ಬೆಂಗಳೂರು: ಸ್ಯಾಂಡಲ್ವುಡ್ನ ನೆಚ್ಚಿನ ನಟ ಪುನೀತ್ ರಾಜ್ಕುಮಾರ್(46) ಅವರ ಅಂತ್ಯಕ್ರಿಯೆ ಇಂದು ನಡೆಯಲಿದ್ದು, ಬೆಳಗ್ಗೆ 5:30ಕ್ಕೆ ಅಂತಿಮಯಾತ್ರೆ ಆರಂಭಗೊಳ್ಳಲಿದೆ ಎಂದು ತಿಳಿದು ಬಂದಿದೆ.
ಸಕಲ ಸರ್ಕಾರಿ ಗೌರವಗಳೊಂದಿಗೆ ನೆಚ್ಚಿನ ಅಭಿಮಾನಿಗಳ ಅಪ್ಪುವಿನ ಅಂತ್ಯಕ್ರಿಯೆ ನಡೆಸಲು ರಾಜ್ಯ ಸರ್ಕಾರ ಈಗಾಗಲೇ ಅಧಿಸೂಚನೆ ಹೊರಡಿಸಿದೆ. ಡಾ. ರಾಜ್ಕುಮಾರ್ ಹಾಗೂ ಪಾರ್ವತಮ್ಮ ಸಮಾಧಿ ಪಕ್ಕದಲ್ಲೇ ಅಂತ್ಯ ಸಂಸ್ಕಾರ ನೆರವೇರಲಿದೆ.
ನೆಚ್ಚಿನ ನಟನ ಪಾರ್ಥಿವ ಶರೀರದ ದರ್ಶನಕ್ಕಾಗಿ ರಾಜ್ಯದ ವಿವಿದೆಡೆಯಿಂದ ಅಭಿಮಾನಿಗಳು ಆಗಮಿಸುತ್ತಿರುವ ಕಾರಣಕ್ಕಾಗಿ ಕಂಠೀರವ ಸ್ಟೇಡಿಯಂ ಸುತ್ತಲ್ಲೂ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಇಂದು ಬೆಳಗ್ಗೆ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದು, ಆದಷ್ಟು ಬೇಗ ಅಂತಿಮಯಾತ್ರೆ ಆರಂಭ ಮಾಡಲಾಗುವುದು ಎಂದಿದ್ದಾರೆ.
ಇದನ್ನೂ ಓದಿರಿ: ಇಂದು ನಟ ಪುನೀತ್ ಅಂತ್ಯಸಂಸ್ಕಾರ: ಅಂತಿಮಯಾತ್ರೆ ಸಾಗುವ ಮಾರ್ಗ ಹೀಗಿದೆ...
ಪುನೀತ್ ರಾಜ್ಕುಮಾರ್ ನಿಧನವಾಗಿ ಇಂದಿಗೆ ಮೂರು ದಿನ ಆಗಲಿದೆ. ಹೀಗಾಗಿ ಆದಷ್ಟು ಬೇಗ ಅಂತ್ಯಕ್ರಿಯೆ ಮಾಡಿ, ಮೂರನೇ ದಿನದ ಕಾರ್ಯ ನಡೆಸುವ ಸಾಧ್ಯತೆ ಇದೆ. ಮುಂಜಾನೆ 5.30 ರಿಂದ 7 ರ ಒಳಗೆ ಅಂತಿಮ ಯಾತ್ರೆ ನಡೆಯಲಿದೆ. ನಂತರ ಕುಟುಂಬಸ್ಥರು ಹಾಲು, ತುಪ್ಪ ಶಾಸ್ತ್ರ ಮಾಡಬೇಕು. ಹೀಗಾಗಿ ಆದಷ್ಟು ಬೇಗ ಅಂತ್ಯಕ್ರಿಯೆ ನೆರವೇರಿಸಲಾಗುವುದು. ಅಂತ್ಯಕ್ರಿಯೆಗೆ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ಅಭಿಮಾನಿಗಳು ಸಹಕಾರ ನೀಡಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.