ಬೆಂಗಳೂರು: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಿವೃತ್ತ ನ್ಯಾಯಮೂರ್ತಿ, ಮಾಜಿ ರಾಜ್ಯಪಾಲ ಎಂ.ರಾಮಾ ಜೋಯಿಸ್ (89) ಮಂಗಳವಾರ ರಾಜಾಜಿನಗರದ ತಮ್ಮ ನಿವಾಸದಲ್ಲಿ ವಿಧಿವಶರಾಗಿದ್ದಾರೆ.
ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ಉಚ್ಚ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿಗಳಾಗಿ ಕಾರ್ಯನಿರ್ವಹಿಸಿದ್ದ ರಾಮಾ ಜೋಯಿಸ್, ಕರ್ನಾಟಕದಿಂದ ರಾಜ್ಯಸಭಾ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂ ಸೇವಕರಾಗಿದ್ದ ಅವರು, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಹೋರಾಟ ಮಾಡಿ ಜೈಲು ಸೇರಿದ್ದರು. ರಾಮಾ ಜೋಯಿಸರು ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳ ರಾಜ್ಯಪಾಲರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
1931ರಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಜನಿಸಿದ್ದ ರಾಮಾ ಜೋಯಿಸ್, ಶಿವಮೊಗ್ಗದಲ್ಲೇ ಪ್ರಾಥಮಿಕ ಶಿಕ್ಷಣ ಪೂರೈಸಿ ಬಳಿಕ ಬೆಂಗಳೂರಿನಲ್ಲಿ ಕಾನೂನು ಪದವಿಯನ್ನು ಪಡೆದುಕೊಂಡರು. ಸುಪ್ರೀಂಕೋರ್ಟ್ ವಕೀಲರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ರಾಮಾ ಜೋಯಿಸ್ ನಿಧನಕ್ಕೆ ಬಿಜೆಪಿ ಮುಖಂಡರ ಸಂತಾಪ:
ರಾಮಾ ಜೋಯಿಸ್ ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಚಿವ ಸುರೇಶ್ ಕುಮಾರ್ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ.
ಮಾಜಿ ರಾಜ್ಯಪಾಲರು ಮತ್ತು ಹಿರಿಯ ನಿವೃತ್ತ ನ್ಯಾಯಮೂರ್ತಿಗಳೂ ಆಗಿದ್ದ ರಾಮಾ ಜೋಯಿಸ್ ಅವರು, ನಿಧನರಾದ ಸುದ್ದಿ ತಿಳಿದು ನನಗೆ ತುಂಬಾ ಆಘಾತವಾಯಿತು. ಅವರು ನಮ್ಮ ನಾಡಿನ ಜ್ವಲಂತ ಸಮಸ್ಯೆಗಳು ಉದ್ಭವಿಸಿದಾಗ ಗಟ್ಟಿಯಾಗಿ ಧ್ವನಿ ಎತ್ತುತ್ತಿದ್ದರು. ರಾಜ್ಯಪಾಲರಾಗಿ, ಮುಖ್ಯ ನ್ಯಾಯಮೂರ್ತಿಗಳಾಗಿ, ರಾಜ್ಯಸಭಾ ಸದಸ್ಯರಾಗಿ ದಿವಂಗತರು ಸಮಾಜಕ್ಕೆ ಅನನ್ಯ ಸೇವೆ ಸಲ್ಲಿಸಿದ್ದರು. ಅಷ್ಟೇ ಅಲ್ಲ, ನಮ್ಮ ಬಿಜೆಪಿಗೆ ಹಿರಿಯ ಮಾರ್ಗದರ್ಶಕರಾಗಿದ್ದರು. ಅವರ ನಿಧನದಿಂದ ರಾಜ್ಯವು ಶ್ರೇಷ್ಠ ಮೇಧಾವಿಯೊಬ್ಬರನ್ನು ಕಳೆದುಕೊಂಡಿರುವುದು ದುರ್ದೈವದ ಸಂಗತಿ. ದಿವಂಗತರ ಆತ್ಮಕ್ಕೆ ಭಗವಂತನು ಚಿರಶಾಂತಿ ನೀಡಲಿ ಡಿಸಿಎಂ ಲಕ್ಷ್ಮಣ್ ಸವದಿ ಸಂತಾಪ ಸೂಚಿಸಿದ್ದಾರೆ.
ಓದಿ: ಹೊರದೇಶಗಳಲ್ಲಿ ಕೆಲಸ ಕೊಡಿಸುವ ಬಣ್ಣ-ಬಣ್ಣದ ಕನಸು ತೋರಿಸಿ ವಂಚಿಸುತ್ತಿದ್ದ ಆರೋಪಿ ಬಂಧನ
ಸಚಿವ ರಮೇಶ್ ಜಾರಕಿಹೊಳಿ ಕೂಡಾ ಪತ್ರಿಕಾ ಹೇಳಿಕೆ ಮೂಲಕ ಸಂತಾಪ ಸೂಚಿಸಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂ ಸೇವಕರಾಗಿದ್ದ ರಾಮಾ ಜೋಯಿಸ್ ಅವರು, ರಾಜ್ಯಸಭಾ ಸದಸ್ಯರಾಗಿ ಕೆಲಸ ನಿರ್ವಹಿಸಿದ್ದರು. ಇವರ ದಣಿವರಿಯದ ಕೆಲಸವನ್ನು ಮೆಚ್ಚಿ, ಕೇಂದ್ರ ಸರ್ಕಾರವು ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳ ರಾಜ್ಯಪಾಲರನ್ನಾಗಿ ನೇಮಿಸಿತ್ತು. ಇಂತಹ ಧೀಮಂತ ನಾಯಕರನ್ನು ಕಳೆದುಕೊಂಡಿದ್ದು, ದುಃಖದ ಸಂಗತಿಯಾಗಿದೆ ಎಂದು ಜಾರಕಿಹೊಳಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.