂಚಣಿ ಸೌಲಭ್ಯ ತಲುಪಿಸಲು ಇ-ಕಾಮರ್ಸ್ ಮೊರೆ ಹೋಗಲು ಚಿಂತಿಸಲಾಗಿದೆ. ಕಂದಾಯ ಇಲಾಖೆ ಬೆಂಗಳೂರಿನಲ್ಲಿ ಸ್ವಿಗ್ಗಿ, ಡಂಜೋ, ಜೊಮ್ಯಾಟೋ ಸಿಬ್ಬಂದಿ ಮೂಲಕ ಪಿಂಚಣಿ ಸೌಲಭ್ಯ ಮುಟ್ಟಿಸಲು ಪ್ಲಾನ್ ಮಾಡುತ್ತಿದೆ. ಈ ಸಂಬಂಧ ಇ ಕಾಮರ್ಸ್ ಸಂಸ್ಥೆಗಳ ಜತೆ ಮಾತುಕತೆ ನಡೆಸಲಾಗುತ್ತಿದೆ. ಮಾತುಕತೆ ಸಕ್ಸಸ್ ಆದರೆ ಸದ್ಯದಲ್ಲೇ ಸ್ವಿಗ್ಗಿ, ಜೊಮ್ಯಾಟೋ, ಡಂಜೋ ಸಿಬ್ಬಂದಿ ಮೂಲಕ ಮನೆ ಬಾಗಿಲಿಗೆ ಪಿಂಚಣಿ ತಲುಪಿಸಲಾಗುತ್ತದೆ ಎಂದು ತಿಳಿಸಿದರು.
ಹಲೋ, ಕಂದಾಯ ಸಚಿವರೆ ಸಹಾಯ ವಾಣಿ "72 ಗಂಟೆಯಲ್ಲಿ ಮನೆ ಬಾಗಿಲಿಗೆ ಪಿಂಚಣಿ ಆದೇಶ: ಸರ್ಕಾರವು ಇದೀಗ ದೂರವಾಣಿ ಮೂಲಕವೇ ಪಿಂಚಣಿ ಕೋರಿಕೆ ಸ್ವೀಕರಿಸಿ 72 ಗಂಟೆಯಲ್ಲಿ ಪಿಂಚಣಿ ಮಂಜೂರಾತಿ ಮಾಡುವ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ನಾಗರಿಕರು ದೂರವಾಣಿ ಕರೆ ಮೂಲಕ ತಮ್ಮ ಆಧಾರ್ ಸಂಖ್ಯೆ ಒದಗಿಸಿ ಪಿಂಚಣಿ ಸೌಲಭ್ಯ ಕೋರಿಕೆ ಸಲ್ಲಿಸಬಹುದಾಗಿದೆ. ದೂರವಾಣಿ ಮುಖಾಂತರ ಸ್ವೀಕರಿಸಲಾದ ಕೋರಿಕೆ ಮೇರೆಗೆ ಗ್ರಾಮಲೆಕ್ಕಾಧಿಕಾರಿಗಳು ಸದರಿ ಮಾಹಿತಿ ಆಧರಿಸಿ ಅರ್ಜಿದಾರರ ಮನೆಬಾಗಿಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ "ನವೋದಯ" ಮೊಬೈಲ್ ಆ್ಯಪ್ ಮೂಲಕ ಅರ್ಜಿದಾರರ ಮಾಹಿತಿ ನಮೂದಿಸಿಕೊಳ್ಳುತ್ತಾರೆ ಎಂದು ಸಚಿವ ಅಶೋಕ್ ವಿವರಿಸಿದರು.
ಇದನ್ನೂ ಓದಿ: ರಂಜಾನ್ ಹಬ್ಬಕ್ಕೆ ಮೇ 3ರ ಬದಲು ಮೇ 2ರಂದು ಸಾರ್ವತ್ರಿಕ ರಜೆ ಘೋಷಣೆ