ಬೆಂಗಳೂರು: ವಲಸೆ ಕಾರ್ಮಿಕ ಯುವತಿಯರು ಮತ್ತು ಮಹಿಳೆಯರ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿರುವ ಆರೋಪ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ. ಅತ್ಯಾಚಾರಿಗಳ ವಿರುದ್ಧ ಕೆಂಗೇರಿ ಹಾಗೂ ಕುಂಬಳಗೋಡು ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.
ನೂರ್ ಇಸ್ಲಾಂ ಅನ್ಸಾರಿ ಹಾಗೂ ಸುರೇಶ್ ಗೌರ್ ದುಷ್ಕೃತ್ಯವೆಸಗಿರುವ ಆರೋಪಿಗಳು. ಕೆಂಗೇರಿ ಹಾಗೂ ಕುಂಬಳಗೋಡು ಠಾಣಾ ವ್ಯಾಪ್ತಿಯಲ್ಲಿರುವ ಕೆಮಿಕಲ್ ಪ್ರಾಡೆಕ್ಟ್ ವೊಂದರಲ್ಲಿ ಆರೋಪಿಗಳು ಕೆಲಸ ಮಾಡುತ್ತಿದ್ದು, ಈ ವೇಳೆ ಢಮರು ಎಂಬ ಏಜೆಂಟ್ವೊಬ್ಬರನ್ನು ಪರಿಚಯ ಮಾಡಿಕೊಂಡು ಜಾರ್ಖಂಡ್ನಲ್ಲಿನ ಬಡ ಕುಟುಂಬದವರನ್ನೇ ಟಾರ್ಗೆಟ್ ಮಾಡಿದ್ದರು. ತಿಂಗಳಿಗೆ 9 ಸಾವಿರ ರೂ. ಸಿಗುತ್ತೆ ಎಂದು ಕೆಲಸ ಕೊಡಿಸುವುದಾಗಿ ನಂಬಿಸಿದ್ದರು. ಏಜೆಂಟ್ ಕೂಡ ಮೂಲತಃ ಜಾರ್ಖಂಡ್ನವನೇ ಆಗಿರುವ ಕಾರಣ ಆತನ ಮಾತು ನಂಬಿ ಜಾರ್ಖಂಡ್ನಿಂದ ಬೆಂಗಳೂರಿಗೆ ಯುವತಿಯರು ಬಂದಿದ್ದರು.
ಈ ವೇಳೆ ಸ್ವಲ್ಪ ದಿನ ಕೆಲಸ ಮಾಡಿಸಿ, ಸರಿಯಾಗಿ ಹಣ ಕೊಡದೆ ಮೊದಲು ಓರ್ವ ಯುವತಿಯನ್ನು ಪಾಪಿಗಳು ಕೂಡಿ ಹಾಕಿ ಆಕೆ ಮೇಲೆ ಅತ್ಯಾಚಾರವೆಸಗಿದ್ದಾರೆ. ಅಷ್ಟೇ ಅಲ್ಲದೆ ಯುವತಿ ಎಲ್ಲಿಗೂ ಹೋಗದಂತೆ ಕೂಡಿ ಹಾಕಿ, ನಿರಂತರವಾಗಿ ತಮ್ಮ ಕಾಮತೃಷೆ ತೀರಿಸಿಕೊಂಡಿದ್ದಾರೆ. ಅಲ್ಲದೆ, ಈ ವಿಷಯವನ್ನು ಯಾರಿಗಾದರು ಹೇಳಿದ್ರೆ ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದಾರೆ ಎನ್ನಲಾಗ್ತಿದೆ.
ಸದ್ಯ ಕೊರೊನಾ ಹಿನ್ನೆಲೆ ಇತ್ತೀಚೆಗೆ ಯುವತಿ ಬಳಿ ಆರೋಪಿಗಳು ಬಾರದಿರುವುದನ್ನು ಗಮನಿಸಿ, ಅಲ್ಲಿಂದ ಓಡಿ ಬಂದು ನಂತರ ತಮಗೆ ಪರಿಚಯ ಇರುವವರನ್ನು ಭೇಟಿ ಮಾಡಿದ್ದಾಳೆ. ಅಲ್ಲದೆ, ಅಲ್ಲಿ ನಡೆದ ಘಟನೆ ಕುರಿತು ವಿವರಿಸಿ, ದೂರು ನೀಡಿದ್ದಾಳೆ. ದೂರಿನಲ್ಲಿ ತನ್ನ ಜೊತೆ ಬಂದ ಹಲವಾರು ಯುವತಿಯರಿಗೆ, ಮಹಿಳೆಯರಿಗೂ ಅನ್ಯಾಯ ಆಗಿದೆ ಎಂದಿದ್ದಾಳೆ. ಸದ್ಯ ಸಂತ್ರಸ್ತೆಯ ದೂರಿನ ಆಧಾರದ ಮೇರೆಗೆ ಎರಡು ಠಾಣೆಗಳಲ್ಲಿ ಎಫ್ಐಆರ್ ದಾಖಲಾಗಿದ್ದು, ಕಾರ್ಮಿಕರನ್ನು ಕರೆದುಕೊಂಡು ಬಂದ ಏಜೆಂಟ್ ಹಾಗೂ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.