ಬೆಂಗಳೂರು : ವಿಶ್ವ ಹಿಂದೂ ಪರಿಷತ್ ನಾಯಕರು ಮಂಗಳೂರಿನಲ್ಲಿ ತ್ರಿಶೂಲ ಹಂಚಿಕೆ ಮಾಡಿರುವುದು ತಪ್ಪಲ್ಲ. ಆದರೆ, ಅದರ ದುರ್ಬಳಕೆ ಮಾಡದಿದ್ದರೆ ಸಾಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನಮ್ಮ ಹಿಂದೂ ಸಂಸ್ಕೃತಿಯಲ್ಲಿ ತ್ರಿಶೂಲಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಇಂದು ತ್ರಿಶೂಲವನ್ನು ಹಂಚಲಾಗಿದೆ. ಅವುಗಳನ್ನು ದೇವರ ಮನೆಯಲ್ಲಿ ಇಟ್ಟು ಪೂಜೆ ಮಾಡಲಿ. ಇತರೆ ಕೆಲಸಕ್ಕೆ ಬಳಸುವುದು ಬೇಡ ಎಂದರು.
ಸರ್ಕಾರ ಸಂಘ ಪರಿವಾರದ ನಿಯಂತ್ರಣದಲ್ಲಿದೆ
ಬಿಜೆಪಿಯಲ್ಲಿ ಸಂಘ ಪರಿವಾರದ್ದೇ ಅಂತಿಮ ನಿರ್ಧಾರ. ಅಡ್ವಾಣಿ ಅವರು ಪಾಕಿಸ್ತಾನಕ್ಕೆ ಹೋಗಿ ಜಿನ್ನಾ ಅವರನ್ನು ಜಾತ್ಯಾತೀತ ನಾಯಕ ಎಂದು ಹೇಳಿದ ತಕ್ಷಣವೇ ಅವರನ್ನು ಅಧಿಕಾರದಿಂದ ಕೆಳಗಿಳಿಸಿದರು. ಅಲ್ಲಿ ಸಂಘ ಪರಿವಾರ ಹೇಳಿದಂತೆ ಪ್ರಧಾನಮಂತ್ರಿ, ಕೇಂದ್ರ ಮಂತ್ರಿಗಳು ಹಾಗೂ ಬೇರೆ ರಾಜ್ಯಗಳ ಸಿಎಂ ಕೇಳಬೇಕು. ಇಲ್ಲದಿದ್ದರೆ ಅವರನ್ನು ಅಧಿಕಾರದಿಂದ ಕೆಳಗಿಳಿಸಿ, ಅವರಿಗೆ ಬೆಲೆ ಇಲ್ಲವಾಗುತ್ತದೆ. ಹೀಗಾಗಿ, ಇಡೀ ಸರ್ಕಾರವೇ ಸಂಘ ಪರಿವಾರದ ನಿಯಂತ್ರಣದಲ್ಲಿದೆ ಎಂದು ವಿವರಿಸಿದರು.
ಪರ್ಸೆಂಟೇಜ್ ರಾಜಕಾರಣ
ನಮ್ಮ ನಾಯಕರಾಗಲಿ, ಬೇರೆಯವರಾಗಲಿ ಲೋಕಾ ರೂಢಿಯಲ್ಲಿ ಮಾತನಾಡಿದರೆ ಅದಕ್ಕೆ ಬೆಲೆ ಕೊಡುವ ಅಗತ್ಯವಿಲ್ಲ. ಯಡಿಯೂರಪ್ಪ ಅವರ ವಿರುದ್ಧ ಯತ್ನಾಳ್, ವಿಶ್ವನಾಥ್ ಹಾಗೂ ಇತರೆ ನಾಯಕರು ಅಧಿಕೃತವಾಗಿ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ.
ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ದೊಡ್ಡ ಉದ್ಯಮಿಗಳಿಗೆ 7.5 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಆದರೆ, ರೈತರ ಸಾಲ ಮನ್ನಾ ಮಾಡಿ ಎಂದರೆ ಮಾಡಿಲ್ಲ. ಯಾವುದೇ ಲಾಭ ಇಲ್ಲದೆ ಕೇಂದ್ರ ಸರ್ಕಾರ ಸಾಲ ಮನ್ನಾ ಮಾಡಿದ್ದಾರಾ? ಎಂದು ಜನ ಮಾತನಾಡುತ್ತಿದ್ದಾರೆ.
ಸಲೀಂ ಹಾಗೂ ಉಗ್ರಪ್ಪ ಅವರು ಮಾತನಾಡಿಕೊಂಡಿರುವುದಕ್ಕೆ ಯಾವುದೇ ಆಧಾರವಿಲ್ಲ. ಇದರಿಂದ ಪಕ್ಷಕ್ಕೆ ಮುಜುಗರ ಆಗಿದೆ. ಆದರೆ, ಅದಕ್ಕೆ ಹೆಚ್ಚು ಮಹತ್ವ ಕೊಡುವುದು ಬೇಡ. ಮೋದಿ ಅವರು ಬಂದು ಶೇ.10 ಸರ್ಕಾರ ಎಂದಿದ್ದರು. ಆಗ ನಾನು ಮೋದಿ ಅವರು ಸಿಎಂ ಆಗಿದ್ದಾಗ ಮಾಡಿದ್ದನ್ನು ಸಿದ್ದರಾಮಯ್ಯ ಅವರಿಗೆ ಹೇಳುತ್ತಿದ್ದಾರೆ ಎಂದು ಹೇಳಿದ್ದೆ. ಈಗ ರಾಜ್ಯದಲ್ಲಿ ಎಷ್ಟು ಪರ್ಸೆಂಟೇಜ್ ಆಗಿದೆ? ಎಂದು ಪ್ರಶ್ನಿಸಿದರು.
ಊಹಾಪೋಹಗಳ ಆರೋಪ ಯಾರನ್ನೂ ಬಿಟ್ಟಿಲ್ಲ
ಎಸ್.ನಿಜಲಿಂಗಪ್ಪ ಅವರಂತಹ ದಕ್ಷ, ಪ್ರಾಮಾಣಿಕ ನಾಯಕರ ಮೇಲು ಈ ರೀತಿ ಸುಳ್ಳು, ಅಕ್ರಮ ಆರೋಪ ಕೇಳಿ ಬಂದಿತ್ತು. ರಾಜಾಜಿನಗರದಲ್ಲಿ ನೋಡಿದ್ದೆಲ್ಲವನ್ನು ನಿಜಲಿಂಗಪ್ಪ ಅವರದ್ದೇ ನಿವೇಶನ ಎಂದು ಹೇಳುತ್ತಿದ್ದರು. ಆದರೆ, ಅವರ ಬಳಿ ಬೆಂಗಳೂರಿನಲ್ಲಿ ಒಂದು 30-40 ನಿವೇಶನ ಇರಲಿಲ್ಲ.
ಹೀಗಾಗಿ, ಗಾಳಿ ಮಾತಿನ ಚರ್ಚೆಗೆ ನಾವು ಮಹತ್ವ ನೀಡಬಾರದು. ನಮ್ಮ ಪಕ್ಷದಲ್ಲಿ ಪರ್ಸೆಂಟೇಜ್ ಪದ್ಧತಿ ಇಲ್ಲ. ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ಯಾರ ವಿರುದ್ಧವಾದರೂ ಆರೋಪ ಇತ್ತಾ?. ನಮ್ಮ ಸರ್ಕಾರದಲ್ಲಿ 0 ಪರ್ಸೆಂಟ್ ಇತ್ತು. ಈಗ ಬಿಜೆಪಿ ಸರ್ಕಾರದಲ್ಲಿ 20 ಪರ್ಸೆಂಟ್ ಆಗಿರಬಹುದು. ಸಲೀಂ ಅವರು 12 ಪರ್ಸೆಂಟ್ ಬಗ್ಗೆ ಮಾತನಾಡಿರುವುದು ಶುದ್ಧ ಸುಳ್ಳು ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಹೆಚ್ಚಿನ ಮತಗಳಿಂದ ಗೆಲ್ಲುವ ವಿಶ್ವಾಸ
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮಾತನಾಡಿ, ಹಾನಗಲ್ ಉಪಚುನಾವಣೆ ಉಸ್ತುವಾರಿ ವಹಿಸಿಕೊಂಡು ಕಳೆದ ಒಂದು ವಾರದಿಂದ ಸ್ಥಳೀಯವಾಗಿ ಸಭೆ, ಸಂಘಟನೆ ಮಾಡುತ್ತಿದ್ದೇನೆ. ಆಂತರಿಕ ಸಭೆಯಲ್ಲಿ ಹಾನಗಲ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಅವರು ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲುವ ವಿಶ್ವಾಸ ಇದೆ.
ಅ. 27ರವರೆಗೂ ಚುನಾವಣಾ ಪ್ರಚಾರ
ನಾಳೆ ಮತ್ತು ನಾಡಿದ್ದು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ 18ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹಾನಗಲ್ಗೆ ಭೇಟಿ ನೀಡುತ್ತಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಂದೀಪ್ ಸಿಂಗ್ ಸುರ್ಜೇವಾಲಾ ಅವರು ಅ.19ರಂದು ಸಿಂದಗಿಯಲ್ಲಿ ಹಾಗೂ 20ರಂದು ಹಾನಗಲ್ಗೆ ಆಗಮಿಸಿ ಭಾಷಣ ಮಾಡಲಿದ್ದಾರೆ. ಹೀಗೆ 27ರವರೆಗೂ ನಿರಂತರವಾಗಿ ಚುನಾವಣಾ ಪ್ರಚಾರ ನಡೆಯಲಿದೆ ಎಂದರು.
ಜನ ಕಾಂಗ್ರೆಸ್ಗೆ ಆಶೀರ್ವಾದ ಮಾಡಲಿದ್ದಾರೆ
ಬಿಜೆಪಿ ಸರ್ಕಾರದಿಂದ ಜನ ಭ್ರಮನಿರಸನರಾಗಿದ್ದು, ಬದಲಾವಣೆ ಬಯಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವೈಫಲ್ಯ ಈ ಚುನಾವಣೆಯಲ್ಲಿ ಪ್ರಮುಖವಾಗಿ ಚರ್ಚೆಗೆ ಬರಲಿದೆ. ಜನ ಕಾಂಗ್ರೆಸ್ ಅಭ್ಯರ್ಥಿಗಳನ್ನು ಅತ್ಯಂತ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಿಸುವ ವಿಶ್ವಾಸವಿದೆ.
ನಾವು ಬಿಜೆಪಿಗೆ ಯಾಕೆ ಮತ ಹಾಕಬೇಕು? ಎಂದು ಬಿಜೆಪಿ ನಾಯಕ ಹಾಗೂ ಕಾರ್ಯಕರ್ತರಿಗೆ ರಾಜ್ಯದ ಜನ ಪ್ರಶ್ನೆ ಮಾಡುತ್ತಿದ್ದಾರೆ. 55 ರೂ.ಇದ್ದ ಪೆಟ್ರೋಲ್ 108 ರೂ., 50 ರೂ. ಇದ್ದ ಡೀಸೆಲ್ 100 ರೂ. ಆಗಿದೆ ಇದಕ್ಕೆ ನಿಮಗೆ ಮತ ಹಾಕಬೇಕಾ? ಕಪ್ಪು ಹಣ ತಂದು ಪ್ರತಿಯೊಂದು ಖಾತೆಗೂ ₹15 ಲಕ್ಷ ಹಾಕುತ್ತೇವೆ ಎಂದು ಸುಳ್ಳು ಹೇಳಿದ್ದಕ್ಕಾ? ರಾಜ್ಯಕ್ಕೆ ಬರಬೇಕಾಗಿದ್ದ ಹಣ ತರದಿರುವುದಕ್ಕಾ? ಯಾವುದಕ್ಕೆ ಮತ ಹಾಕಬೇಕು? ಎಂದು ಪ್ರಶ್ನಿಸುತ್ತಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬಂದರೆ ಸ್ವರ್ಗ ತೋರಿಸುತ್ತೇವೆ ಎಂದಿದ್ದರು. ಅವರು ಸ್ವರ್ಗ ತೋರಲಿಲ್ಲ, ನರಕ ತೋರಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ರಾಜ್ಯದಲ್ಲಿ 3 ಲಕ್ಷಕ್ಕೂ ಹೆಚ್ಚು ಜನ ಸತ್ತಿದ್ದು, ಸರ್ಕಾರ 37 ಸಾವಿರ ಎಂದು ಸುಳ್ಳು ಹೇಳಿದೆ. ಹೀಗಾಗಿ ಮತ ಕೇಳಲು ಬಿಜೆಪಿ ನೈತಿಕತೆ ಕಳೆದುಕೊಂಡಿದೆ. ಹೀಗಾಗಿ ಜನ ಕಾಂಗ್ರೆಸ್ ಗೆ ಆಶೀರ್ವಾದ ಮಾಡಲಿದ್ದಾರೆ ಎಂದು ಹೇಳಿದರು.
ಎರಡು ಕ್ಷೇತ್ರಗಳಲ್ಲಿ ನಾವು ಗೆಲ್ಲುವ ವಿಶ್ವಾಸವಿದೆ
ನಾಲ್ವರು ಸಚಿವರು ಕಳೆದ ತಿಂಗಳು ಜನಾಶೀರ್ವಾದ ಯಾತ್ರೆ ಮಾಡಿದ್ದರು. ಅವರು ರಾಜ್ಯಕ್ಕೆ ಮಾಡಿರುವ ಅನ್ಯಾಯಕ್ಕೆ ಕ್ಷಮೆ ಕೋರುವ ಯಾತ್ರೆ ಮಾಡಬೇಕಿತ್ತು. ಜನ ಇಂದು ಬಿಜೆಪಿ ವಿರುದ್ಧ ಆಕ್ರೋಶ ಯಾತ್ರೆ ಮಾಡಲಿದ್ದಾರೆ. ಬೆಲೆ ಏರಿಕೆ, ಭ್ರಷ್ಟಾಚಾರ, ಸರ್ಕಾರದ ವೈಫಲ್ಯಗಳಿಂದಾಗಿ ಜನ ಕಾಂಗ್ರೆಸ್ಗೆ ಮತ ಹಾಕಲಿದ್ದಾರೆ. ಈ ಎರಡು ಕ್ಷೇತ್ರಗಳಲ್ಲಿ ನಾವು ಗೆಲ್ಲುವ ವಿಶ್ವಾಸವಿದೆ.
ಬಿಜೆಪಿ ಶಾಸಕರುಗಳೇ ತಮ್ಮದು 30 ಪರ್ಸೆಂಟ್ ಸರ್ಕಾರ ಎಂದು ಮಾಧ್ಯಮಗಳ ಮುಂದೆ ಹೇಳುತ್ತಿದ್ದಾರೆ. ಈ ಬಗ್ಗೆ ಬಿಜೆಪಿ ಉತ್ತರ ನೀಡಬೇಕು. ಬಿಜೆಪಿ ಭ್ರಷ್ಟಾಚಾರ ಇಂದು ಎಲ್ಲರ ಮನೆ ಮಾತಾಗಿದೆ. ಯಡಿಯೂರಪ್ಪ ಅವರು ಕಣ್ಣೀರು ಹಾಕಿದ್ದು ಯಾಕೆ? ಅವರ ಮೇಲೆ ಭ್ರಷ್ಟಾಚಾರ ಆರೋಪ ಬಂದಿದ್ದಕ್ಕೆ.
ಅವರನ್ನು ಆ ಸ್ಥಾನದಿಂದ ತೆಗೆದು ಹಾಕಿದರೋ? ಅಥವಾ ಹಿರಿಯರನ್ನು ಕಸದ ಬುಟ್ಟಿಗೆ ಎಸೆಯುವ ಸಂಸ್ಕೃತಿಯನ್ನು ಮುಂದುವರಿಸಿದ್ದಾರೋ?. ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ನಾಯಕರು ಉತ್ತರಿಸಬೇಕು ಎಂದು ಸಲೀಂ ಅಹ್ಮದ್ ಆಗ್ರಹಿಸಿದ್ದಾರೆ.