ಬೆಂಗಳೂರು: ನೀವೇನು ಆದರ್ಶ ವ್ಯಕ್ತಿಯಲ್ಲ, ಆದರ್ಶ ಆಡಳಿತವನ್ನೂ ಕೊಟ್ಟಿಲ್ಲ. ರಾಜ್ಯವನ್ನು ಲೂಟಿ ಮಾಡಿದ್ದೀರಿ, ಆಗಾಗ ಕಣ್ಣೀರು ಸುರಿಸುವ ನಾಟಕವನ್ನು ಮಾಡುತ್ತೀರಿ, ಅದನ್ನು ಜನ ನೋಡಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಿರುಗೇಟು ನೀಡಿದ್ದಾರೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನವನ್ನು ರಾಜ್ಯ ಬಿಜೆಪಿ ಕಚೇರಿಯಲ್ಲಿ ಆಚರಿಸಲಾಯಿತು. ಅಟಲ್ ಅವರಿಗೆ ನುಡಿನಮನಗಳನ್ನು ಸಲ್ಲಿಸಿ ದೇಶಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಲಾಯ್ತು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಕುಮಾರಸ್ವಾಮಿಯವರು ಆಗಾಗ ಈ ರೀತಿಯ ಸಿಡಿಬಾಂಬ್‌ಗಳನ್ನು ಹಾಕುತ್ತಿರುತ್ತಾರೆ. ಅನೇಕ ಬಾರಿ ಅಳುತ್ತಾರೆ. ಯಾವಾಗಲೋ ನಗುತ್ತಿರುತ್ತಾರೆ. ಕುಮಾರಸ್ವಾಮಿಯವರು ತಮಗೆ ಯಾವಾಗ ಯಾವಾಗ ಏನೇನು ಹೇಳಬೇಕು ಎಂದು ಅನ್ನಿಸುತ್ತೋ ಆಗೆಲ್ಲಾ ಈ ರೀತಿಯ ಸಂದರ್ಭವನ್ನು ಉಪಯೋಗಿಸಿಕೊಂಡು ಹೇಳಿಕೆ ನೀಡುತ್ತಾರೆ ಎಂದು ಟಾಂಗ್ ನೀಡಿದರು.
ಸಮ್ಮಿಶ್ರ ಸರ್ಕಾರ ರಚನೆ ವೇಳೆ ಯಡಿಯೂರಪ್ಪ ಅವರು ಕುಮಾರಸ್ವಾಮಿ ಮನೆಗೆ ಹೋಗಿರಬಹುದು, ಅದೇನು ದೊಡ್ಡ ವಿಷಯವಲ್ಲ. ಯಡಿಯೂರಪ್ಪನವರಿಗೆ ಕುಮಾರಸ್ವಾಮಿಯವರ ಮನೆಯ ಅಡ್ರೆಸ್ ಗೊತ್ತು. ಕುಮಾರಸ್ವಾಮಿಯವರಿಗೆ ಯಡಿಯೂರಪ್ಪನವರ ಮನೆ ಅಡ್ರೆಸ್ ಗೊತ್ತು ಇದೇನು ದೊಡ್ಡ ವಿಷಯವಲ್ಲ. ಆದರೆ ನೀವು ಯಡಿಯೂರಪ್ಪನವರಿಗೆ ಕ್ಷಮಿಸಲಾರದಷ್ಟು ಅನ್ಯಾಯ ಮಾಡಿದ್ದೀರಿ. ಮೈತ್ರಿ ಸರ್ಕಾರದ ವೇಳೆ 20 ತಿಂಗಳ ಅಧಿಕಾರ ಅನುಭವಿಸಿ ನಂತರ ಅಧಿಕಾರ ಹಸ್ತಾಂತರ ಮಾಡಲಿಲ್ಲ. ಆದರ್ಶ ರಾಜಕಾರಣಿಯಂತೆ ಮಾತನಾಡುವ ನೀವು ಅಂದು ಏಕೆ ಅಧಿಕಾರ ಕೊಡಲಿಲ್ಲ? ಹಾಗಾಗಿ ನಿಮ್ಮ ಅಡ್ರೆಸ್ ನಮಗೆ ಚೆನ್ನಾಗಿ ಗೊತ್ತಿದೆ. ಜೊತೆಗೆ ನಿಮ್ಮ ವ್ಯಕ್ತಿತ್ವವೂ ಬಹಳ ಚೆನ್ನಾಗಿ ಗೊತ್ತಿದೆ. ವಿಧಾನಸೌಧ ಮರೆತು ತಾಜ್ ಹೋಟೆಲ್ನಲ್ಲಿ ರೂಮ್ ಮಾಡಿಕೊಂಡು ಆಡಳಿತ ನಡೆಸಿದ ಮುಖ್ಯಮಂತ್ರಿ ಇದ್ದರೆ ಅದು ಕುಮಾರಸ್ವಾಮಿ ಮಾತ್ರ ಎಂದು ಟೀಕಿಸಿದರು.
ಕುಮಾರಸ್ವಾಮಿ ಮತ್ತು ಅವರ ತಂದೆಗೆ ಈ ರಾಜ್ಯದ ಜನ ತಕ್ಕ ಪಾಠ ಕಲಿಸಿದ್ದಾರೆ. ಮಂಡ್ಯ ಉಪಚುನಾವಣೆಯಲ್ಲೂ ಕೂಡ ಜನ ಪಾಠ ಕಲಿಸಿದ್ದಾರೆ. ಹಾಗಾಗಿ ಕುಮಾರಸ್ವಾಮಿ ರಾಜಕಾರಣಿಯಂತೆ ನುಡಿಮುತ್ತುಗಳನ್ನು ನುಡಿಯುವ ಅವಶ್ಯಕತೆ ಇಲ್ಲ ಎಂದರು. ದೇವೇಗೌಡರು ಯಾವ ಪಾರ್ಟಿ ಜೊತೆ ಬೇಕಾದರೂ ಹೋಗಲು ಬಯಸುತ್ತಾರೆ. ಕಾರಣ ಅವರಿಗೆ ಅಧಿಕಾರ ಬೇಕು. ಕಾಂಗ್ರೆಸ್ ಜೊತೆಯಲ್ಲಿ ಹೋಗುತ್ತಾರೆ, ಕಮ್ಯುನಿಸ್ಟರ ಜೊತೆ ಹೋಗಲು ಸಿದ್ಧರಿದ್ದಾರೆ, ಬಿಜೆಪಿ ಜೊತೆಯೂ ಹೋಗಲೂ ಅವರು ಸಿದ್ಧ. ಅವರಿಗೆ ಅಧಿಕಾರದಲ್ಲಿ ಇರಬೇಕು ಎನ್ನುವ ಗುರಿ ಮಾತ್ರ ಇದೆ. ಮಾರ್ಗ ಯಾವುದಾದರೂ ಸರಿ ಒಟ್ಟಿನಲ್ಲಿ ಅಧಿಕಾರದಲ್ಲಿ ಇರಬೇಕು ಎನ್ನುವ ಚಾಣಾಕ್ಷ ರಾಜಕಾರಣಿ ದೇವೇಗೌಡರು ಎಂದು ವ್ಯಂಗ್ಯವಾಡಿದರು.