ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಕೊರೊನಾ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಯಶಸ್ವಿಯಾಗಿ ನಡೆಯಿತು. ಬೆಳಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಯಿತು. ಪ್ರತಿಯೊಂದು ಮತಗಟ್ಟೆಗೆ ಓರ್ವ ಆರೋಗ್ಯಾಧಿಕಾರಿಯನ್ನು ಮತ್ತು ಆಶಾ ಕಾರ್ಯಕರ್ತೆಯರನ್ನು ನೇಮಕ ಮಾಡಲಾಗಿತ್ತು.
ಮತಗಟ್ಟೆಯ ಮುಂದೆ ಸಾಮಾಜಿಕ ಅಂತರ ಕಾಪಾಡಲು ಮಾರ್ಕಿಂಗ್ ಹಾಗೂ ಮತದಾರರು ಮಾಸ್ಕ್ ಧರಿಸಿರುವುದನ್ನು ಖಚಿತಪಡಿಸಿಕೊಂಡು ಸ್ಯಾನಿಟೈಸರ್ ಹಾಕಿ, ಬಲಗೈಗೆ ಗ್ಲೌಸ್ ಕೊಡಲಾಗಿತ್ತು. ಹಲವೆಡೆ ಗ್ಲೌಸ್ಗಳನ್ನು ಮತಗಟ್ಟೆಯಿಂದ ಹೊರಗೆ ಹೋಗುವ ಮೊದಲೇ ಡಸ್ಟ್ ಬಿನ್ಗೆ ಹಾಕಲು ತಿಳಿಸಲಾಯಿತು. ಒಂದೆರಡು ಕಡೆ ಮಾತ್ರ ರಸ್ತೆ ಬದಿಗಳಲ್ಲಿ ಗ್ಲೌಸ್ ಎಸೆದದ್ದು ಕಂಡು ಬಂತು.
ಅಂಚೆ ಮತದಾನ
ಒಟ್ಟು 388 ಹಿರಿಯ ಮತದಾರರು ಹಾಗೂ 22 ವಿಶೇಷ ಚೇತನ ಮತದಾರರು ಪೋಸ್ಟಲ್ ಬ್ಯಾಲೆಟ್ ಮೂಲಕ ಮತ ಚಲಾಯಿಸಿದ್ದರು. ಆದ್ರೆ ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೂ ವಯಸ್ಸಾದವರು ಬಂದಿದ್ದು, ಬಿಬಿಎಂಪಿ ಹಿರಿಯ ಮತದಾರರನ್ನು ಪೋಸ್ಟಲ್ ವೋಟಿಂಗ್ ಮಾಡಿಸುವಲ್ಲಿ ವಿಫಲವಾಯಿತು.
ನಾಲ್ವರು ಕೋವಿಡ್ ಪಾಸಿಟಿವ್ ರೋಗಿಗಳಿಂದ ಮತದಾನ
ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದ ಪೀಣ್ಯ, ಲಗ್ಗೆರೆ, ಯಶವಂತಪುರ ಹಾಗೂ ಆರ್.ಆರ್. ನಗರ ವಾರ್ಡ್ಗಳ ನಾಲ್ಕು ಬೂತ್ಗಳಲ್ಲಿ ನಾಲ್ವರು ಕೋವಿಡ್ ಸೋಂಕಿತರು ಸಂಜೆ 5ರಿಂದ 6 ಗಂಟೆಯ ಒಳಗೆ ಬಂದು ಮತದಾನ ಮಾಡಿದರು. ಆಂಬುಲೆನ್ಸ್ ಮೂಲಕ ಪಿಪಿಇ ಕಿಟ್ ಧರಿಸಿ ಬಂದು ಮತ ಚಲಾಯಿಸಿದರು. ಸಿಬ್ಬಂದಿಗೂ ಪಿಪಿಇ ಕಿಟ್ ನೀಡಲಾಗಿತ್ತು.
ಸೋಂಕಿತರ ಮತದಾನದ ಬಳಿಕ ಮತಗಟ್ಟೆಗಳಿಗೆ ಸ್ಯಾನಿಟೈಸ್ ಮಾಡಲಾಯಿತು. ಅಲ್ಲದೆ ಮತದಾನ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿದ ಬಳಿದ ಎಲ್ಲಾ ಮತ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡಲಾಯಿತು.
ಸಾಮಾಜಿಕ ಅಂತರದ ಕೊರತೆ
ಕೆಲವು ಮತಗಟ್ಟೆಗಳಲ್ಲಿ ಸಾಮಾಜಿಕ ಅಂತರ ಮಾಯವಾಗಿತ್ತು. ಇದರಿಂದ ಅಸಮಾಧಾನಗೊಂಡ ಹಿರಿಯ ಮತದಾರ ಪ್ರಭಾಕರ್ ಹಾಗೂ ಇತರರು, ಅಂತರ ಕಾಪಾಡಿಕೊಂಡು ಜಾಗ್ರತೆ ವಹಿಸಬೇಕು ಎಂದರು. ಇನ್ನೊಂದೆಡೆ ಮತಗಟ್ಟೆಗಳ ನೂರು ಮೀಟರ್ ದೂರದಲ್ಲಿದ್ದ ಪಕ್ಷಗಳ ಏಜೆಂಟ್ಗಳಿದ್ದ ಜಾಗದಲ್ಲಿ ಹೆಚ್ಚಿನ ಜನ ಗುಂಪುಗೂಡಿದ್ದರು. ಒಟ್ಟಿನಲ್ಲಿ ಸಣ್ಣಪುಟ್ಟ ಸಮಸ್ಯೆಗಳೊಂದಿಗೆ ಮತದಾನ ಶಾಂತಿಯುತವಾಗಿ ನಡೆಯಿತು.