ಬೆಂಗಳೂರು: ತಿರುಪತಿಯಂತಹ ಪುಣ್ಯ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲಲು ಕೇಂದ್ರದ ಬಿಜೆಪಿ ನಾಯಕರು ಟಿಕೆಟ್ ನೀಡಿದ್ದಾರೆ. ಇದು ದೇವರು ನನಗೆ ಕೊಟ್ಟಿರುವ ವರ ಎಂದು ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಪ್ರತಿಕ್ರಿಯಿಸಿದ್ದಾರೆ.
ತಿರುಪತಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಸಾಕಷ್ಟು ಹೆಸರುಗಳು ಚರ್ಚೆಯಲ್ಲಿದ್ದವು. ಆದರೆ ನನಗೆ ಟಿಕೆಟ್ ಸಿಗಲಿದೆ ಎನ್ನುವ ನಿರೀಕ್ಷೆ ಇರಲಿಲ್ಲ. ಇದು ನನಗೆ ಸರ್ಪ್ರೈಸ್ ಆಗಿದೆ. ಬಿಜೆಪಿ ನಾಯಕರು ನನ್ನ ಮೇಲೆ ನಂಬಿಕೆ ಇಟ್ಟು ಟಿಕೆಟ್ ನೀಡಿದ್ದಾರೆ. ಹೈಕಮಾಂಡ್ಗೆ ನಾನು ಅಭಾರಿಯಾಗಿದ್ದೇನೆ. ಪಕ್ಷದ ಗೆಲುವಿಗಾಗಿ ಹಗಲಿರುಳು ಶ್ರಮಿಸುತ್ತೇನೆ ಎಂದರು.
ಸದ್ಯಕ್ಕೆ ತಿರುಪತಿಗೆ ತೆರಳಿರುವ ರತ್ನಪ್ರಭಾ, ತಿರುಪತಿ ತಿಮ್ಮಪ್ಪನ ದರ್ಶನ ಮಾಡಿ ನಂತರ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಂತರ ರಾಜ್ಯಕ್ಕೆ ಭೇಟಿ ನೀಡುವುದಾಗಿ ಮಾಹಿತಿ ನೀಡಿದ್ದಾರೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದ ಕೆ.ರತ್ನಪ್ರಭಾ ಸೇವೆಯಿಂದ ನಿವೃತ್ತಿಯಾದ ನಂತರ ಅಧಿಕೃತವಾಗಿ ಬಿ.ಎಸ್.ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು.
ಸಿಎಂ ಶುಭ ಹಾರೈಕೆ:
ಇನ್ನು ತಿರುಪತಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಟಿಕೆಟ್ ಸಿಕ್ಕ ಮಾಹಿತಿಯನ್ನು ಸಿಎಂ ಯಡಿಯೂರಪ್ಪನವರ ಜೊತೆ ರತ್ನಪ್ರಭಾ ಹಂಚಿಕೊಂಡಿದ್ದಾರೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗಾಗಿ ಆಂಧ್ರಕ್ಕೆ ತೆರಳುತ್ತಿದ್ದು, ಮರಳಿ ಬಂದ ನಂತರ ಭೇಟಿಯಾಗುವುದಾಗಿ ತಿಳಿಸಿದ್ದಾರೆ. ವಿಷಯ ತಿಳಿದ ಸಿಎಂ ಸಂತಸ ವ್ಯಕ್ತಪಡಿಸಿದ್ದು, ಅಭ್ಯರ್ಥಿ ರತ್ನಪ್ರಭಾಗೆ ಶುಭ ಕೋರಿದ್ದಾರೆ.