ಹೊಸಕೋಟೆ(ಬೆಂಗಳೂರು ಗ್ರಾಮಾಂತರ): ಸಿನಿಮೀಯ ಶೈಲಿಯ ರಾಜ್ಯವನ್ನೇ ಬೆಚ್ಚಿಬೀಳಿಸುವಂತಹ ರಕ್ತ ಚಂದನದ ಸ್ಮಗ್ಲಿಂಗ್ ಪ್ರಕರಣ ಬೆಳಕಿಗೆ ಬಂದಿದೆ. ಹೊಸಕೋಟೆಯ ಕಟ್ಟಿಗೇನಹಳ್ಳಿಯಲ್ಲಿ ಟೊಮೆಟೋ ಬಾಕ್ಸ್ ಹಾಕಿ ಅದರ ಕೆಳಗೆ ರಕ್ತಚಂದನಗಳನ್ನಿಟ್ಟು ಟಾಟಾ ಏಸ್ ವಾಹನದಲ್ಲಿ ಕಳ್ಳಸಾಗಣೆ ಮಾಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ವರ್ತೂರು ಮತ್ತು ಹೊಸಕೋಟೆ ಮಾರ್ಗಮಧ್ಯದಲ್ಲಿ ಟಾಟಾಏಸ್ ಗಾಡಿಯನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ.
ಪೊಲೀಸರು ಹಿಂಬಾಲಿಸುವಾಗ ಚಾಲಕ ಅಡ್ಡಾದಿಡ್ಡಿ ವಾಹನವನ್ನು ಓಡಿಸಿ ಎಮ್ಮೆಗೆ ಡಿಕ್ಕಿ ಹೊಡೆದ ಪರಿಣಾಮ ರಕ್ತಚಂದನ ದಂಧೆ ಬಹಿರಂಗಗೊಂಡಿದೆ. ಕೊನೆಗೆ ಹೊಸಕೋಟೆಯ ಕಟ್ಟಿಗೇನಹಳ್ಳಿ ಬಳಿ ವಾಹನ ಮತ್ತು ರಕ್ತ ಚಂದನವನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಎಸ್ಕೇಪ್ ಆಗಿದ್ದಾನೆ. ಹೊಸಕೋಟೆ ಮಾಲೂರು ರಸ್ತೆಯ ಮೂಲಕ ನೆರೆಯ ಆಂಧ್ರದಿಂದ ಸಾಗಿಸಲು ಯತ್ನಿಸಿದ್ದಾರೆ.
ಅರಣ್ಯ ಇಲಾಖೆ ವಿಜಿಲೆನ್ಸ್ ಡಿಸಿಎಫ್ ಗಂಗಾಧರ್ ನೇತೃತ್ವದ ತಂಡ ದಾಳಿ ಮಾಡಿ 600 ಕೆಜಿಯ 28 ರಕ್ತ ಚಂದನ ತುಂಡುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದರ ಮೌಲ್ಯ ಸುಮಾರು 28 ಲಕ್ಷ ಎಂದು ಅಂದಾಜಿಸಲಾಗಿದೆ. ಈ ಪ್ರಕರಣ ಭೇದಿಸಲು ಪೊಲೀಸರು ಸ್ನೀಪರ್ ಡಾಗ್ ಅನ್ನು ಬಳಕೆ ಮಾಡಿದ್ದು, ಅಕ್ರಮ ರಕ್ತಚಂದನ ಸಾಗಣಿಕೆ ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಲಾರಿ ಹೊರಭಾಗದಲ್ಲಿ ಮೂಟೆ ಇಟ್ಟು ಒಳಗಡೆ ಜಾನುವಾರು ಸಾಗಣೆ: ಇಬ್ಬರ ಬಂಧನ