ಬೆಂಗಳೂರು : ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಶ್ರೀ ಅವರನ್ನು ರಾಮಕಥಾ ಗಾಯಕಿ ಮೇಲಿನ ಅತ್ಯಾಚಾರ ಆರೋಪ ಪ್ರಕರಣದಿಂದ ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ವಿಚಾರಣಾ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರ ಹಾಗೂ ಪ್ರಕರಣದ ಸಂತ್ರಸ್ತೆ ರಾಮಕಥಾ ಗಾಯಕಿ ಸಲ್ಲಿಸಿದ್ದ ಎರಡು ಪ್ರತ್ಯೇಕ ಕ್ರಿಮಿನಲ್ ಮರು ಪರಿಶೀಲನಾ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾ.ವಿ. ಶ್ರೀಷಾನಂದ ಅವರಿದ್ದ ಪೀಠ ಬುಧವಾರ ಪ್ರಕಟಿಸಿದೆ. ತೀರ್ಪಿನಲ್ಲಿ ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಮಧ್ಯಪ್ರವೇಶಿಸುವ ಯಾವುದೇ ಸೂಕ್ತ ಕಾರಣ ಇಲ್ಲವೆಂದು ಅಭಿಪ್ರಾಯಪಟ್ಟು ಅರ್ಜಿಗಳನ್ನು ವಜಾಗೊಳಿಸಿದೆ.
ಪ್ರಕರಣದ ಹಿನ್ನೆಲೆ: ರಾಮಕಥಾ ಗಾಯಕಿ 2014ರ ಆಗಸ್ಟ್ 17ರಂದು ದೂರು ಸಲ್ಲಿಸಿ, ರಾಘವೇಶ್ವರ ಸ್ವಾಮೀಜಿ ತನ್ನ ಮೇಲೆ ಹಲವು ವರ್ಷಗಳಿಂದಲೂ ಅತ್ಯಾಚಾರ ಎಸಗಿದ್ದಾರೆ. ಸ್ವಾಮೀಜಿಯಿಂದ ತಾನು ಒಟ್ಟು 169 ಬಾರಿ ಅತ್ಯಾಚಾರಕ್ಕೆ ಒಳಗಾಗಿದ್ದೇನೆ ಎಂದು ದೂರು ಸಲ್ಲಿಸಿದ್ದರು. ದೂರಿನ ತನಿಖೆ ನಡೆಸಿದ್ದ ಸಿಐಡಿ ತನಿಖಾಧಿಕಾರಿಗಳು ಸ್ವಾಮೀಜಿ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ್ದ ಬೆಂಗಳೂರಿನ 54ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಸ್ವಾಮೀಜಿ ವಿರುದ್ಧದ ಅತ್ಯಾಚಾರ ಆರೋಪ ಕೈಬಿಟ್ಟು 2016ರ ಮಾರ್ಚ್ 31ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರದ ಪರವಾಗಿ ಸಿಐಡಿ ತನಿಖಾಧಿಕಾರಿಗಳು ಹೈಕೋರ್ಟ್‌ಗೆ ಕ್ರಿಮಿನಲ್ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಇದೇ ವೇಳೆ ಸಂತ್ರಸ್ತೆ ಕೂಡ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ನಗದು ರಹಿತವಾಗಿ ವಿದ್ಯಾರ್ಥಿ ವೇತನ ಪಾವತಿಹೆ ರಾಜ್ಯ ಸರ್ಕಾರದ ಡಿಜಿಟಲ್ ಪ್ಲಾನ್