ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ನಾಮಪತ್ರ ಸಲ್ಲಿಕೆ ಕೇಂದ್ರ ಸಂಪೂರ್ಣ ಸಜ್ಜಾಗಿದೆ.
ರಾಜರಾಜೇಶ್ವರಿ ನಗರ ಬಿಬಿಎಂಪಿ ಅಪರ ಆಯುಕ್ತರ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಕಚೇರಿಯನ್ನು ಸ್ಥಾಪಿಸಲಾಗಿದೆ. ಬಿಜೆಪಿ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಮಧ್ಯಾಹ್ನದೊಳಗೆ ನಾಮಪತ್ರ ಸಲ್ಲಿಸಲಿದ್ದು, ಜೆಡಿಎಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಏಕಕಾಲಕ್ಕೆ ಆಗಮಿಸುವ ಸಾಧ್ಯತೆಯಿದೆ.
ನಾಮಪತ್ರ ಸಲ್ಲಿಕೆ ಕೇಂದ್ರದಲ್ಲಿ ವಿಶೇಷ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಐವತ್ತಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಮಾವಣೆಗೊಂಡು ಭದ್ರತೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಶಾಸಕರಾಗಿದ್ದ ಮುನಿರತ್ನ ರಾಜೀನಾಮೆಯಿಂದ ತೆರವಾಗಿದ್ದ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದ್ದು, ಮುನಿರತ್ನ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ಸಿಂದ ಸುಮಾ ಹನುಮಂತರಾಯಪ್ಪ ಹಾಗೂ ಜೆಡಿಎಸ್ನಿಂದ ಕೃಷ್ಣಮೂರ್ತಿ ಕಣದಲ್ಲಿದ್ದಾರೆ.
ನಾಮಪತ್ರ ಸಲ್ಲಿಕೆ ಕೇಂದ್ರದಿಂದ 500 ಮೀಟರ್ ದೂರದಲ್ಲಿಯೇ ಬ್ಯಾರಿಕೇಡ್ ಅಳವಡಿಸಲಾಗಿದ್ದು, ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮುನಿರತ್ನ ನಾಮಪತ್ರ ಸಲ್ಲಿಕೆ ವೇಳೆ ಉಪಸ್ಥಿತರಿರುತ್ತಾರೆ. ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ನಾಮಪತ್ರ ಸಲ್ಲಿಕೆ ಸಂದರ್ಭ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಉಪಸ್ಥಿತರಿರುತ್ತಾರೆ. 11:45ಕ್ಕೆ ಕುಸುಮಾ ಹನುಮಂತರಾಯಪ್ಪ ನಾಮಪತ್ರ ಸಲ್ಲಿಸಲಿದ್ದು, ಇವರ ಜೊತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇರಲಿದ್ದಾರೆ.
ಕಾಂಗ್ರೆಸ್ ನಾಯಕರು ಈಗಾಗಲೇ ರಾಜರಾಜೇಶ್ವರಿನಗರದ ಬಿಜಿಎಸ್ ಗ್ಲೋಬಲ್ ಕಾಲೇಜಿನಲ್ಲಿ ಸಮಾವೇಶಗೊಂಡಿದ್ದಾರೆ. 12.30 ರಿಂದ ರಾಹುಕಾಲ ಆರಂಭವಾಗುವ ಹಿನ್ನೆಲೆ, ಮೂವರು ಅಭ್ಯರ್ಥಿಗಳು ಇದಕ್ಕೆ ಮುನ್ನವೇ ನಾಮಪತ್ರ ಸಲ್ಲಿಕೆ ಕಾರ್ಯ ಪೂರ್ಣಗೊಳಿಸಲಿದ್ದಾರೆ ಎಂಬ ಮಾಹಿತಿ ಇದೆ.