ಬೆಂಗಳೂರು: ಕರೆದ ತಕ್ಷಣ ಬರಲು ನಟ ದರ್ಶನ್ ಕರು ಅಲ್ಲ, ಇನ್ನು ಸಮಯ ಇದೆ ತಾಕತ್ತಿದ್ದರೆ ಕರೆಸಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪರ ಪ್ರಚಾರ ನಡೆಸಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ಗೆ ಕಂದಾಯ ಸಚಿವ ಆರ್.ಅಶೋಕ್ ಸವಾಲೆಸೆದಿದ್ದಾರೆ.
ಆರ್ಆರ್ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುನಿರತ್ನ ಪರ ನಟ ದರ್ಶನ್ ಪ್ರಚಾರ ಮಾಡಿದ್ದಾರೆ. ನಾನು ಕರೆದರೂ ದರ್ಶನ್ ಬರುತ್ತಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಆದರೆ, ದರ್ಶನ್ ಕರು ಅಲ್ಲ ಓಡಿ ಬರೋದಕ್ಕೆ, ಡಿಕೆಶಿ ಹಸು ಅಲ್ಲ ಕರೆದ ಕೂಡಲೇ ದರ್ಶನ್ ಬರೋದಿಕ್ಕೆ. ಇನ್ನೂ ಸಂಜೆ 6 ಗಂಟೆವರೆಗೆ ಸಮಯ ಇದೆ ನಾನೂ ಬಹಿರಂಗ ಪ್ರಚಾರ ಮುಗಿಯೋವರೆಗೂ ಕಾಯುತ್ತೇನೆ. ಸಂಜೆಯ ಒಳಗೆ ಡಿಕೆಶಿಗೆ ತಾಕತ್ ಇದ್ದರೆ ದರ್ಶನ್ ರನ್ನ ಪ್ರಚಾರಕ್ಕೆ ಕರೆದುಕೊಂಡು ಬರಲಿ. ಇನ್ನೂ ನಾಲ್ಕು ಗಂಟೆ ಸಮಯ ಇದೆ, ಅಷ್ಟರಲ್ಲಿ ಡಿಕೆಶಿ ದರ್ಶನ್ ಕರೆಸಿ ಪ್ರಚಾರ ಮಾಡಿಸಲಿ ಎಂದು ಡಿಕೆಶಿಗೆ ಸವಾಲು ಹಾಕಿದರು.
ಆರ್ ಆರ್ ನಗರಕ್ಕೆ ಐದಾರು ಸಾವಿರ ಜನ ಹೊರಗಿಂದ ಬಂದಿದ್ದಾರೆ. ಕ್ಷೇತ್ರಕ್ಕೆ ಹೊರಗಿಂದ ಬಂದಿರೋರನ್ನೆಲ್ಲ ಹೊರಗೆ ಕಳಿಸಬೇಕು, ಕ್ಷೇತ್ರದಲ್ಲಿ ಅಡಗಿ ಕೂತಿರುವವರನ್ನೆಲ್ಲ ಚುನಾವಣಾ ಆಯೋಗ ಹೊರಗೆ ಕಳಿಸಬೇಕು. ಆರ್ ಆರ್ ನಗರದ ಪಕ್ಕದ ಕ್ಷೇತ್ರಗಳಲ್ಲೂ ಹೊರಗಿನವರು ಅಡಗಿದ್ದಾರೆ ಅಲ್ಲೂ ಅವರನ್ನು ಹುಡುಕಿ ಹೊರಗೆ ಅಟ್ಟಲಿ ಎಂದು ಆರ್ ಅಶೋಕ್ ಚುನಾವಣಾ ಆಯೋಗವನ್ನು ಒತ್ತಾಯಿಸಿದರು.
ನಟ ದರ್ಶನ್ ಪ್ರಚಾರ ಸಂದರ್ಭದಲ್ಲಿ ಸಾಮಾಜಿಕ ಅಂತರ ಇರಲಿಲ್ಲ ಎಂಬ ಆರೋಪ ಕುರಿತು ಸ್ಪಷ್ಟನೆ ನೀಡಿದ ಅಶೋಕ್. ಬಿಜೆಪಿಯಿಂದ ಕೋವಿಡ್ ನಿಯಮಗಳ ಪಾಲನೆ ಆಗಿದೆ. ಕಾಂಗ್ರೆಸ್ ನಿಂದ ನಿಯಮಗಳ ಉಲ್ಲಂಘನೆ ಆಗಿದೆ. ದರ್ಶನ್ ರ್ಯಾಲಿ ವೇಳೆ ನಾನೂ ಇದ್ದೆ, ದರ್ಶನ್ ಬಂದಿದ್ದಾಗ ಸಾವಿರಾರು ಸಂಖ್ಯೆಯಲ್ಲಿ ಜನ ಬಂದಿದ್ದರು. ಅದಕ್ಕೂ ನಮಗೂ ಸಂಬಂಧ ಇಲ್ಲ, ನಮ್ಮ ಪಕ್ಷದಿಂದ ನೂರು ಜನ ಕಾರ್ಯಕರ್ತರು ಮಾತ್ರ ಬಂದಿದ್ದರು. ಉಳಿದಂತೆ ಬಂದಿದ್ದ ಜನಕ್ಕೂ ನಮಗೂ ಸಂಬಂಧ ಇಲ್ಲ. ದರ್ಶನ್ ನಮ್ಮ ಪರ ಪ್ರಚಾರಕ್ಕೆ ಬಂದಿದ್ದರಿಂದ ಕಾಂಗ್ರೆಸ್ ನವರು ಭಯಭೀತರಾಗಿದ್ದಾರೆ ಹಾಗಾಗಿ ಇಂಥ ಆರೋಪ ಮಾಡಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ದಿವಾಳಿ ಆಗುತ್ತದೆ. ಎಲ್ಲ ಶಾಸಕರೂ ಕಾಂಗ್ರೆಸ್ ಬಿಡುತ್ತಿದ್ದಾರೆ ಮುಂದೆ ಕಾಂಗ್ರೆಸ್ ದಿವಾಳಿ ಪಕ್ಷ ಆಗುತ್ತದೆ ಈ ಬಗ್ಗೆ ಮೊದಲು ಕಾಂಗ್ರೆಸ್ ನವರು ಎಚ್ಚರಿಕೆ ವಹಿಸಲಿ ಎಂದು ಟಾಂಗ್ ನೀಡಿದರು. ಯಡಿಯೂರಪ್ಪ ಹೋದರೆ ಬಿಜೆಪಿಗೆ ಹೋದವರ ಪಾಡು ನಾಯಿಪಾಡು ಎನ್ನುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಅಶೋಕ್, ಈಗ ಕಾಂಗ್ರೆಸ್ ಪಾಡೇ ನಾಯಿಪಾಡಾಗಿದೆ. ಕಾಂಗ್ರೆಸ್ ನಿಂದ ಒಬ್ಬೊಬ್ಬರಾಗಿ ಆಚೆ ಹೋಗುತ್ತಿದ್ದಾರೆ. ಈ 15 ಜನರ ವಿಚಾರದಲ್ಲಿ ಕಾಂಗ್ರೆಸ್ ನವರು ಸರಿಯಾಗಿ ನಡೆದುಕೊಳ್ಳಲಿಲ್ಲ, ಹಾಗಾಗಿ ಅವರು ಕಾಂಗ್ರೆಸ್ ನಿಂದ ಬಿಜೆಪಿಗೆ ಬಂದರು. ಕಾಂಗ್ರೆಸ್ ನಿಂದ ಇನ್ನೂ ಐವರು ಶಾಸಕರು ಆಚೆ ಬರುತ್ತಾರೆ. ಐವರು ಶಾಸಕರು ಕಾಂಗ್ರೆಸ್ ಬಿಡಲು ರೆಡಿ ಇದ್ದಾರೆ ಅವರನ್ನು ಮೊದಲು ಕಾಂಗ್ರೆಸ್ ನಾಯಕರು ತಡೆದಿಟ್ಟುಕೊಳ್ಳಲಿ ಎಂದರು.
ಟೀ, ಬನ್ ತಿಂದು ಸಚಿವ ಅಶೋಕ್ ಪ್ರಚಾರ:
ಮಧ್ಯಾಹ್ನ ಊಟಕ್ಕೂ ಹೋಗದೆ ಮುನಿರತ್ನ ಪರವಾಗಿ ಸಚಿವ ಆರ್ ಅಶೋಕ್ ಆರ್ಆರ್ ನಗರದಲ್ಲಿ ಪ್ರಚಾರ ನಡೆಸಿದರು. ಪ್ರಚಾರದ ವೇಳೆ ದಣಿವಾರಿಸಿಕೊಳ್ಳಲು ಟೀ ಕುಡಿದು, ಬನ್ ಸೇವನೆ ಮಾಡಿದರು. ಬಿಜೆಪಿ ಅಭ್ಯರ್ಥಿ ಮುನಿರತ್ನ ಪರವಾಗಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ.