ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಬಂಡಾಯದ ಚಟುವಟಿಕೆ ಬಹಿರಂಗಗೊಂಡ ಬೆನ್ನಲ್ಲೇ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಲ್ಲಿ ಬದಲಾವಣೆ ತಂದು ರಮೇಶ್ ಜಾರಕಿಹೊಳಿಗೆ ಜವಾಬ್ದಾರಿ ನೀಡಿ ಆದೇಶಿಸಲಾಗಿದೆ.
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಪಡೆಯುವಲ್ಲಿ ಕಡೆಗೂ ಬೆಳಗಾವಿ ಸಾಹುಕಾರ ರಮೇಶ್ ಜಾರಕಿಹೊಳಿ ಯಶಸ್ವಿಯಾಗಿದ್ದಾರೆ. ಬೆಳಗಾವಿಗೆ ರಮೇಶ್ ಜಾರಕಿಹೊಳಿ ಹಾಗೂ ಮಾಧುಸ್ವಾಮಿ ಹೆಚ್ಚುವರಿಯಾಗಿ ಜವಾಬ್ದಾರಿ ಹೊತ್ತಿದ್ದ ಹಾಸನಕ್ಕೆ ಗೋಪಾಲಯ್ಯ ಅವರನ್ನು ಜಿಲ್ಲಾ ಉಸ್ತುವಾರಿಯನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ.
ಈ ಮೊದಲು ಜಗದೀಶ್ ಶೆಟ್ಟರ್ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಲಕ್ಷ್ಮಣ ಸವದಿ ಹಾಗೂ ರಮೇಶ್ ಜಾರಕಿಹೊಳಿ ನಡುವೆ ಜಿಲ್ಲಾ ಉಸ್ತುವಾರಿಗಾಗಿ ಪೈಪೋಟಿ ನಡೆದಿತ್ತು. ಇದೀಗ ರಮೇಶ್ ಜಾರಕಿಹೊಳಿಗೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸ್ಥಾನ ನೀಡಲಾಗಿದೆ.
ಉಮೇಶ್ ಕತ್ತಿ ಕೂಡಾ ಬೆಳಗಾವಿ ಜಿಲ್ಲಾ ಉಸ್ತುವಾರಿ ಮೇಲೆ ಕಣ್ಣಿಟ್ಟಿದ್ದರು. ಸಚಿವ ಸ್ಥಾನ ಪಡೆದು ಬೆಳಗಾವಿ ಜಿಲ್ಲಾ ಉಸ್ತುವಾರಿ ಕನಸು ಕಂಡಿದ್ದ ಉಮೇಶ್ ಕತ್ತಿಗೆ ಸಿಎಂ ಟಾಂಗ್ ನೀಡಿದ್ದಾರೆ. ಇತ್ತೀಚೆಗೆ ರಾಜ್ಯ ಬಿಜೆಪಿಯಲ್ಲಿ ನಡೆದ ಭಿನ್ನಮತೀಯ ಸಭೆ ಹಿನ್ನೆಲೆಯಲ್ಲಿ ಸಿಎಂ ತೆಗೆದುಕೊಂಡ ನಿರ್ಧಾರ ಇದಾಗಿದೆ ಎನ್ನಲಾಗಿದೆ.