ಬೆಂಗಳೂರು: ಈ ರೀತಿ ಜನರ ಮನಸ್ಸುಗಳನ್ನು ಒಡೆಯಬಾರದು. ಇದು ದುರಾದೃಷ್ಟಕರ ಎಂದು ಮುಸ್ಲಿಂ ವ್ಯಾಪಾರಿಗಳಿಗೆ ಹಲವೆಡೆ ವ್ಯಾಪಾರ ನಿಷೇಧಿಸಿರುವ ವಿಚಾರವಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ವಿಷಾದ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಮುಸ್ಲಿಂ ವ್ಯಾಪಾರಸ್ಥರಿಗೆ ಜಾತ್ರೆಗಳಲ್ಲಿ ವ್ಯಾಪಾರ ನಡೆಸಲು ಬಿಡದ ವಿಚಾರವಾಗಿ ಪ್ರತಿಯಿಸುತ್ತಾ, ಎಲ್ಲರನ್ನು ಒಗ್ಗೂಡಿಸುವ ಕೆಲಸ ಮಾಡುತ್ತೇವೆ. ನಾನು ಟಿವಿಯಲ್ಲಿ ಈ ಕುರಿತು ಸುದ್ದಿ ನೋಡಿದ್ದೇನೆ. ಈ ಬಗ್ಗೆ ಪೊಲೀಸ್ ವರದಿ ಕೇಳಿದ್ದೇನೆ. ಶಾಂತಿ ಸುವ್ಯವಸ್ಥೆ ಕದಡದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಹಿಜಾಬ್ ತೀರ್ಪು ವಿರೋಧಿಸಿ ಒಂದು ಕೋಮಿನವರು ಅಂಗಡಿ ಬಂದ್ ಮಾಡಿದ್ದರು. ಆಕ್ಷನ್ ಗೆ ರಿಯಾಕ್ಷನ್ ಎನ್ನುವಂತೆ ಆಗಿದೆ. ಈ ಬಗ್ಗೆ ನಾನು ವರದಿ ಪಡೆಯುತ್ತೇನೆ ಎಂದರು. ಜೇಮ್ಸ್ ಚಿತ್ರಕ್ಕೆ ಬಿಜೆಪಿ ಶಾಸಕರು ಕೆಲವೆಡೆ ಅಡ್ಡಿ ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಜೇಮ್ಸ್ ಚಿತ್ರವೇ ಬೇರೆ ಕಾಶ್ಮೀರ್ ಫೈಲ್ಸ್ ಚಿತ್ರವೇ ಬೇರೆ. ಜೇಮ್ಸ್ ಚಿತ್ರಕ್ಕೆ ಯಾರೂ ವಿರೋಧ ಮಾಡುತ್ತಿಲ್ಲ. ಜನರ ಮನಸ್ಸನ್ನು ಹಾಳು ಮಾಡಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
ಓದಿ : ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡುತ್ತೇವೆ: ವಿಪಕ್ಷ ನಾಯಕ ಸಿದ್ದರಾಮಯ್ಯ