ಬೆಂಗಳೂರು: ಪ್ರತಿಯೊಬ್ಬ ವ್ಯಕ್ತಿಗೂ ಇರುವುದು ಒಂದೇ ಜೀವನ. ಈ ನಾಲ್ಕು ದಿನದಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವವರು ಕೆಲವೇ ಮಂದಿ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಅಂತಹವರ ಸಾಲಿಗೆ ಸೇರುತ್ತಾರೆ ಈ ಮಹನ್ ವ್ಯಕ್ತಿ.
ಪ್ರೊ.ರಮೇಶ್‌ಬಾಬು ತಮ್ಮ ವೃತ್ತಿ ಬದುಕಿನಿಂದ ರಿಟೈರ್ಮೆಂಟ್ ಪಡೆದಿದ್ದರೆಯೇ ಹೊರತು ಸಾಧನೆ ಮಾಡುವ ಕೆಲಸಕ್ಕಲ್ಲ. ಮೂಲತಃ ಬೆಂಗಳೂರಿನ ಕೊಡಿಗೇಹಳ್ಳಿ ಸಮೀಪದಲ್ಲಿರುವ ಟಾಟಾ ನಗರದಲ್ಲಿ ವಾಸವಿದ್ದು, ವೃತ್ತಿಯಲ್ಲಿ ವಿಜ್ಞಾನಿಯಾಗಿರುವ ಇವರು ಪಿಹೆಚ್ಡಿ ಟಾಟಾ ಇನ್ಸ್ಟಿಟ್ಯೂಟ್ನಲ್ಲಿ ಕೆಲಸ ಮಾಡಿ ಸದ್ಯಕ್ಕೆ ನಿವೃತ್ತಿ ಹೊಂದಿದ್ದಾರೆ. ಆದರೆ, ಸುಮ್ಮನೆ ಕೂರುವ ಹವ್ಯಾಸ ಇರದ ರಮೇಶ್‌ಬಾಬು, ವಿವಿಧ ಕ್ಷೇತ್ರಗಳಲ್ಲಿ ರೆಕಾರ್ಡ್ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
1993ನೇ ಇಸ್ವಿಯಲ್ಲಿ ಶುರುವಾದ ಇವರ ವಿಶ್ವ ದಾಖಲೆ ಇಂದಿಗೂ ಮುಂದುವರೆದಿದೆ. ವಿವಿಧ ಕ್ಷೇತ್ರಗಳಲ್ಲಿ 71 ವಿಶ್ವ ದಾಖಲೆ ಮತ್ತು 9 ರಾಷ್ಟ್ರೀಯ ದಾಖಲೆಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಇಂದು ಕೂಡ ರಮೇಶ್ ಬಾಬು ಮತ್ತೊಂದು ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ.
ಸಾಮಾನ್ಯವಾಗಿ 7-8 ಅಡಿ ಇರೋ ಸ್ಕಿಪಿಂಗ್ ರೋಪ್ನಲ್ಲಿ ಸ್ಕಿಪಿಂಗ್ ಮಾಡೋದು ಗೊತ್ತಿದೆ. ಆದರೆ, ಇವರು ಬರೋಬ್ಬರಿ 34 ಅಡಿ ಉದ್ದದ ಸ್ಕಿಪಿಂಗ್ ರೋಪ್ನಲ್ಲಿ ಕೇವಲ 30 ಸೆಕೆಂಡ್‌ನಲ್ಲಿ 32 ಸ್ಕಿಪ್ ಮಾಡಿ ರೆಕಾರ್ಡ್ ಮಾಡಿದ್ದಾರೆ. ಈ ಹಿಂದೆ ಇಬ್ಬರು ಜಪಾನಿಯರು 30 ಸೆಕೆಂಡ್‌ನಲ್ಲಿ 28 ಸ್ಕಿಪ್ ಮಾಡಿದರು. ಈಗ ಜಪಾನಿಯರ ದಾಖಲೆಯನ್ನು ರಮೇಶ್ ಬಾಬು ಬ್ರೇಕ್ ಮಾಡಿದ್ದಾರೆ. ಮುಂದಿನ ದಿನದಲ್ಲಿ ದಾಖಲೆಯ ಸೆಂಚುರಿ ಭಾರಿಸುವ ಕನಸು ಹೊಂದಿದ್ದಾರೆ. ವಯಸ್ಸು ಆಯ್ತು ಅಂದರೆ ಸಾಕು ಮನೆಯಲ್ಲೇ ವಿಶ್ರಾಂತಿ ಪಡೆಯುವ ಈ ಸಮಯದಲ್ಲಿ ಇವರ ಸಾಧನೆಯ ಬದುಕು ಯುವ ಜನತೆಗೆ ಸ್ಪೂರ್ತಿ ನೀಡಿದೆ. ಇವರ ಜೀವನೋತ್ಸಾಹ ಎಲ್ಲರಿಗೂ ಮಾದರಿಯಾಗಲಿ ಅನ್ನೋದೆ ನಮ್ಮ ಆಶಯ.