ಬೆಂಗಳೂರು: ಡಿ.ಕೆ. ಶಿವಕುಮಾರ್ ಸೋಲಿಗೆ ಮೊದಲೇ ಶಸ್ತ್ರತ್ಯಾಗ ಮಾಡಿ ಹೋಗಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ಟಾಂಗ್ ನೀಡಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾಳೆಯ ಉಪಚುನಾವಣಾ ಫಲಿತಾಂಶ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನಾಳೆ ಎರಡೂ ಕಡೆ ಎಲ್ಲಾ ಪಕ್ಷಗಳ ಭವಿಷ್ಯ ನಿರ್ಧಾರವಾಗಲಿದೆ. ನನಗೆ ಆರ್.ಆರ್ ನಗರ ಉಸ್ತುವಾರಿ ಕೊಟ್ಟಿದ್ದರು. ಸುಮಾರು 25 ವರ್ಷ ಅಲ್ಲಿ ಕಾರ್ಯಕರ್ತ, ಶಾಸಕ, ಸಚಿವನಾಗಿ ಕೆಲಸ ಮಾಡಿದ್ದೇನೆ. ಉಪಚುನಾವಣೆ ವೇಳೆ ಅಲ್ಲೇ ಇದ್ದು ದುಡಿದಿದ್ದೇನೆ. ಅಲ್ಲಿ ಡಿಕೆಶಿ ಆಟ ನಡೆಯಲ್ಲ. ನಾವು 25-30 ಸಾವಿರ ಲೀಡ್ನಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಡಿಕೆಶಿ ಅವರು ನನ್ನ ಹೇಳಿಕೆಗಳಿಗೆ ಉತ್ತರವನ್ನೇ ಕೊಟ್ಟಿಲ್ಲ. ಅವರು ಸೋಲಿಗೆ ಮೊದಲೇ ಶಸ್ತ್ರತ್ಯಾಗ ಮಾಡಿ ಹೋಗಿದ್ದಾರೆ. ಮಾತೆತ್ತಿದ್ದರೆ ಅಶೋಕಣ್ಣ ದೊಡ್ಡವರು, ರವಿ ಅವರು ದೊಡ್ಡವರು. ಮುನಿರತ್ನ ನನ್ನ ಸರಿ ಸಮಾನ ಅಲ್ಲ ಎಂಬ ಬಂಡೆ ಮಾತುಗಳನ್ನು ಆಡಿದ್ದಾರೆ. ಅವರು ಏನೂ ಕೆಲಸ ಮಾಡಿಲ್ಲ. ಡಿಕೆಶಿ ನಾನೇ ಇಲ್ಲಿ ಅಭ್ಯರ್ಥಿ ಅಂತಾ ಹೇಳಿಕೊಂಡು ಕ್ಷೇತ್ರದಲ್ಲೆಲ್ಲಾ ಓಡಾಡಿದ್ದರು. ಅದಕ್ಕೆ ಅಲ್ಲಿ ನಾನೂ ಕೂಡ ನಾನೇ ಅಭ್ಯರ್ಥಿ ಅಂತಾನೇ ಪ್ರಚಾರ ಮಾಡಿದ್ದೇನೆ. ಈಗಾಗಲೇ ಸಿದ್ದರಾಮಯ್ಯ ಕೂಡ ಸೋಲನ್ನು ಒಪ್ಪಿಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ
ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ. ಫಲಿತಾಂಶದ ಬಳಿಕ ಯಾವುದೇ ಬದಲಾವಣೆ ಆಗುವುದಿಲ್ಲ. ಯಡಿಯೂರಪ್ಪ ಅವ್ರೇ ಸಿಎಂ ಆಗಿ ಇರಲಿದ್ದಾರೆ ಎಂದು ಆರ್. ಅಶೋಕ್ ಸ್ಪಷ್ಟಪಡಿಸಿದರು. ಫಲಿತಾಂಶದ ಬಳಿಕ ಬಿಎಸ್ವೈಗೆ ಇನ್ನಷ್ಟು ಬಲ ಬರಲಿದೆ. ಅವರು ಇನ್ನಷ್ಟು ಗಟ್ಟಿಯಾಗಿ ಇರಲಿದ್ದಾರೆ. ಖಾಲಿ ಇರದೇ ಇರುವ ಸ್ಥಾನಕ್ಕೆ ಅರ್ಜಿ ಹಾಕಬೇಡಿ ಎಂದು ತಿಳಿಸಿದರು.
ಸಿದ್ದರಾಮಯ್ಯ ಯಾವಾಗ ಜೋತಿಷಿ ಆದರು..?
ದೆಹಲಿ ಮೂಲಗಳಿಂದಲೇ ಹೇಳುತ್ತಿದ್ದೇನೆ ಯಡಿಯೂರಪ್ಪ ನಿಶ್ಚಿತ ಎಂದು ಸಿದ್ದು ಹೇಳಿಕೆಗೆ ಟಾಂಗ್ ನೀಡಿದ ಆರ್. ಅಶೋಕ್, ಸಿದ್ದರಾಮಯ್ಯ ಯಾವಾಗ ಜ್ಯೋತಿಷಿಯಾದರೋ ಗೊತ್ತಿಲ್ಲ. ದೆಹಲಿಯಿಂದ ಅವರಿಗೆ ಹೇಗೆ ಮೆಸೇಜ್ ಬಂತು. ಅಷ್ಟಕ್ಕೂ ಅವರಿಗೆ ಇಂಟೆಲಿಜೆನ್ಸ್ ಎಲ್ಲಿದೆ?. ದೆಹಲಿಯಲ್ಲೂ ಅಧಿಕಾರದಲ್ಲಿ ಇಲ್ಲ. ಇಲ್ಲೂ ಇಲ್ಲ. ಅವರು ಇನ್ನೂ ಭ್ರಮೆಯಲ್ಲೇ ಇದ್ದಾರೆ. ಅಧಿಕಾರ ಕಳೆದುಕೊಂಡು ಹೀಗೆ ಆಗಿದ್ದಾರೆ ಎಂದು ತಿರುಗೇಟು ನೀಡಿದರು.