ಬೆಂಗಳೂರು: ಪಿಹೆಚ್ಡಿ ಮತ್ತು ಎಂಫಿಲ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಭತ್ಯೆ ಕಡಿತಗೊಳಿಸಲಾಗಿದೆ ಎಂದು ಮಾಜಿ ಕಾರ್ಪೋರೇಟರ್ ಇಮ್ರಾನ್ ಪಾಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಹೆಚ್ಡಿ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ 2017ರವರೆಗೂ 25 ಸಾವಿರ ರೂ. ಪ್ರೋತ್ಸಾಹಧನ ಹಾಗೂ 10 ಸಾವಿರ ರೂ. ವಾರ್ಷಿಕ ನಿರ್ವಹಣಾ ವೆಚ್ಚವನ್ನು ಸರ್ಕಾರ ನೀಡುತ್ತಿತ್ತು. ಆದರೆ 2017ರ ನಂತರ 25 ಸಾವಿರ ರೂ.ನಿಂದ 8333 ರೂ. ಮಾತ್ರ ನೀಡುತ್ತಿದ್ದಾರೆ ಎಂದು ಹೇಳಿದರು.
ಇದರ ಬಗ್ಗೆ ಹಜ್ ಮತ್ತು ಅಲ್ಪಸಂಖ್ಯಾತ ಇಲಾಖೆಯ ಸಚಿವರನ್ನು ಕೇಳಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಹಲವು ಬಾರಿ ಆಯುಕ್ತರಿಗೆ ಮನವಿ ಮಾಡಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಅಲ್ಲದೆ ಯುಜಿಸಿ ನಿಯಮವನ್ನು ಪಾಲಿಸದಿದ್ದರೆ ಮಂದಿನ ದಿನಗಳಲ್ಲಿ ಜೆಡಿಎಸ್ನಿಂದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.