ಬೆಂಗಳೂರು: ನಟ ಪುನೀತ್‍ರಾಜ್‍ಕುಮಾರ್ ಪಾರ್ಥೀವ ಶರೀರ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಹಾದು ಹೋಗುವುದರಿಂದ ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯಾಗುವ ಸಾಧ್ಯತೆಗಳಿದ್ದು, ಸಂಚಾರ ಪೊಲೀಸರು ಮಾರ್ಗ ಬದಲಾವಣೆ ಮಾಡಿದ್ದಾರೆ. ಅಭಿಮಾನಿಗಳು ಕೊನೆಯದಾಗಿ ಪುನೀತ್ ಅವರ ಅಂತಿಮ ದರ್ಶನ ಪಡೆಯಲೆಂದು ಕಂಠೀರವ ಕ್ರೀಡಾಂಗಣದಿಂದ ಕಂಠೀರವ ಸ್ಟುಡಿಯೋವರೆಗೆ 13 ಕಿ.ಮೀ. ದೂರ ಅಪ್ಪು ಪಾರ್ಥೀವ ಶರೀರ ಮೆರವಣಿಗೆ ಸಾಗಲಿದೆ. ಸುಮಾರು ಮೂರು ಗಂಟೆಗಳ ಕಾಲ ಮೆರವಣಿಗೆ ಸಾಗಲಿದೆ ಎನ್ನಲಾಗುತ್ತಿದೆ.
ಪಾರ್ಥೀವ ಶರೀರ ತೆಗೆದುಕೊಂಡು ಹೋಗುವ ಮಾರ್ಗ:
ಕಂಠೀರವ ಕ್ರೀಡಾಂಗಣ ಹಿಂಭಾಗದ ದ್ವಾರದಲ್ಲಿ ಮೆರವಣಿಗೆ ಪ್ರಾರಂಭಿಸಿ, RRMR ರಸ್ತೆ, ಹಡ್ಸನ್ ವೃತ್ತ, ಪೊಲೀಸ್ ಕಾರ್ನರ್, ಕೆ.ಜಿ. ರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಪೋಸ್ಟ್ ಆಫೀಸ್ ರಸ್ತೆ, ಕೆ.ಆರ್. ವೃತ್ತದಲ್ಲಿ ಎಡಕ್ಕೆ ತಿರುಗಿ ಶೇಷಾದ್ರಿ ರಸ್ತೆ, ಮಹಾರಾಣಿ ಮೇಲು ಸೇತುವೆ, ಸಿಐಡಿ ಜಂಕ್ಷನ್, ಚಾಲುಕ್ಯ ವೃತ್ತ, ಹಳೇ ಹೈಗ್ರೌಂಡ್ಸ್ ಜಂಕ್ಷನ್‍ನಲ್ಲಿ ಎಡಕ್ಕೆ ತಿರುವು ಪಡೆದು ಟಿ. ಚೌಡಯ್ಯ ರಸ್ತೆ, ವಿಂಡ್ಸರ್ ಮ್ಯಾನರ್ ಜಂಕ್ಷನ್, ಬಿಡಿಎ ಮುಖ್ಯ ಕಚೇರಿ, ಪಿ.ಜಿ. ಹಳ್ಳಿ ಕ್ರಾಸ್, ಕಾವೇರಿ ಜಂಕ್ಷನ್ ಬಳಿಕ, ಬಾಷ್ಯಂ ವೃತ್ತ, ಸ್ಯಾಂಕಿ ರಸ್ತೆ, ಮಲ್ಲೇಶ್ವರಂ 18ನೇ ಕ್ರಾಸ್, ಮಾರಮ್ಮ ವೃತ್ತ, ಬಿಎಚ್‍ಇಎಲ್ ಸರ್ವೀಸ್ ರಸ್ತೆ, ಬಿಎಚ್‍ಇಎಲ್ ವೃತ್ತ, ಯಶವಂತಪುರ ವೃತ್ತ, ಮೆಟ್ರೊ ಷಾಪ್, ಮಾರಪ್ಪನ ಪಾಳ್ಯ, ಗೋವರ್ಧನ ಥಿಯೇಟರ್ ಜಂಕ್ಷನ್, ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣೆ, ಎಂಇಐ ಬಸ್ ನಿಲ್ದಾಣ, ಗೊರಗುಂಟೆಪಾಳ್ಯ ಜಂಕ್ಷನ್, ಎಇಎಂಟಿಐ ಜಂಕ್ಷನ್, ಲಾರಿ ಅಸೋಸಿಯೇಷನ್ ಕಚೇರಿ, ಎಫ್‍ಟಿಐ ವೃತ್ತ ಮಾರ್ಗವಾಗಿ ಸಾಗಿ ಕಂಠೀರವ ಸ್ಟುಡಿಯೋಗೆ ತಲುಪಲಿದೆ.
ಇದನ್ನೂ ಓದಿರಿ: ಯಕ್ಷ ಪ್ರಶ್ನೆಯಾದ ಚಿರು, ವಿಜಯ್, ಪುನೀತ್ ಜನ್ಮ ದಿನಾಂಕ: ಚಂದನವನಕ್ಕೆ '17'ರ ಕಂಟಕ
ಎಷ್ಟು ಪೊಲೀಸರ ನಿಯೋಜನೆ:
ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್‍ಸೂದ್, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ನೇತೃತ್ವದಲ್ಲಿ ಮೆರವಣಿಗೆ ನಡೆಯಲಿದ್ದು, ಇಬ್ಬರು ಹೆಚ್ಚವರಿ ಪೊಲೀಸ್ ಆಯುಕ್ತರು,19 ಮಂದಿ ಡಿಸಿಪಿಗಳು ಹಾಗೂ ಎಸಿಪಿಗಳು, 8,000 ಸಾವಿರ ಮಂದಿ ಕಾನೂನು ಸುವ್ಯವಸ್ಥೆ ಸಿಬ್ಬಂದಿ, 35 ಸಿಎಆರ್ ತುಕಡಿಗಳು ಹಾಗೂ 90 KSRP ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಾಹನ ಸಂಚಾರ ಮಾರ್ಗ ಬದಲಾವಣೆ :
ಪುನೀತ್ ರಾಜಕುಮಾರ್ ಪಾರ್ಥೀವ ಶರೀರ ಮೆರವಣಿಗೆ ಸಾಗುವುದರಿಂದ ಸಂಚಾರ ಪೊಲೀಸರು ನಗರದ ಕೆಲವು ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಿ ಪರ್ಯಾಯ ಮಾರ್ಗ ಕೈಗೊಂಡಿದ್ದಾರೆ. ಮೈಸೂರು ರಸ್ತೆಯಿಂದ ತುಮಕೂರು ರಸ್ತೆ ಕಡೆಗೆ ಹೋಗುವ ವಾಹನಗಳು, ನೈಸ್ ರಸ್ತೆ, ನಾಯಂಡಹಳ್ಳಿ, ನಾಗರಬಾವಿ ಹಾಗೂ ಸುಮನಹಳ್ಳಿ ಜಂಕ್ಷನ್ ಮಾರ್ಗವಾಗಿ ತೆರಳವಂತೆ ಮಾರ್ಗ ಬದಲಾವಣೆ ಮಾಡಲಾಗಿದೆ. ತುಮಕೂರು ರಸ್ತೆಯಿಂದ ಬೆಂಗಳೂರು ನಗರಕ್ಕೆ ಮೇಲ್ಸತುವೆ ಮೇಲೆ ಹೋಗುವ ವಾಹನಗಳು, ತುಮಕೂರು ರಸ್ತೆಯಿಂದ ಮೈಸೂರು ರಸ್ತೆ ಕಡೆಗೆ ಸಿಎಂಟಿಐ ಜಂಕ್ಷನ್‍ನಲ್ಲಿ ಚಲಿಸಬಹುದು. ಜಾಲಹಳ್ಳಿ ಕ್ರಾಸ್ ಕಡೆಯಿಂದ ರಾಜಕುಮಾರ್ ಸಮಾಧಿ ಕಡೆಗೆ ಹೋಗುವ ವಾಹನಗಳು, ಟಿವಿಎಸ್ ಕ್ರಾಸ್ ಮತ್ತು ಸೋನಾಲ್ ಗಾರ್ಮೆಂಟ್ಸ್ ಮಾರ್ಗವಾಗಿ ತೆರಳಬಹುದಾಗಿದೆ.
ಮಹಾಲಕ್ಷ್ಮಿಬಡಾವಣೆ ಕಡೆಯಿಂದ ರಾಜಕುಮಾರ್ ಸಮಾಧಿ ಕಡೆಗೆ ಹೋಗುವ ವಾಹನಗಳು, ಕೃಷ್ಣಾನಂದ ನಗರ ಜಂಕ್ಷನ್ ಬಳಿ ಮಾರ್ಗವಾಗಿ ಚಲಿಸುವಂತೆ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಪಶ್ಚಿಮ ವಿಭಾಗದ ಸಂಚಾರ ಡಿಸಿಪಿ ತಿಳಿಸಿದ್ದಾರೆ.
ನೈಸ್ ರಸ್ತೆ ಬಳಕೆ ಸೂಕ್ತ:
ತುಮಕೂರು ರಸ್ತೆ ಮಾರ್ಗವಾಗಿ ಬರುವ ವಾಹನಗಳು ಬಿಐಇಸಿ ಬಳಿ ನೈಸ್ ರಸ್ತೆ ಮೂಲಕ ಮೈಸೂರು ರಸ್ತೆ ಹಾಗೂ ಬಳ್ಳಾರಿ ರಸ್ತೆ ಕಡೆಗೆ ಸಂಚರಿಸುವುದು ಸೂಕ್ತವಾಗಿದೆ. ಏಕೆಂದರೆ, ನಗರದಲ್ಲಿ ಪಾರ್ಥೀವ ಶರೀರ ಮೆರವಣಿಗೆ ಹಿನ್ನಲೆಯಲ್ಲಿ ರಸ್ತೆ ಸಂಚಾರ ವ್ಯತ್ಯವಾಗುವ ಸಾಧ್ಯತೆ ಇರುವುದರಿಂದ ವಾಹನ ಸವಾರರು ಮುನ್ನೆಚರಿಕೆ ಕ್ರಮವಾಗಿ ಸಂಚಾರದಲ್ಲಿ ಮಾರ್ಪಡು ಮಾಡಿಕೊಳ್ಳಬೇಕಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.