ಬೆಂಗಳೂರು : ಭಾನುವಾರ ಸುರಿದ ಧಾರಾಕಾರ ಮಳೆಯಿಂದಾಗಿ ನಗರದ ಹಲವೆಡೆ 69ಕ್ಕೂ ಹೆಚ್ಚು ಮರಗಳು ಹಾಗೂ 34ಕ್ಕೂ ಅಧಿಕ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಕೆಲ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ.
ಸಂಜೆ 5 ಗಂಟೆಯಿಂದ ಆರಂಭವಾದ ಗಾಳಿ, ಮಳೆಗೆ ಬಿಟಿಎಂಲೇಔಟ್, ವೈಟ್‌ಫೀಲ್ಡ್, ಕೋರಮಂಗಲ, ಚಂದಾಪುರ, ಜಯನಗರ, ಹೆಚ್.ಎಸ್.ಆರ್ ಲೇಔಟ್‌ನಲ್ಲಿ ಮರಗಳು ಧರೆಗುರುಳಿವೆ. ಇದರಿಂದ ಕೆಲಕಾಲ ಸಂಚಾರಕ್ಕೆ ಅಡ್ಡಿಯಾಗಿತ್ತು.
ಕೋರಮಂಗಲ, ಚಾಮರಾಜಪೇಟೆ, ಹೆಚ್‌ಎಸ್‌ಆರ್ ಲೇಔಟ್, ಬಸವನಗುಡಿ, ಜಯನಗರ, ಜೆ.ಪಿ.ನಗರ, ರಾಜಾಜಿನಗರ, ಮೈಸೂರು ರಸ್ತೆ ಹಾಗೂ ಹೊಸಕೆರೆಹಳ್ಳಿ ಕ್ರಾಸ್ ಮುಂತಾದ ಕಡೆ ಮ್ಯಾನ್‌ಹೋಲ್‌ಗಳು ಉಕ್ಕಿ ಹರಿದಿವೆ.
34 ವಿದ್ಯುತ್ ಕಂಬಗಳು ಧರೆಗೆ : ಚಂದಾಪುರದಲ್ಲಿ 32 ಕಂಬಗಳು ಬಿದ್ದಿದ್ದು, ಸರಿಪಡಿಸುವ ಕಾರ್ಯ ನಡೆಯುತ್ತಿದೆ. ಕೆಂಗೇರಿ ವಿಭಾಗದಲ್ಲಿ ಟ್ರಾನ್ಸ್‌ಫಾರ್ಮರ್ ಹಾನಿಗೊಂಡಿದ್ದು, ದುರಸ್ತಿ ಪ್ರಗತಿಯಲ್ಲಿದೆ. ಹಾಗೆ ಕೆಆರ್ಪುರ ಮತ್ತು ಬಿಟಿಎಂ ಬಡಾವಣೆಯಲ್ಲಿ ಎರಡು ವಿದ್ಯುತ್ ಕಂಬಗಳು ಬಿದ್ದಿವೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ಟ್ರಾಫಿಕ್ ಜಾಮ್ : ಮೆಜೆಸ್ಟಿಕ್, ಗಾಂಧಿನಗರ, ಜಯನಗರ, ವಿಜಯನಗರ, ರಾಜಾಜಿನಗರ, ಮಲ್ಲೇಶ್ವರ, ಆರ್.ಆರ್.ನಗರ, ಕೋರಮಂಗಲ, ಚಾಮರಾಜಪೇಟೆ, ಮಡಿವಾಳ, ಶಿವಾಜಿನಗರ, ಪೀಣ್ಯ, ಯಶವಂತಪುರ, ಜಾಲಹಳ್ಳಿ, ಮೈಸೂರು ರಸ್ತೆ ಮುಂತಾದೆಡೆ ಮಳೆ ಪರಿಣಾಮ ಟ್ರಾಫಿಕ್ ಜಾಮ್ ಉಂಟಾಗಿತ್ತು. ಶಿವಾನಂದ ವೃತ್ತದ ಬಳಿಯ ರೈಲ್ವೆ ಅಂಡರ್‌ಪಾಸ್, ಓಕಳಿಪುರ ಅಂಡರ್ ಪಾಸ್‌ಗಳು ಜಲಾವೃತವಾಗಿದ್ದವು.
ಎಲ್ಲೆಲ್ಲಿ ಎಷ್ಟು ಮಳೆ? : ವಿಶ್ವೇಶ್ವರಪುರದಲ್ಲಿ 49 ಮಿ.ಮೀ, ಕುಮಾರಸ್ವಾಮಿಲೇಔಟ್ 42, ದೊರೆಸಾನಿಪಾಳ್ಯ 48, ಆರ್.ಆರ್.ನಗರ 43, ನಾಯಂಡಹಳ್ಳಿ 43, ಕೋರಮಂಗಲ 40, ಸಾರಕ್ಕಿ 40, ಕೆಂಗೇರಿ 35, ಬೆಂ.ಉತ್ತರ 34, ಚಾಮರಾಜಪೇಟೆ 33, ಜ್ಞಾನಭಾರತಿ 32, ಕಾಟನ್‌ಪೇಟೆ 32, ಗಾಳಿ ಆಂಜನೇಯಸ್ವಾಮಿ ದೇವಸ್ಥಾನ 30, ಹಂಪಿನಗರ 28, ಬೊಮ್ಮನಹಳ್ಳಿ 28, ಶಿವನಗರ 26, ಬಸವೇಶ್ವರನಗರ 22, ನಾಗರಬಾವಿ 22, ಮಾರುತಿ ಮಂದಿರ 20 ಹಾಗೂ ರಾಜ್‌ಮಹಲ್ ಗುಟ್ಟೆಹಳ್ಳಿಯಲ್ಲಿ 20 ಮಿ.ಮೀ ಮಳೆಯಾಗಿದೆ.
ಮುಂದಿನ 3 ದಿನ ಮಳೆ : ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯಿಂದ ಭಾನುವಾರ ರಾಜ್ಯದ ಹಲವೆಡೆ ಭಾರಿ ಮಳೆಯಾಗಿದೆ. ಇಂದು ಸೇರಿದಂತೆ ಮುಂದಿನ 3 ದಿನ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಗುಡುಗು, ಗಾಳಿಸಹಿತ ಜೋರು ಮಳೆ: ಜನಜೀವನ ಅಸ್ತವ್ಯಸ್ತ
ಗೋಡೆ ಕುಸಿದು ಮಲಗಿದ್ದ ವ್ಯಕ್ತಿ ಸಾವು : ತಡರಾತ್ರಿ ಸುರಿದ ಭಾರಿ ಮಳೆಗೆ ಮನೆಗೋಡೆ ಕುಸಿದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕುಳ್ಳೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಹಾದೇವ (53) ಮೃತ ದುರ್ದೈವಿ. ಗ್ರಾಮದ ಹಳೆ ಕಟ್ಟಡಕ್ಕೆ ಹೊಂದಿಕೊಂಡಂತೆ ಮಣ್ಣಿನ ಗೋಡೆ ಹಾಕಿಕೊಂಡು ಜೀವನ ಸಾಗಿಸುತ್ತಿದ್ದರು.
ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ ಇಂದು ಮುಂಜಾನೆ ಕಟ್ಟಡದ ಗೋಡೆ, ಈತನ ಮಣ್ಣಿನ ಗೋಡೆ ಎರಡೂ ಬಿದ್ದು ಮಲಗಿದ್ದಲ್ಲೇ ಸಾವನಪ್ಪಿದ್ದಾನೆ ಎನ್ನಲಾಗ್ತಿದೆ. ಸದ್ಯ, ಶವವನ್ನು ಮರಣೋತ್ತರ ಪರೀಕ್ಷೆ ರವಾನಿಸಲಾಗಿದೆ. ಸ್ಥಳಕ್ಕೆ ಗ್ರಾ.ಪಂ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಇದನ್ನೂ ಓದಿ: ಮಂಡ್ಯ : ಮಳೆಯ ಆರ್ಭಟಕ್ಕೆ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ನಷ್ಟ