ಬೆಂಗಳೂರು : ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ನಡೆಸುವ ಸಾಮಾನ್ಯ ಪವೇಶ ಪರೀಕ್ಷೆ(ಸಿಇಟಿ) ಮೆರಿಟ್ ಪಟ್ಟಿಗೆ ಈ ಬಾರಿ ಹಳೆಯ ನಿಯಮದಂತೆ ಪಿಯುಸಿ ಅಂಕಗಳು ಸಹ ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಪ್ರಾಧಿಕಾರ ಹೇಳಿದೆ. ಕಳೆದ ವರ್ಷ ಕೋವಿಡ್ ಕಾರಣಕ್ಕೆ ಕೇವಲ ಪರೀಕ್ಷೆಯಲ್ಲಿನ ಸಿಇಟಿ ಅಂಕಗಳನ್ನು ಮಾತ್ರ ಪರಿಗಣಿಸಲಾಗಿತ್ತು.
ಆದರೆ, ಈ ಬಾರಿ ಮತ್ತೆ ಸಿಇಟಿಯಲ್ಲಿ ಪಡೆಯುವ ಅಂಕಗಳು(ಶೇ.50) ಮತ್ತು ದ್ವಿತೀಯ ಪಿಯು ಪರೀಕ್ಷೆಯ ಅಂಕಗಳು(ಶೇ.50) ಸೇರಿ ಎರಡನ್ನು ಪರಿಗಣಿಸಿ ಮೆರಿಟ್ ಲಿಸ್ಟ್ ರೂಪಿಸಲಾಗುವುದು ಎಂದಿದೆ.
ಏಪ್ರಿಲ್ 12ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ : ಅರ್ಜಿ ಸಲ್ಲಿಕೆ ಪ್ರಕ್ರಿಯೆ ಏಪ್ರಿಲ್ 12ರಿಂದ ಆರಂಭವಾಗಲಿದೆ. 2022ರ ಸಿಇಟಿ ಪರೀಕ್ಷೆ ಜೂನ್ 16ರಿಂದ 18ರವರೆಗೆ ನಡೆಸಲು ಉದ್ದೇಶಿಸಲಾಗಿದೆ. ಸಿಇಟಿ ಬಗ್ಗೆ ವಿದ್ಯಾರ್ಥಿಗಳಿಗೆ ಇರುವ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಗಳನ್ನು ಸಹ ಬಿಡುಗಡೆ ಮಾಡಲಿದೆ ಎಂದು ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದಾರೆ.
ಕಳೆದ ವರ್ಷ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ರದ್ದು: ಕಳೆದ ವರ್ಷ ಕೊರೊನಾ ಹಿನ್ನೆಲೆ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯನ್ನು ನಡೆಸದೆಯೇ ನೇರವಾಗಿ ಪಾಸ್ ಮಾಡಲಾಗಿತ್ತು. ಇದರಿಂದ ಕೇವಲ ವಿದ್ಯಾರ್ಥಿಗಳ ಸಿಇಟಿ ಅಂಕಗಳನ್ನು ಮಾತ್ರ ಪರಿಗಣಿಸಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪ್ರಶ್ನೆ ಪತ್ರಿಕೆಯಲ್ಲಿನ ಲೋಪದೋಷ : ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಟಿ ಎಸ್ ನಾಗಾಭರಣ ಒತ್ತಾಯ
ಹಿಂದಿನ ವರ್ಷ ಎಲ್ಲ ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಪಾಸ್ : ಈ ಬಾರಿ ದ್ವಿತೀಯ ಪಿಯು ಪರೀಕ್ಷೆ ಏಪ್ರಿಲ್ 22ರಿಂದ ನಡೆಯುತ್ತದೆ. ಕಳೆದ ವರ್ಷ ಪಿಯು ಪರೀಕ್ಷೆಗೆ ನೋಂದಾಯಿಸಿ ಕೊಂಡಿದ್ದ 6,66,497 ವಿದ್ಯಾರ್ಥಿಗಳ ಪೈಕಿ ತಾಂತ್ರಿಕ ಕಾರಣದಿಂದ 7 ವಿದ್ಯಾರ್ಥಿಗಳ ಫಲಿತಾಂಶವನ್ನು ತಡೆ ಹಿಡಿದು, ಉಳಿದಂತೆ ಎಲ್ಲ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗಿತ್ತು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.