ಬೆಂಗಳೂರು : ಸಿಂದಗಿ ಕ್ಷೇತ್ರದಲ್ಲಿ ದೊಡ್ಡ ಅಂತರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಹಾನಗಲ್‌ನಲ್ಲೂ ಸಹ ಪಕ್ಷ ಗೆಲ್ಲುವ ವಿಶ್ವಾಸವಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿಂದಗಿ ಕ್ಷೇತ್ರದಲ್ಲಿ ಗೆಲುವು ಖಚಿತವಾಗಿದೆ. ನಮ್ಮ ನಿರೀಕ್ಷೆಗೂ ಮೀರಿ ಗೆಲುವು ಸಿಕ್ಕಿದೆ. ಕ್ಷೇತ್ರದ ಜನರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಹಾನಗಲ್‌ನಲ್ಲಿ ನೆಕ್ ಟು ನೆಕ್ ಫೈಟ್ ಇದೆ.
ಕಾಂಗ್ರೆಸ್ ಮೂರು ಸಾವಿರ ಅಂತರದ ಮುನ್ನಡೆಯಲ್ಲಿದೆ. ಅದೇನು ದೊಡ್ಡ ಅಂತರವಲ್ಲ. ಬಿಜೆಪಿ ಮುನ್ನಡೆ ಪಡೆದು ಗೆಲ್ಲಲಿದೆ. ಹಾನಗಲ್‌ನಲ್ಲೂ ಕಮಲ ಅರಳುವ ವಿಶ್ವಾಸವಿದೆ ಎಂದರು.
ಈ ಚುನಾವಣೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೇನು ಪರೀಕ್ಷೆ ಅಲ್ಲ. ಎರಡೂ ಕಡೆ ಗೆದ್ದರೆ ಸರ್ಕಾರಕ್ಕೆ ಇನ್ನೂ ಹೆಚ್ಚಿನ ಬಲ ಬಂದಂತಾಗುತ್ತದೆ. ಹಾನಗಲ್ ಕ್ಷೇತ್ರದಲ್ಲಿ ಅನಾರೋಗ್ಯ ಕಾರಣ ಉದಾಸಿ ಅವರು ಎರಡು ವರ್ಷ ಕ್ಷೇತ್ರದ ಕಡೆ ಹೆಚ್ಚಿನ ಗಮನ ಕೊಡಲು ಆಗಿರಲಿಲ್ಲ.
ಆದರೆ, ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ಎಲ್ಲರೂ ಒಟ್ಟಾಗಿ ಪ್ರಚಾರ ಮಾಡಿದ್ದಾರೆ. ಗೆಲ್ಲುವ ವಿಶ್ವಾಸ ಇದೆ. ಸಾರ್ವತ್ರಿಕ ಚುನಾವಣೆಗೂ ಇದಕ್ಕೂ ಏನು ಸಂಬಂಧ ಇಲ್ಲ ಎಂದರು.
ಸಿಂದಗಿಯಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ಯಾವುದೇ ಲಾಭ ಆಗಿಲ್ಲ. ಜೆಡಿಎಸ್ 15 ಸಾವಿರ ಮತ ಪಡೆಯಬಹುದು ಎಂದು ನಿರೀಕ್ಷೆ ಇತ್ತು. ಆದರೆ, ಜೆಡಿಎಸ್ ಅಷ್ಟು ಮತವನ್ನೂ ಪಡೆದಿಲ್ಲ. ಹೀಗಾಗಿ, ಜೆಡಿಎಸ್‌ನಿಂದ ಬಿಜೆಪಿಗೆ ಯಾವುದೇ ಅನುಕೂಲ ಆಗಿಲ್ಲ ಎಂದು ಅಭಿಪ್ರಾಯಪಟ್ಟರು.