ಬೆಂಗಳೂರು: ರಾಜ್ಯಸಭೆ ಚುನಾವಣಾ ಬಿಜೆಪಿ ಅಭ್ಯರ್ಥಿಗಳಾದ ನಟ ಜಗ್ಗೇಶ್ ಹಾಗೂ ಲೆಹರ್ ಸಿಂಗ್ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ವಿಧಾನಸೌಧದಲ್ಲಿ ಚುನಾವಣಾಧಿಕಾರಿ ಎಂ.ಕೆ.ವಿಶಾಲಾಕ್ಷಿಗೆ ತಮ್ಮ ನಾಮಪತ್ರ ಸಲ್ಲಿಸಿದರು. ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವರಾದ ಮಾಧುಸ್ವಾಮಿ, ಆರ್.ಅಶೋಕ್ ಉಪಸ್ಥಿತರಿದ್ದರು.
ಇದೇ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವೆ ನಿರ್ಮಲ ಸೀತಾರಾಮನ್, ನಟ ಜಗ್ಗೇಶ್, ಲೆಹರ್ ಸಿಂಗ್ ಮೂವರು ಅಭ್ಯರ್ಥಿಗಳ ಹೆಸರನ್ನು ಪಕ್ಷ ಘೋಷಣೆ ಮಾಡಿದೆ. ಇಂದು ಮೂವರೂ ನಾಮಪತ್ರ ಸಲ್ಲಿಸಿದ್ದಾರೆ. ಮೂರು ಸ್ಥಾನದಲ್ಲೂ ಬಿಜೆಪಿ ಗೆಲ್ಲಲಿದೆ. ಜೂನ್ 10ನೇ ತಾರೀಕು ಎಲ್ಲವೂ ಗೊತ್ತಾಗಲಿದೆ ಎಂದು ತಿಳಿಸಿದರು.
ಆರ್. ಅಶೋಕ್ ಮಾತನಾಡಿ, 2008 ರಲ್ಲಿ ಜಗ್ಗೇಶ್ ನನ್ನ ಚೇಂಬರ್ಗೆ ಬಂದು ಕಾಂಗ್ರೆಸ್ನಲ್ಲಿ ಇರಲು ಸಾಧ್ಯವಿಲ್ಲ, ಅಲ್ಲಿ ಹಿಂದೂ ವಿರೋಧಿ ವಾತಾವರಣ ಇದೆ ಈ ಕಾರಣಕ್ಕಾಗಿ ಬಿಜೆಪಿ ಬರುತ್ತೇನೆ ಎಂದು ಸ್ವಇಚ್ಛೆಯಿಂದ ಬಿಜೆಪಿಗೆ ಬಂದಿದ್ದರು. ಯಾವುದೇ ಅಧಿಕಾರದ ಆಸೆ ಇಲ್ಲದೇ ಬಂದಿದ್ದರು. ಎಂಎಲ್ಸಿ ಹಾಗೂ ಕೆಎಸ್ಆರ್ಟಿಸಿ ಉಪಾಧ್ಯಕ್ಷರಾದರು. ಮತ್ತೆ ಎಂಎಲ್ಸಿ ಚುನಾವಣೆಗೆ ಅವರ ಹೆಸರು ಉಲ್ಲೇಖ ಮಾಡಿದ್ದೆವು. ಅವರಿಗೆ ಲೋಕಸಭೆ ಸದಸ್ಯ ಆಗಬೇಕು ಎಂಬ ಆಸೆ ಇತ್ತು. ಇವಾಗ ಆರು ವರ್ಷದ ಎಂಪಿಯಾಗಲಿದ್ದಾರೆ ಎಂದರು.
ಬಳಿಕ ಮಾತನಾಡಿದ ನಟ ಜಗ್ಗೇಶ್, ಪಕ್ಷಕ್ಕೆ ನಾನು ಆಭಾರಿಯಾಗಿದ್ದೇನೆ. ಸಿಎಂಗೆ, ಪಕ್ಷದ ಅಧ್ಯಕ್ಷರಿಗೆ, ಶಾಸಕರಿಗೆ, ಸಂಘದ ಪ್ರಮುಖರಿಗೆ ನಾನು ಆಭಾರಿಯಾಗಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ: ತಂಬಾಕು ವ್ಯಸನದಿಂದ 6 ಸೆಕೆಂಡಿಗೆ ಒಬ್ಬ ವ್ಯಕ್ತಿ ಬಲಿ: ಚೈನ್ ಸ್ಮೋಕರ್ ಆಗ್ತಿದ್ದರಾ ಹೆಣ್ಮಕ್ಕಳು?