ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ ಮಾಫಿಯಾ ನಂಟು ಆರೋಪ ಸಂಬಂಧ ನಟಿಮಣಿಯರು ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ಸಿಟಿ ಸಿವಿಲ್ ಆವರಣದಲ್ಲಿರುವ ಎನ್ಡಿಪಿಎಸ್ ವಿಶೇಷ ನ್ಯಾಯಾಲಯದಲ್ಲಿ ನಡೆಯಿತು.
ಇದೇ ವೇಳೆ ಸಂಜನಾ ಹಾಗೂ ನಟಿ ರಾಗಿಣಿಯನ್ನು ವಿಚಾರಣೆ ನಡೆಸಲು ಅನುಮತಿ ಕೋರಿ ಇಡಿ ಪರ ಎಸ್ಪಿಪಿ ಪ್ರಸನ್ನ ಕುಮಾರ್ ನ್ಯಾಯಾಲಯಕ್ಕೆ ಅನುಮತಿ ಕೋರಿದರು. ಅರ್ಜಿಯಲ್ಲಿ ಪರಪ್ಪನ ಅಗ್ರಹಾರದಲ್ಲಿ ನಟಿಮಣಿಯರಿಬ್ಬರನ್ನು ವಿಚಾರಣೆ ನಡೆಸಲು ಅನುಮತಿ ನೀಡುವಂತೆ ಮನವಿ ಮಾಡಿದರು.
ಇದೇ ವೇಳೆ ಪ್ರತೀಕ್ ಶೆಟ್ಟಿ ಹಾಗೂ ನಿಯಾಜ್ ಅಹಮ್ಮದ್, ಅಭಿಸ್ವಾಮಿ ಅರ್ಜಿ ವಿಚಾರಣೆ 28ಕ್ಕೆ ಮುಂದೂಡಲಾಗಿದೆ. ಅಲ್ಲದೆ ಎ5 ವೈಭವ್ ಜೈನ್ ಹಾಗೂ ಎ14 ಸಂಜನಾ ಅರ್ಜಿಗೆ ಸಿಸಿಬಿ ವಕೀಲರು ಆಕ್ಷೇಪಣೆ ಸಲ್ಲಿಸಿದ್ದಾರೆ.
ಕಳೆದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ರಾಗಿಣಿ ಅರ್ಜಿಗೆ ಆಕ್ಷೇಪಣೆ ಸಲ್ಲಿಕೆಯಾಗಿತ್ತು. ಹಾಗೆ ವಾದ ಪ್ರತಿವಾದ ಕೂಡ ನಡೆದಿತ್ತು. ಹೀಗಾಗಿ ಜಾಮೀನು ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ತಕ್ಷಣ ಸಂಜನಾ ಜಾಮೀನು ಅರ್ಜಿಗೆ ಸಿಸಿಬಿ ಆಕ್ಷೇಪಣೆ ಸಲ್ಲಿಕೆ ಮಾಡಿ ವಾದ ಮಾಡಿ ಜಾಮೀನು ನೀಡದಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು.
ಇದೇ ವೇಳೆ ಸಂಜನಾ ಪರ ವಕೀಲರಾದ ಶ್ರೀನಿವಾಸ್ ರಾವ್, ವಾದ ಶುರು ಮಾಡಿ ಸಂಜನಾ ಎಕ್ಸ್ಟೆಸಿ ಮಾತ್ರೆ ಸೇವನೆ ಮಾಡಿದ್ದಾರೆಂಬ ಆರೋಪ ಮಾಡಿದ್ದಾರೆ. ಹಾಗೆ ಸಂಜನಾ ಮನೆಯಲ್ಲಿ ಯಾವುದೇ ಡ್ರಗ್ಸ್ ಪತ್ತೆಯಾಗಿಲ್ಲ. ಬಂಧಿತ ಕೆಲ ಪೆಡ್ಲರ್ಗಳ ಹೇಳಿಕೆಯ ಮೇರೆಗೆ ಬಂಧಿಸಲಾಗಿದೆ. ಪೆಡ್ಲರ್ ಮಾಹಿತಿ ಬಿಟ್ಟು ಬೇರೆ ಯಾವುದೇ ಸಾಕ್ಷ್ಯಗಳಿಲ್ಲ. ಇತರೆ ಆರೋಪಿಗಳ ಹೇಳಿಕೆ ಮೇರೆಗೆ ಎಫ್ಐಆರ್ ಹಾಕಲಾಗಿದೆ. ಅಲ್ಲದೆ ಸಂಜನಾ ಬಂಧಿಸುವಾಗ ಆಕೆಗೆ ಯಾವುದೇ ಮಾಹಿತಿ ನೀಡಿಲ್ಲ. ಪ್ರಕರಣದ ಆರೋಪಿ ರವಿಶಂಕರ್ ಹೇಳಿಕೆಯ ಆಧಾರದ ಮೇರೆಗೆ ಎಸಿಪಿ ಗೌತಮ್ ರೆಕಾರ್ಡ್ ಮಾಡಿದ್ದಾರೆ. ಅದರಲ್ಲಿ ನಗರದ ವಿವಿದೆಡೆ ಪಾರ್ಟಿ ನಡೆಸಿರುವುದಾಗಿ ಹೇಳಿದ್ದಾರೆ.
ಈ ಹೇಳಿಕೆ ಬಿಟ್ಟರೆ ಯಾವುದೇ ಮೆಟೀರಿಯಲ್ ಇಲ್ಲ. ಕೇವಲ ಅವರ ಹೇಳಿಕೆಯ ಆಧಾರದ ಮೇಲೆ ಎಫ್ಐಆರ್ ಮಾಡಲಾಗಿದೆ. ಈ ಎಫ್ಐಅರ್ನಲ್ಲಿ, ಅನೇಕ ಸೆಕ್ಷನ್ಗಳನ್ನು ಹಾಕಲಾಗಿದೆ. ಸೆಕ್ಷನ್ ಹಾಕುವಾಗ ಪೊಲೀಸರು ಸಿಆರ್ಪಿಸಿ ಸೆಕ್ಷನ್ಗಳ ಕಾನೂನು ಪಾಲನೆ ಮಾಡಿಲ್ಲ. ಸಂಜನಾ ಬಂಧನವಾದಾಗ ಎಫ್ಐಆರ್ ದಾಖಲಾಗುವ ದಿನ ಯಾವುದೇ ಡ್ರಗ್ ಆಕೆಯ ಮನೆಯಲ್ಲಿ ಪತ್ತೆಯಾಗಿಲ್ಲ. ಹಾಗೆ ಸಿಆರ್ಪಿಸಿ ಸೆಕ್ಷನ್ ಪ್ರಕಾರ ಎಫ್ಐಆರ್ ಮಾಡಿ ಹೇಳಿಕೆ ದಾಖಲಿಸಬೇಕು. ಆದರೆ ನೇರವಾಗಿ ಎಫ್ಐಆರ್ ಮಾಡಲಾಗಿದೆ. ಡ್ರಗ್ ಮಾಫಿಯಾ ಪ್ರಕರಣ ತನಿಖೆ ಕೈಗೊಂಡಾಗ ಸಂಜನಾ ಹೆಸರೇ ಇಲ್ಲ. ಐಪಿಸಿ ಅಡಿ ಕೇಸ್ ದಾಖಲಾಗಿಲ್ಲ. ಸಂಜನಾರನ್ನು ಬೇಕಂತಲೇ ಸಿಕ್ಕಿಸಲಾಗಿದೆ. ಜಾಮೀನು ನಿರಾಕರಣೆಗೆ ಸಿಸಿಬಿ ಸಮರ್ಥ ಕಾರಣ ನೀಡಿಲ್ಲ. ಒಳಸಂಚು ಆರೋಪಕ್ಕೆ ಸಾಕ್ಷ್ಯ ಸಿಕ್ಕಿಲ್ಲ. ಆರೋಪವೂ ಸಾಬೀತಾಗಿಲ್ಲ. 16ನೇ ಆರೋಪಿಯ ಸಾಕ್ಷಿಗಳನ್ನು ಪರಿಗಣನೆ ಮಾಡಲು ಸಾಧ್ಯವಿಲ್ಲ. ಹಾಗೆಯೇ ವಾಟ್ಸಪ್ ಸಂದೇಶಗಳನ್ನು ಪರಿಗಣನೆ ಮಾಡಲು ಸಾಧ್ಯವಿಲ್ಲ. ಮೊಬೈಲನ್ನು ರಿಟ್ರೇವ್ ಮಾಡಿದ್ದಾರೆಂದು ಸಿಸಿಬಿ ತಿಳಿಸಿದ್ದಾರೆ. ಆದರೆ ಅದರಲ್ಲಿ ಏನಿದೆ ಎಂದು ತಿಳಿಸಿಲ್ಲ. ಆರೋಪಿ ನಟಿಯಾಗಿದ್ದಾರೆ. ಸದ್ಯ ಆಕೆ ಜೈಲಿನಲ್ಲಿ ಕೊಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನ್ಯಾಯಾಲಯದಲ್ಲಿ ವಾದ ಮಂಡನೆ ಮಾಡಿದರು.
ಇದೇ ವೇಳೆ ಸಿಸಿಬಿ ಪರ ಎಸ್ಪಿಪಿ ವೀರಣ್ಣ ತಿಗಡಿ ಮುಚ್ಚಿದ ಲಕೋಟೆಯಲ್ಲಿ ತನಿಖಾ ವರದಿ ಹಾಗೂ ಸಿಡಿ ಸಲ್ಲಿಕೆ ಮಾಡಿದರು.
ನಿನ್ನೆ ತನಿಖೆ ಸಂಬಂಧ ಮಹತ್ವದ ಮಾಹಿತಿ ಕಲೆ ಹಾಕಲಾಗಿದೆ. ಇದನ್ನು ಜತನವಾಗಿರಿಸುವಂತೆ ಮನವಿ ಮಾಡಿದರು. ಹಾಗೆಯೇ ಸಂಜನಾ ಪರ ಬೇಕಾದ ಪೂರಕ ಸಾಕ್ಷ್ಯ ಇದೆ. ಈ ಆರೋಪಿಗಳು ಡ್ರಗ್ ಸೇವಿಸಿದ್ದಷ್ಟೇ ಅಲ್ಲ. ಡ್ರಗ್ಸ್ ಪೂರೈಕೆ ಮಾಡಿ ಹಲವಾರು ರೀತಿ ಹಣಗಳಿಕೆಯನ್ನು ಕೂಡ ಮಾಡಿದ್ದಾರೆ. ಹಣ ಹೂಡಿಕೆ ಕೂಡ ಮಾಡುತ್ತಿದ್ದಾರೆ. ವೈದ್ಯಕೀಯ ಪರೀಕ್ಷೆ ವೇಳೆ ಡ್ರಗ್ ಸೇವನೆ ಮಾಡಿದ್ದು ತಿಳಿದುಬಂದಿದೆ. ಅದು ಇನ್ನೂ ತನಿಖಾ ಹಂತದಲ್ಲಿದೆ. ಡಿಜಿಟಲ್ ಸಾಕ್ಷಿ ಈ ಪ್ರಕರಣದಲ್ಲಿ ಬಹಳಷ್ಟು ಇದೆ. ಹೀಗಾಗಿ ಜಾಮೀನು ನೀಡದಂತೆ ನ್ಯಾಯಾಲಯಕ್ಕೆ ಸಿಸಿಬಿ ಪರ ವಕೀಲರು ಮನವಿ ಮಾಡಿದರು.
ಇದೇ ವೇಳೆ ರಾಗಿಣಿ ದ್ವಿವೇದಿ ವಿಚಾರ ಪ್ರಸ್ತಾಪ ಮಾಡಿ, ರವಿಶಂಕರ್ಗೆ ರಾಗಿಣಿ ಬಹಳ ಹತ್ತಿರವಾಗಿದ್ದಳು. ಹೀಗಾಗಿ ಪ್ರತೀಕ್ ಶೆಟ್ಟಿ, ವೈಭವ್ ಜೈನ್ ಎಲ್ಲಾ ಸೇರಿಕೊಂಡು ಪಾರ್ಟಿ ಮಾಡಿದ್ದಾರೆ. ಈ ಆರೋಪಿಗಳ ಜಾಲ ಬಹಳ ದೊಡ್ಡ ಮಟ್ಟದಲ್ಲಿದೆ. ಇವರು ಕೊಕೇನ್, ಪೀಲ್ ಸರಬರಾಜು ಮಾಡಿರುವ ಮಾಹಿತಿ ತನಿಖಾಧಿಕಾರಿಗಳಿಗಿದೆ. ಅಲ್ಲದೆ ವಾಟ್ಸಪ್, ಈಮೇಲ್ ಪಾಸ್ವರ್ಡ್ ನೀಡಿಲ್ಲ. ಹೀಗಾಗಿ ಅಗತ್ಯ ಬಿದ್ರೆ ಸುಳ್ಳು ಪತ್ತೆ ಪರೀಕ್ಷೆ ಮಾಡಲಾಗುವುದು. ಈ ಆರೋಪಿಗಳು ವಿದೇಶಿ ಪ್ರಜೆ ಲೂಮ್ ಪೆಪ್ಪರ್ನಿಂದ ಡ್ರಗ್ ಖರೀದಿ ಮಾಡಿದ್ದಾರೆ. ಸಂಜನಾ ನಟಿ ಹೌದು. ಇವರಿಗೆ ಕೆಲ ಜವಾಬ್ದಾರಿ ಇರಬೇಕು. ಆದರೆ ಇವರು ಪಾರ್ಟಿಗಳನ್ನು ಆಯೋಜಿಸುವುದೇ ಹದಿಹರೆಯದವರನ್ನು ಸೆಳೆಯಲು. ಹಾಗೆ ಸಂಜನಾ ತನಿಖೆಗೆ ಸರಿಯಾದ ಸಹಕಾರ ನೀಡಿಲ್ಲ. ಇಬ್ಬರೂ ನಟಿಯರು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದಾಗ ಮೂತ್ರ, ರಕ್ತ ಹಾಗೂ ಕೂದಲು ಕೊಡಲು ನಿರಾಕರಣೆ ಮಾಡಿದ್ದಾರೆ. ಇಬ್ಬರು ಕೂಡ ತಪ್ಪು ಮಾಡಿಲ್ಲವಾಗಿದ್ದರೆ ತನಿಖೆಗೆ ಸಹಕಾರ ನೀಡಬೇಕಿತ್ತು. ಆರೋಪಿಗಳ ವಿರುದ್ಧ ಸಾಕ್ಷ್ಯ ಸಂಗ್ರಹ ಮಾಡಲಾಗುತ್ತಿದೆ ಎಂದರು.
ವಾದ ಪ್ರತಿವಾದಗಳ ಬಳಿಕ ನಟಿ ಸಂಜನಾ, ರಾಗಿಣಿ ಹಾಗೂ ಇವರ ಆಪ್ತರ ಅರ್ಜಿ ವಿಚಾರಣೆ ನಾಳೆಗೆ ಮುಂದೂಡಲಾಯ್ತು. ನಾಳೆ ವಾದ ಪ್ರತಿವಾದಕ್ಕೆ ನ್ಯಾಯಾಲಯ ಉತ್ತರ ಕೊಡಲು ಕಾಲವಾಕಾಶ ನೀಡಿ ವಿಚಾರಣೆ ಮುಂದೂಡಿದೆ. ನಾಳೆ ಮತ್ತೆ ವಿಚಾರಣೆ ನಡೆಯಲಿದ್ದು, ಸದ್ಯ ನಟಿಮಣಿಯರು ಜೈಲಲ್ಲೇ ಇರಬೆಕಾಗಿದೆ.