ಬೆಂಗಳೂರು: ನಟ ಪುನೀತ್ ರಾಜ್ಕುಮಾರ್ ಅಗಲಿಕೆ ಹಿನ್ನೆಲೆ ನಗರದ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಇಂದು ಅನ್ನಸಂತರ್ಪಣೆ ಕಾರ್ಯ ನಡೆಯಲಿದೆ. 25 ಸಾವಿರಕ್ಕೂ ಅಧಿಕ ಅಭಿಮಾನಿಗಳು ಆಗಮಿಸುವ ನಿರೀಕ್ಷೆ ಇದ್ದು, 1 ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಜೊತೆಗೆ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.
ಇಂದು ಪುನೀತ್ ರಾಜಕುಮಾರ್ ಅವರ ಆಸೆಯಂತೆ, ಅಭಿಮಾನಿಗಳಿಗೆ ತ್ರಿಪುರವಾಸಿನಿ (ಗೇಟ್-2)ರಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ನಿಟ್ಟಿನಲ್ಲಿ ಕಾರ್ಯಕ್ರಮಕ್ಕೆ ಬರುವ ಸಂಖ್ಯೆ ಅಧಿಕವಾಗಿದ್ದು, ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ.
ಗೇಟ್ ನಂ.1 ಕೃಷ್ಣ ವಿಹಾರದಲ್ಲಿ ಸಾರ್ವಜನಿಕರಿಗೆ ವಾಹನ ನಿಲುಗಡೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಗೇಟ್ ನಂ.4 ಗಾಯತ್ರಿ ವಿಹಾರದಲ್ಲಿ ವಿಐಪಿ ವಾಹನಗಳ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ. ಗೇಟ್ ನಂ.2ರಲ್ಲಿ ಅನ್ನ ಸಂತರ್ಪಣೆ ಕಾರ್ಯ ನಡೆಯಲಿದೆ.
ಬಿಗಿ ಪೊಲೀಸ್ ಭದ್ರತೆ: ಅರಮನೆ ಮೈದಾನದ ಸುತ್ತ ಪೊಲೀಸರ ಬಿಗಿ ಬಂದೋಬಸ್ತ್ ವಹಿಸಲಾಗಿದ್ದು, ಭದ್ರತೆಗೆ 1000 ಪೊಲೀಸರನ್ನು ನಿಯೋಜಿಸಲಾಗಿದೆ. ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ನೇತೃತ್ವದಲ್ಲಿ ಮೂವರು ಎಸಿಪಿ, 32 ಪೊಲೀಸ್ ಇನ್‌ಸ್ಪೆಕ್ಟರ್, 70 ಪಿಎಸ್‌ಐ, 6 ಕೆಎಸ್‌ಆರ್‌ಪಿ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.