ಬೆಂಗಳೂರು: ಮಾಜಿ ಮಹಿಳಾ ಕಾರ್ಪೊರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣದಲ್ಲಿ ಕಾಟನ್‌ಪೇಟೆ ಪೊಲೀಸ್ ಠಾಣೆಯ ರೌಡಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಆತನನ್ನು ವಿಚಾರಣೆಗೊಳಪಡಿಸಬೇಕೆಂದು ನಗರ ಪೊಲೀಸ್ ಆಯುಕ್ತರಿಗೆ ಬೆಂಗಳೂರು ದಕ್ಷಿಣ ವಿಭಾಗದ ಬಿಜೆಪಿ ಅಧ್ಯಕ್ಷ ಎನ್.ಆರ್. ರಮೇಶ್ ದೂರು ನೀಡಿದ್ದಾರೆ.
2018ರಲ್ಲಿ ಛಲವಾದಿ ಪಾಳ್ಯ ವಾರ್ಡಿನ ಬಿಜೆಪಿ ಮುಖಂಡರಾಗಿದ್ದ ಕದಿರೇಶ್ ಅವರನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಇದೇ ಜೂ. 24ರಂದು ಕದಿರೇಶ್ ಅವರ ಧರ್ಮಪತ್ನಿ ಬಿಬಿಎಂಪಿ ಮಾಜಿ ಸದಸ್ಯೆಯಾಗಿದ್ದ ರೇಖಾ ಕದಿರೇಶ್ ಅವರನ್ನೂ ಸಹ ಅತ್ಯಂತ ದಾರುಣವಾಗಿ ಹತ್ಯೆ ಮಾಡಲಾಗಿದೆ. ಈ ಎರಡು ಕೊಲೆಗಳಿಗೆ ಕಾಟನ್‌ಪೇಟೆ ಪೊಲೀಸ್ ಠಾಣೆಯ ರೌಡಿ ಆತುಷ್ ಎಂಬಾತ ಕುಮ್ಮಕ್ಕು ನೀಡಿರುವ ಗುಮಾನಿ ಇದೆ. ಈ ಬಗ್ಗೆ ಹಲವು ಬಾರಿ ಸಂಬಂಧಿಸಿದ ಪೊಲೀಸ್ ಅಧಿಕಾರಿಗಳನ್ನು ಒತ್ತಾಯಿಸಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
2015ರ ಬಿಬಿಎಂಪಿ ಚುನಾವಣೆಯಲ್ಲಿ ಇದೇ ಆತುಷ್, ರೇಖಾ ಕದಿರೇಶ್ ಅವರ ವಿರುದ್ಧ ಸೋಲನ್ನು ಅನುಭವಿಸಿದ್ದರು. ಜೊತೆಗೆ ಮುಂದೆ ನಡೆಯಲಿರುವ ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವ ತಯಾರಿ ನಡೆಸುತ್ತಿದ್ದರು. ಈ ಕಾರಣಗಳಿಗಾಗಿಯೇ, ಕದಿರೇಶ್ ಮತ್ತು ರೇಖಾ ಕದಿರೇಶ್ ಹತ್ಯಾ ಪ್ರಕರಣಗಳ ಆರೋಪಿಗಳಿಗೆ ಈ ಆತುಷ್ ಎಂಬಾತ ತನ್ನ ಸ್ವಾರ್ಥಕ್ಕಾಗಿ ಕುಮ್ಮಕ್ಕು ನೀಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಆದರಿಂದ ಆತನನ್ನು ಕರೆಯಿಸಿ ವಿಚಾರಣೆ ನಡೆಸಿ ಕ್ರಮ ತೆಗೆದುಕೊಳ್ಳಬೇಕೆಂದು ಪೊಲೀಸ್ ಆಯುಕ್ತ ಕಮಲ್ ಪಂತ್ಗೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ರೇಖಾ ಕದಿರೇಶ್ ಕೊಲೆ ಪ್ರಕರಣ: ಮೂರು ತಿಂಗಳ ಹಿಂದೆಯೇ ಸಿದ್ಧವಾಗಿತ್ತು ಪ್ಲ್ಯಾನ್