ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ಜುಲೈ 1ರಿಂದ ಅನ್ವಯಗೊಳ್ಳುವಂತೆ ಬಾಕಿ ಇರುವ ತುಟ್ಟಿಭತ್ಯೆಯನ್ನು ನಗದು ರೂಪದಲ್ಲಿ ಬಿಡುಗಡೆಗೊಳಿಸುವಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಆದೇಶಿಸಿದ್ದಾರೆ.
ಈ ಸಂಬಂಧ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ ಎಸ್ ಷಡಕ್ಷರಿ ಈ ಬಗ್ಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದ್ದರು. ಪತ್ರದಲ್ಲಿ ಅಖಿಲ ಭಾರತ ಬೆಲೆ ಸೂಚ್ಯಾಂಕವನ್ನಾಧರಿಸಿ ಕೆಂದ್ರ ಸರ್ಕಾರವು ತನ್ನ ನೌಕರರಿಗೆ ತುಟ್ಟಿಭತ್ಯೆಯನ್ನು ಮಂಜೂರು ಮಾಡಿದ ದಿನಾಂಕದಿಂದಲೇ ಪೂರ್ವಾನ್ವಯವಾಗಿ ರಾಜ್ಯ ಸರ್ಕಾರವೂ ಸಹ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಮಂಜೂರು ಮಾಡುವುದು ಸಂಪ್ರದಾಯವಾಗಿರುತ್ತದೆ.
![Release of outstanding dues to State Government employees](https://etvbharatimages.akamaized.net/etvbharat/prod-images/kn-bng-06-cm-order-script-7208083_20072021183410_2007f_1626786250_677.jpg)
ಪ್ರಸ್ತುತ ಕೇಂದ್ರ ಸರ್ಕಾರವು ಅಖಿಲ ಭಾರತ ಬೆಲೆ ಸೂಚ್ಯಾಂಕವನ್ನಾಧರಿಸಿ 2021, ಜುಲೈ 1ರಿಂದ ಪೂರ್ವಾನ್ವಯವಾಗಿ ತನ್ನ ನೌಕರರಿಗೆ ಶೇ.11.00ರಷ್ಟು ತುಟ್ಟಿಭತ್ಯೆಯನ್ನು ಮಂಜೂರು ಮಾಡಿ ಉಲ್ಲೇಖಿತ ಆದೇಶವನ್ನು ಹೊರಡಿಸಿದೆ.
ಆದ್ದರಿಂದ ಪ್ರಸ್ತುತ ಸೂಚ್ಯಾಂಕವನ್ನಾಧರಿಸಿ ರಾಜ್ಯ ಸರ್ಕಾರಿ ನೌಕರರಿಗೆ ಈ ಹಿಂದಿನ ತುಟ್ಟಿಭತ್ಯೆಯಲ್ಲಿ ಬಾಕಿ ಉಳಿದಿರುವ ಭಿನ್ನಾಂಶವನ್ನು ಸೇರ್ಪಡೆ ಮಾಡಿ ಜುಲೈ 1ರಿಂದ ಪೂರ್ವಾನ್ವಯವಾಗಿ ಶೇ. 11.00ರಷ್ಟು ತುಟ್ಟಿಭತ್ಯೆಯನ್ನು ಸಂಪೂರ್ಣ ನಗದು ರೂಪದಲ್ಲಿ ಬಿಡುಗಡೆಗೊಳಿಸಿ ಆದೇಶ ಹೊರಡಿಸಲು ಸಂಬಂಧಪಟ್ಟವರಿಗೆ ಸೂಚನೆ ನೀಡಬೇಕೆಂದು ಮನವಿ ಪತ್ರದಲ್ಲಿ ಕೋರಿದ್ದರು.
ಅದರಂತೆ ಬಾಕಿ ಇರುವ ತುಟ್ಟಿಭತ್ಯೆಯನ್ನು ಬಿಡುಗಡೆಗೊಳಿಸಬೇಕೆಂದು ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.