ಮುಂಬೈ: ಬಿ.ಎಸ್. ಯಡಿಯೂರಪ್ಪ ವಿಶ್ವಾಸ ಮತಯಾಚಿಸುವವರೆಗೆ ಪುಣೆಯಲ್ಲಿರುವ ಅತೃಪ್ತ ಶಾಸಕರು ಬೆಂಗಳೂರಿಗೆ ವಾಪಸಾಗುವುದು ಅನುಮಾನ ಎನ್ನಲಾಗಿದೆ. ಇಂದು ವಿಶ್ವಾಸಮತ ಯಾಚನೆಯಲ್ಲಿ ಹೆಚ್.ಡಿ. ಕುಮಾರಸ್ವಾಮಿ ಸೋಲು ಕಾಣುತ್ತಿದ್ದಂತೆ ಅತೃಪ್ತರು ನಿಟ್ಟುಸಿರು ಬಿಟ್ಟಿದ್ದಾರೆ.
ಮುಂಬೈನ ರಿನಾಯ್ಸನ್ಸ್ ಹೊಟೇಲ್ನಿಂದ ಪುಣೆಗೆ ಶಿಫ್ಟ್ ಆಗಿರುವ ಅತೃಪ್ತರು ಅಲ್ಲಿಂದಲೇ ಕಲಾಪವನ್ನು ವೀಕ್ಷಿಸಿದರು. ಕಳೆದ ಎಂಟು ದಿನಗಳಿಂದ ತಮ್ಮ ವಾಸ್ತವ್ಯದ ನಿಗೂಢತೆಯನ್ನು ಕಾಪಾಡಿಕೊಂಡಿದ್ದ ಅತೃಪ್ತರು ಸರ್ಕಾರ ಪತನವಾಗುತ್ತಿದ್ದಂತೆ, ತಾವು ವಾಸ್ತವ್ಯ ಹೂಡಿದ್ದ ಸ್ಥಳವನ್ನು ಬಹಿರಂಗಪಡಿಸಿದರು. ಅತೃಪ್ತರು ನಾಳೆ ಬೆಂಗಳೂರಿಗೆ ಬರಲಿದ್ದಾರೆ ಎಂದು ಹೇಳುತ್ತಿದ್ದರೂ, ಸದ್ಯ ಬೆಂಗಳೂರಿಗೆ ವಾಪಸಾಗುವುದು ಅನುಮಾನ ಎನ್ನಬಹುದು. ಬಿ.ಎಸ್. ಯಡಿಯೂರಪ್ಪ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿ, ವಿಶ್ವಾಸಮತ ಯಾಚನೆ ಸಾಬೀತು ಪಡಿಸುವ ತನಕ ಅತೃಪ್ತರು ತವರಿಗೆ ವಾಪಸಾಗುವುದಿಲ್ಲ ಎಂದು ಹೇಳಲಾಗುತ್ತಿದೆ.
ಮತ್ತೆ ವಿಶ್ವಾಸಮತ ಯಾಚನೆ ಮುನ್ನ ಅತೃಪ್ತ ಶಾಸಕರನ್ನು ದೋಸ್ತಿಗಳು ಮನವೊಲಿಸುವ ಸಾಧ್ಯತೆ ಇರುವ ಹಿನ್ನೆಲೆ ಬೆಂಗಳೂರಿಗೆ ವಾಪಸಾಗುವುದು ಅನುಮಾನ ಎನ್ನಲಾಗುತ್ತಿದೆ. ಈ ಸಂಬಂಧ ಅತೃಪ್ತರು ಪುಣೆ ಹೊಟೇಲ್ನಲ್ಲೇ ಸಭೆ ನಡೆಸಿ ಮುಂದೆ ಏನು ಮಾಡುವುದು ಎಂಬ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಾಳೆಯೇ ವಾಪಸಾಗುವುದೋ, ಅಥವಾ ಹೊಸ ಸರ್ಕಾರ ರಚನೆಯಾಗುವವರೆಗೂ ಪುಣೆ ಅಥವಾ ಮುಂಬೈನಲ್ಲೇ ಇರುವುದೋ ಎಂಬ ಬಗ್ಗೆ ಚರ್ಚೆ ನಡೆಸಲಿದ್ದಾರೆ.