ಬೆಂಗಳೂರು : ಸಂಪುಟದಲ್ಲಿ ಅವಕಾಶ ನೀಡಿದರೆ ಸ್ವಾಗತ ಮಾಡುತ್ತೇವೆ, ಇಲ್ಲದಿದ್ದಲ್ಲಿ ಶಾಸಕರಾಗಿ ಕೆಲಸ ಮಾಡಿಕೊಂಡಿರುತ್ತೇವೆ. ಯಾವ ಕಾರಣಕ್ಕೂ ಸಚಿವ ಸ್ಥಾನಕ್ಕಾಗಿ ಪ್ರತ್ಯೇಕ ಸಭೆ ನಡೆಸಿ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರುವ ಕೆಲಸ ಮಾಡುವುದಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ ರೇಣುಕಾಚಾರ್ಯ ಸ್ಪಷ್ಟಪಡಿಸಿದ್ದಾರೆ.
ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, ಯಾರನ್ನು ಸಂಪುಟದಿಂದ ಕೈ ಬಿಡಬೇಕು, ಯಾರನ್ನು ಹೊಸದಾಗಿ ತೆಗೆದುಕೊಳ್ಳಬೇಕು ಎನ್ನುವುದು ಮುಖ್ಯಮಂತ್ರಿಗಳ ಪರಮಾಧಿಕಾರ. ಸಿಎಂ ಹಾಗೂ ಪಕ್ಷದ ವರಿಷ್ಠರು ಇದನ್ನು ನಿರ್ಧಾರ ಮಾಡಲಿದ್ದಾರೆ. ನಾವು ಹಾದಿ ಬೀದಿಯಲ್ಲಿ ನಿಂತು ನಮ್ಮನ್ನು ಮಂತ್ರಿ ಮಾಡಿ, ನಮ್ಮನ್ನು ಮಂತ್ರಿ ಮಾಡಿ ಎಂದು ಕೇಳುವವರಲ್ಲ ಎಂದರು.
ಸಂಪುಟದಲ್ಲಿ ಅವಕಾಶ ಕೊಟ್ಟರೆ ಸ್ವಾಗತ ಮಾಡಿ ನಮ್ಮ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇವೆ. ಯಾವುದೇ ಇಲಾಖೆ ಕೊಟ್ಟರೂ ಅಲ್ಲಿ ಸರ್ಕಾರದ ಪರವಾದ ಪ್ರತಿನಿಧಿಯಾಗಿ ಸರ್ಕಾರಕ್ಕೆ ಒಳ್ಳೆಯ ಹೆಸರು, ಕೀರ್ತಿ ತರುವ ನಿಟ್ಟಿನಲ್ಲಿ ಕೆಲಸ ಮಾಡಿ ಪಕ್ಷದ ಸಂಘಟನೆಗೆ ಪೂರಕವಾಗಿ ಕೆಲಸ ಮಾಡಲಿದ್ದೇವೆ.
ಆದರೆ, ನಾವು ಸಭೆ ಸೇರಿ ಸಚಿವರನ್ನಾಗಿ ಮಾಡಿ ಎಂದು ಒತ್ತಡ ಹೇರುವ ಯಾವ ಕೆಲಸವನ್ನು ಮಾಡುವುದಿಲ್ಲ. ನಮ್ಮ ಮುಖ್ಯಮಂತ್ರಿಗಳು, ವರಿಷ್ಠರು ಅವಕಾಶ ಕೊಟ್ಟರೆ ಪ್ರಮಾಣವಚನ ಸ್ವೀಕಾರ ಮಾಡುತ್ತೇವೆ. ಇಲ್ಲದೆ ಇದ್ದಲ್ಲಿ ಶಾಸಕರಾಗಿ ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ಕೊಡುತ್ತೇವೆ ಎಂದರು.