ಬೆಂಗಳೂರು: ಯಾರು ದೇಶಕ್ಕೆ ದ್ರೋಹ ಬಗೆಯುತ್ತಾರೋ, ಯಾರು ಪಾಕಿಸ್ತಾನದ ಪರವಾಗಿರುತ್ತಾರೋ ಅಂತವರನ್ನು ಗುಂಡಿಟ್ಟು ಕೊಲ್ಲಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸುಭಾಷ್ ಚಂದ್ರ ಬೋಸ್ ಜನ್ಮದಿನಾಚರಣೆ ಹಿನ್ನೆಲೆ ವಿಧಾನಸೌಧದಲ್ಲಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ಮಾತನಾಡಿದ ಅವರು, ಕಾನೂನು ಎಲ್ಲರಿಗೂ ಒಂದೇ. ಕಳ್ಳ ಯಾವ ಧರ್ಮದವನೇ ಆಗಿರಲಿ, ಕಳ್ಳ ಕಳ್ಳನೇ. ಪಾಕಿಸ್ತಾನದ ಪ್ರೇರಣೆಯಿಂದ ತರಬೇತಿ ಪಡೆದು ಹಿಂದೂ ಉಗ್ರವಾದ ಮಾಡಿದರೆ ಅವನನ್ನು ಅದೇ ರೀತಿ ನೋಡುತ್ತೇವೆ ಎಂದರು.
ನಮ್ಮ ದೇಶದ ಸೈನಿಕರನ್ನು ಕೊಲ್ಲುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಪಾಕಿಸ್ತಾನದ ಧ್ವಜ ಕಂಡ್ರೆ ನಮಗೆ ಸಿಟ್ಟು ಬರುತ್ತದೆ. ಪಾಕಿಸ್ತಾನದ ಪರವಾಗಿದ್ದವರು ಹಿಂದೂ ಆಗಲಿ, ಕ್ರೈಸ್ತನಾಗಲಿ, ಮುಸ್ಲಿಂ ಆಗಲಿ, ಯಾರೇ ಆಗಲಿ. ಪಾಕಿಸ್ತಾನ ನಮ್ಮ ವೈರಿ ರಾಷ್ಟ್ರ. ಸದಾ ನಮ್ಮ ದೇಶವನ್ನು ನಾಶ ಮಾಡಲು ಹೊರಟಿರುವ ದೇಶ. ಆ ದೇಶವನ್ನು ಮಟ್ಟಹಾಕುವಂತಹ ಕೆಲಸ ಮಾಡುವುದು ನಮ್ಮ ಕರ್ತವ್ಯ. ಅದನ್ನು ನಾವು ಮಾಡುತ್ತೇವೆ ಎಂದರು.
ಹೆಚ್ಡಿಕೆ ವಿರುದ್ಧ ಕಿಡಿ:
ಈಗ ನಾವು ಜಾಗರೂಕತೆಯಿಂದ ತನಿಖೆ ಮಾಡುವ ಪರ್ವದಲ್ಲಿ ಇದ್ದೇವೆ. ಏನೇ ತನಿಖೆ ಮಾಡಿದರೂ ಅದನ್ನು ನಾಟಕ, ಅಣುಕು ಪ್ರದರ್ಶನ ಎನ್ನಲಾಗುತ್ತಿದೆ. ಸಿನಿಮಾಗಳಲ್ಲಿ ಪೊಲೀಸರನ್ನು ವ್ಯಂಗ್ಯವಾಗಿ ಬಿಂಬಿಸಲಾಗುತ್ತೆ ಎಂದು ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.
ಈಗ ಸಿನಿಮಾ ನಿರ್ಮಾಪಕರಾದ ಕುಮಾರಸ್ವಾಮಿ ಕೂಡಾ ಪೊಲೀಸರ ಬಗ್ಗೆ ವ್ಯಂಗ್ಯವಾಗಿ ಹೇಳಿಕೆ ನೀಡುತ್ತಿದ್ದಾರೆ. ಅವರು ಮಾಜಿ ಸಿಎಂ ಆಗಿದ್ದಾಗ ಅವರಿಗೆ ಪೊಲೀಸರು ಬೇಕಾಗಿದ್ದರು. ಅದರೆ ಅಧಿಕಾರದಿಂದ ಇಳಿದ ತಕ್ಷಣ ಅವರಿಗೆ ಪೊಲೀಸರು ವಿಲನ್ ಆಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮಂಗಳೂರು ಬಾಂಬ್ ಪ್ರಕರಣದ ಆರೋಪಿ ಸಿಕ್ಕಿಬಿದ್ದಿದ್ದಾನೆ. ಹ್ಯಾರಿಸ್ ಮೇಲಾದ ದಾಳಿ ಕೂಡ ಬಹಳ ನೋವಿನ ಸಂಗತಿ. ಅವರು ಬೇಗ ಗುಣಮುಖರಾಗಲಿ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದ್ರೆ ಅದು ಪಟಾಕಿ ಅಂತಾ ಕುಮಾರಸ್ವಾಮಿ ಹೇಳುತ್ತಾರೆ. ಹ್ಯಾರಿಸ್ ಮೇಲಿನ ದಾಳಿ ಹಿಂದೆ ಕುತಂತ್ರ ಇದೆ. ಪೂರ್ವ ನಿಯೋಜಿತ ಎಂಬಂತೆ ಕಾಣುತ್ತಿದೆ ಎಂದರು.
ಯಾವುದೇ ಧರ್ಮದವರಾದರೂ ಅಪರಾಧ ಕೃತ್ಯ ಮಾಡುವವರು ಆರೋಪಿಗಳೇ. ಅಂತವರಿಗೆ ಶಿಕ್ಷೆ ಆಗಲೇಬೇಕು. ವಿಮಾನ ನಿಲ್ದಾಣಕ್ಕೆ ಪದೇ ಪದೆ ಬೆದರಿಕೆ ಹಾಕುವವನಿಗೆ ಕಾಯಂ ಆಗಿ ಶಿಕ್ಷೆ ಆಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಬೊಮ್ಮಾಯಿ ಹೇಳಿಕೆ ಸಮರ್ಥಿಸುತ್ತೇನೆ:
ಆದಿತ್ಯ ರಾವ್ ಮಾನಸಿಕ ಅಸ್ವಸ್ಥ ಎಂಬ ಬೊಮ್ಮಾಯಿ ಹೇಳಿಕೆಯನ್ನು ನಾನು ಸಮರ್ಥಿಸುತ್ತೇನೆ. ಆತನ ಮಾನಸಿಕ ಸ್ಥಿತಿ ಬಗ್ಗೆ ವೈದ್ಯರು ದೃಢೀಕರಿಸಬೇಕು. ಆರೋಪಿಯ ಹೇಳಿಕೆ ನೋಡಿದರೆ ಹಾಗೆ ಅನಿಸುತ್ತದೆ. ಡಬಲ್ ಡಿಗ್ರಿ ಆದರೂ ಕೆಲಸ ಇಲ್ಲ, ಮನೆಯವರು ಅವನನ್ನು ದೂರ ಮಾಡಿದ್ದಾರೆ. ಅವನಿಗೆ ಮಾನಸಿಕವಾಗಿ ಏನೋ ಸಮಸ್ಯೆ ಇರಬಹುದು. ಈ ಬಗ್ಗೆ ತನಿಖೆ ಆದ ಬಳಿಕ ಗೊತ್ತಾಗಲಿದೆ. ಅವನನ್ನು ಯಾವುದೇ ರೀತಿಯಲ್ಲೂ ಕ್ಷಮಿಸುವ ಪ್ರಶ್ನೆಯೇ ಇಲ್ಲ. ಗೃಹ ಸಚಿವರಿಗೆ ಈ ಬಗ್ಗೆ ಮಾಹಿತಿ ಇದೆ. ಅದಕ್ಕಾಗಿ ಹೀಗೆ ಹೇಳುತ್ತಿರಬಹುದು ಎಂದರು.