ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯ ಪರಿಣಾಮ ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಮುಂದಿನ ನಾಲ್ಕು ದಿನಗಳ ಕಾಲ ಮುಂದುವರಿಯಲಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಇಂದು ವ್ಯಾಪಕ ಮಳೆ ಸುರಿಯಲಿದೆ. ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ಕೊಡಗು, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಮಳೆ ಹೆಚ್ಚಾಗುವ ನಿರೀಕ್ಷೆಯಿದೆ.
ಬೆಂಗಳೂರು ಮಳೆ ಅಪ್ಡೇಟ್: ಸಿಲಿಕಾನ್ ಸಿಟಿಯಲ್ಲಿ ಸತತ 4ನೇ ದಿನವಾದ ಬುಧವಾರವೂ ಮಳೆಯ ಆರ್ಭಟ ಮುಂದುವರೆದಿತ್ತು. ಗಾಳಿ-ಮಳೆಯ ಅರ್ಭಟಕ್ಕೆ ವಿವಿಧೆಡೆ ಮರದ ಕೊಂಬೆಗಳು ಮುರಿದು ಬಿದ್ದು, ವಾಹನ ಸಂಚಾರಕ್ಕೆ ಅಡಚಣೆಯುಂಟಾಯಿತು. ಜನ ಕೆಲಸ ಮುಗಿಸಿಕೊಂಡು ಮನೆ ಸೇರುವ ಹೊತ್ತಿಗೆ ಶುರುವಾದ ಮಳೆ ಸುಮಾರು ಒಂದು ತಾಸು ಸುರಿಯಿತು. ಡಬಲ್ ರೋಡ್, ಶಾಂತಿನಗರ, ಮೆಜೆಸ್ಟಿಕ್ಗೆ ಸೇರುವ ರಸ್ತೆಗಳು, ಶಿವಾನಂದ ವೃತ್ತ ಸೇರಿ ಹಲವು ಜಂಕ್ಷನ್‌ಗಳಲ್ಲಿ ನೀರು ತುಂಬಿದ್ದರಿಂದ ವಾಹನ ಸಂಚಾರ ನಿಧಾನ ಗತಿಯಲ್ಲಿತ್ತು.
ಬಸವೇಶ್ವರ ನಗರದ ಕಿರ್ಲೋಸ್ಕರ್ ಕಾಲೋನಿ, ಜಯನಗರ 37ನೇ ಕ್ರಾಸ್, ಭವಾನಿ ನಗರದಲ್ಲಿ ಮರದ ರೆಂಬೆಗಳು ಬಿದ್ದಿದ್ದು, ವಾಹನ ಸಂಚಾರಕ್ಕೆ ತುಸು ವ್ಯತ್ಯಯ ಉಂಟಾಯಿತು. ಕೆಲವೇ ಹೊತ್ತಿನಲ್ಲಿ ಬಿಬಿಎಂಪಿ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ತೆರವುಗೊಳಿಸಿದರು. ಬೆಂಗಳೂರು ಹೃದಯ ಭಾಗದಲ್ಲಿ ಮಳೆಯ ಅಬ್ಬರ ಕಡಿಮೆ ಇದ್ದು, ಬೊಮ್ಮನಹಳ್ಳಿ ಮತ್ತು ರಾಜರಾಜೇಶ್ವರಿ ನಗರದ ಸುತ್ತಲಿನ ಪ್ರದೇಶಗಳಲ್ಲಿ ಹೆಚ್ಚಿತ್ತು.
ಇದನ್ನೂ ಓದಿ: ಬಿಟ್ಟು ಹೋದ ಪತ್ನಿ, ಕೈ ಕೊಡುವ ಕರೆಂಟ್; ಕುಡಿದ ಮತ್ತಲ್ಲಿ ಟ್ರಾನ್ಸ್ಫಾರ್ಮ್ ಕಂಬ ಏರಿದ ವ್ಯಕ್ತಿ!