ಬೆಂಗಳೂರು : ಸರಗಳ್ಳತನ ಮಾಡಿ 6 ವರ್ಷ ಜೈಲುಶಿಕ್ಷೆ ಅನುಭವಿಸಿ ಮತ್ತೆ ಕಳ್ಳತನಕ್ಕೆ ಇಳಿದಿದ್ದ 6 ಅಂತಾರಾಜ್ಯ ಕಳ್ಳರನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.
ಉತ್ತರಪ್ರದೇಶದ ಸುಭಾಷ್ ಕುಮಾರ್, ಪಂಜಾಬ್‌ನ ಸಂಜಯ್, ಅರ್ಜುನ್ ಸಿಂಗ್, ರಾಕೇಶ್, ಸೋನು ಕುಮಾರ್ ಹಾಗೂ ರಾಜಸ್ತಾನದ ಚಗನ್‌ಲಾಲ್ ಡಿ ಮಾಲಿ ಬಂಧಿತ ಆರೋಪಿಗಳು. ಬಂಧಿತರೆಲ್ಲರೂ 2014ರಲ್ಲಿ ತಮಿಳುನಾಡಿನ 15 ಕಡೆ ಸರಗಳ್ಳತನ ಮಾಡಿ, 6 ವರ್ಷ ಜೈಲುಶಿಕ್ಷೆ ಅನುಭವಿಸಿ ಇತ್ತೀಚೆಗೆ ಹೊರ ಬಂದಿದ್ದರು. ಜೈಲಿನಿಂದ ಹೊರಬಂದ ಬಳಿಕ ಚಗನ್ ತನ್ನದೇ ಗುಂಪು ಕಟ್ಟಿಕೊಂಡಿದ್ದ. ಈ ತಂಡ ಬೆಂಗಳೂರಿನಲ್ಲಿ ಸರಗಳ್ಳತನ ಮಾಡುವ ಉದ್ದೇಶದಿಂದ ತಮಿಳುನಾಡಿನಿಂದ ಯಲಹಂಕಾಗೆ ಬಂದಿತ್ತು. ಯಲಹಂಕದಲ್ಲಿ 5 ಕಡೆ ಸರಗಳ್ಳತನ ಮಾಡಿ, ಶಿಕ್ಷೆ ಅನುಭವಿಸಿದ್ದರು.
ಇಷ್ಟಾಗಿದ್ದರೂ ಆರೋಪಿಗಳು ತಮ್ಮ ಕಸುಬನ್ನು ಬಿಟ್ಟಿರಲಿಲ್ಲ. ಕಾಮಾಕ್ಷಿಪಾಳ್ಯ, ರಾಜಾಜಿನಗರ, ಮಾದನಾಯಕನಹಳ್ಳಿ, ಬಾಗಲಗುಂಟೆ ಹೀಗೆ ಸಾಕಷ್ಟು ಕಡೆ ಸರಗಳ್ಳತನ ಮಾಡಿದ್ದಾರೆ. ಸರಗಳ್ಳತನದ ಜೊತೆಗೆ ಬೈಕ್ ಕಳ್ಳತತವನ್ನೂ ಮಾಡಿದ್ದಾರೆ. ಸದ್ಯ, ಆರೋಪಿಗಳು ರಾಜಾಜಿನಗರಕ್ಕೆ ಬಂದು ಕಳ್ಳತನಕ್ಕೆ ಯತ್ನಿಸಿರುವ ವೇಳೆ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ. ಬಂಧಿತರಲ್ಲಿ ಓರ್ವ ಪೊಲೀಸರಿಗೆ ಆಯುಧದಿಂದ ಇರಿಯಲು ಮುಂದಾಗಿದ್ದ. ಆತನ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿ, ಒಟ್ಟು ಆರು ಮಂದಿಯನ್ನು ಬಂಧಿಸಲಾಗಿದೆ.
ಆರೋಪಿಗಳಿಂದ 20 ಲಕ್ಷ ರೂ. ಬೆಲೆಬಾಳುವ 386 ಗ್ರಾಂ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ 2 ದ್ವಿಚಕ್ರ ವಾಹನ, 1 ನಾಲ್ಕು ಚಕ್ರವಾಹನ ವಶಪಡಿಸಿಕೊಂಡಿದ್ದಾರೆ.