ಬೆಂಗಳೂರು : ಮಾನಸಿಕ ಸಮಸ್ಯೆ ಎಂಬುದು ನಿಜಕ್ಕೂ ಸಮಾಜದಲ್ಲಿ ಒಂದು ಪಿಡುಗಾಗಿ ಬದಲಾಗಿದೆ. ಮಾನಸಿಕ ಖಿನ್ನತೆ ಒಂದು ಹಂತದ ವಯಸ್ಸಿನವರಲ್ಲಿ ಕಾಡುತ್ತಿದ್ದ ಸಮಸ್ಯೆಯಾಗಿತ್ತು. ಆದರೆ, ಇದೀಗ ಪ್ರೌಢವಸ್ಥೆಯಲ್ಲಿರುವ ಮಕ್ಕಳಲ್ಲೂ ಖಿನ್ನತೆ, ಆತಂಕ, ಭಯದ ರೂಪದಲ್ಲಿ ಹೆಚ್ಚಾಗುತ್ತಿದೆ.
ಇದರ ಪರಿಣಾಮ ಮಕ್ಕಳು ಮನೆ ಬಿಟ್ಟು ಹೋಗುವುದು, ಸಣ್ಣ ವಿಷಯಕ್ಕೂ ಆತ್ಮಹತ್ಯೆಯಂತಹ ಕೆಲಸಕ್ಕೆ ಕೈ ಹಾಕುತ್ತಿದ್ದಾರೆ. ಮೊನ್ನೆಯಷ್ಟೇ 12-15 ವರ್ಷ ವಯಸ್ಸಿನ ಮಕ್ಕಳು ಪೋಷಕರಿಂದ ಓದಲು ಒತ್ತಡ ಹೆಚ್ಚಾಗಿಯೆಂದು ಪತ್ರ ಬರೆದು ಮನೆ ಬಿಟ್ಟು ಹೋಗಿದ್ದರು. ಸದ್ಯ ನಾಪತ್ತೆಯಾಗಿದ್ದ ಈ ಮಕ್ಕಳೆಲ್ಲರೂ ಪುನಃ ಸಿಕ್ಕಿದ್ದಾರೆ.
ಇಷ್ಟಕ್ಕೂ ಮಕ್ಕಳು ಇಂತಹ ನಿರ್ಧಾರಕ್ಕೆ ಮುಂದಾಗುತ್ತಿರುವುದು ಯಾಕೆ? ಮಾನಸಿಕ ಖಿನ್ನತೆ ಹೆಚ್ಚಾಗಲು ಕಾರಣವೇನು? ಪೋಷಕರು ಮಕ್ಕಳ ವಿಚಾರದಲ್ಲಿ ಅವರ ನಡವಳಿಕೆ ಹೇಗೆ ಬದಲಾಯಿಸಿಕೊಳ್ಳಬೇಕು? ಎಂಬುದರ ಕುರಿತು ಮನೋ ವೈದ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾವನೆಗಳಿಗೆ ಸ್ಪಂದಿಸಿ : ಮಕ್ಕಳ ಮಾನಸಿಕ ಆರೋಗ್ಯದ ಕುರಿತು ಮಾತನಾಡಿರುವ ಮನೋ ವೈದ್ಯ ಹಾಗೂ ನಿದ್ರಾ ರೋಗ ತಜ್ಞ ಡಾ.ಸತೀಶ್ ರಾಮಯ್ಯ, ಪಾಲಕ-ಪೋಷಕರು ಮಕ್ಕಳ ವಿಚಾರದಲ್ಲಿ ತಪ್ಪು-ಸರಿ ಕುರಿತು ತೂಕ ಹಾಕಬಾರದು. ಬದಲಿಗೆ ಅವರ ಭಾವನೆಗೆ ಸ್ಪಂದಿಸಬೇಕು ಎಂದು ತಿಳಿಸಿದ್ದಾರೆ.
ಮಕ್ಕಳ ಜಾಗದಲ್ಲಿ ನಿಂತು ನೋಡಿದಾಗಲೇ ಅವರಲ್ಲಿ ಆತ್ಮಸ್ಥೈರ್ಯ ಹೇಗಿದೆ? ಎಂಬುದನ್ನು ತಿಳಿಯಲು ಸಾಧ್ಯ. ಕೂಲಂಕಷವಾಗಿ ಭಾವನಾತ್ಮಕವಾಗಿ ನೋಡಿ. ಅವರ ತಪ್ಪುಗಳು ಅಥವಾ ನೆಗೆಟಿವ್ ಯೋಚನೆಗಳು ಅರ್ಥವಾದಾಗ ಅದರ ಬಗ್ಗೆ ತಲೆಕೆಡಿಸಿಕೊಳ್ಳದಂತೆ ತಿಳುವಳಿಕೆ ಹೇಳಬೇಕು ಎಂದು ಸಲಹೆ ನೀಡಿದರು.
ಮಕ್ಕಳ ನಡವಳಿಕೆ ಮೇಲೆ ಎಚ್ಚರಿಕೆಯಿರಲಿ : ಮಕ್ಕಳು ಮಂಕಾಗುವುದು, ಸುಖಾಸುಮ್ನೆ ಕೋಪ, ಒಬ್ಬಂಟಿಯಾಗಿರುವುದು ಈ ರೀತಿಯ ನಡವಳಿಕೆಯಲ್ಲಿ ಬದಲಾವಣೆಯಾದರೆ ಅದನ್ನ ಎಚ್ಚರಿಕೆಯಿಂದ ಗಮನಿಸಬೇಕು. ಸಾಮಾಜಿಕವಾಗಿ ಅವರನ್ನ ಬೆರೆಯಲು ಬಿಡಬೇಕು.
ಸಾಂಕ್ರಾಮಿಕ ಕೋವಿಡ್ ಸೋಂಕು ವ್ಯಾಪಿಸಿದ ಮೇಲೆ ಮಕ್ಕಳ ಮಾನಸಿಕ ಸ್ಥಿತಿ ಬದಲಾಗಿದೆ. ಎರಡು ವರ್ಷಗಳು ಅವರನ್ನ ಕಟ್ಟಿ ಹಾಕಿದಂತೆ ಆಗಿದೆ. ಇದು ಅವರ ಮನಸ್ಸಿನ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಿದೆ ಎಂದು ಅವರು ವಿವರಿಸಿದರು.
ಆತ್ಮವಿಶ್ವಾಸ ಹೆಚ್ಚಿಸಿ : ಮಕ್ಕಳ ಓದಿನ ವಿಚಾರ ಅಥವಾ ಮತ್ಯಾವುದೇ ಕಾರಣವಿದ್ದರೂ ಅವರಲ್ಲಿ ಆತ್ಮವಿಶ್ವಾಸವನ್ನ ಹೆಚ್ಚಿಸಬೇಕು. ಪೋಷಕರೇ ಇಲ್ಲಿ ಮೊದಲಿಗೆ ಕೌನ್ಸಿಲಿಂಗ್ ಮಾಡುವ ಕೆಲಸ ಮಾಡಬೇಕು. ಮಕ್ಕಳಲ್ಲಿ ಒತ್ತಡ ಹೆಚ್ಚಾದಾಗ, ನಾನೊಬ್ಬ ಕೈಲಾಗದವನು. ನನ್ನ ಕೈನಲ್ಲಿ ಏನು ಮಾಡಲು ಆಗಲ್ಲ ಎಂಬ ಭಾವನೆಗಳು ಬರುತ್ತವೆ.
ಇದರಿಂದ ಆತ್ಮವಿಶ್ವಾಸ ಕಳೆದುಕೊಂಡು ಆತಂಕ, ಖಿನ್ನತೆ ಹೆಚ್ಚಾಗುತ್ತೆ. ಇದು ಮಕ್ಕಳು ತಪ್ಪು ದಾರಿ ತುಳಿಯುವಂತೆ ಮಾಡುತ್ತದೆ. ಸೋಶಿಯಲ್ ಮೀಡಿಯಾ, ಮೊಬೈಲ್, ಗೆಜೆಟ್ಸ್‌ಗಳಿಗೆ ಅಡಿಕ್ಟ್ ಆಗುವುದನ್ನ ತಪ್ಪಿಸಬೇಕು. ಮಕ್ಕಳು ತೀವ್ರ ಮಾನಸಿಕ ಸಮಸ್ಯೆಯನ್ನ ಹೊಂದಿದ್ದರೆ ಅವರಿಗೆ ಮನೋ ವೈದ್ಯರ ಬಳಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವುದು ಸೂಕ್ತ ಎಂದು ಸಲಹೆ ನೀಡಿದರು.
ಮಕ್ಕಳ ಜತೆಗೆ ಒಡನಾಟ ಹೆಚ್ಚಾಗಲಿ : ಮಣಿಪಾಲ್ ಆಸ್ಪತ್ರೆಯ ಕ್ಲಿನಿಕಲ್ ಸೈಕಾಲಜಿ ಕನ್ಸಲ್ಟೆಂಟ್ ಡಾ. ಸತೀಶ್ ಕುಮಾರ್ ಸಿ ಆರ್ ಮಾತಾನಾಡಿ, ಪೋಷಕರಿಗೆ ಹೇಳದೆ ಕೇಳದೆ ಮಕ್ಕಳು ಮನೆ ಬಿಟ್ಟು ಹೋಗುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದನ್ನ ವಿಶ್ವಾಸಾರ್ಹ ವರ್ತನೆ (truancy behavior) ಎಂದು ಹೇಳಲಾಗುತ್ತದೆ.
ಮಕ್ಕಳು ಮನೆ ಬಿಟ್ಟು ಹೋಗಲು ಪ್ರಮುಖ ಎರಡು ಕಾರಣ
- ಮನೆಯಲ್ಲಿ ಅಪ್ಪ-ಅಮ್ಮ ಜಗಳ, ತಂದೆ ಕುಡಿತದ ದಾಸರಾಗಿದ್ದಾಗ, ಕುಟುಂಬ ಕಲಹ ಹೀಗೆ ನಾನಾ ರೀತಿಯ ಕುಟುಂಬ ಸಮಸ್ಯೆ ಮಕ್ಕಳ ಮೇಲೆ ಒತ್ತಡವನ್ನುಂಟು ಮಾಡುತ್ತದೆ.
- ಸಾಮಾನ್ಯವಾಗಿ ಪೋಷಕರು ನಮ್ಮ ಮಕ್ಕಳು ಚೆನ್ನಾಗಿ ಓದಬೇಕು ಅಂತಾ ಹೆಚ್ಚಿನ ಒತ್ತಡ ಹೇರುವುದು. ಇಲ್ಲಿ ಮಕ್ಕಳ ಆಸೆಯನ್ನ ಪೋಷಕರು ತಿಳಿಯುವುದಿಲ್ಲ. ಇದರಿಂದ ಮಕ್ಕಳು ಮನೆ ಬಿಟ್ಟು ಹೋಗುವ ಮನಸ್ಥಿತಿಯನ್ನ ಹೊಂದಿರುತ್ತಾರೆ.
ಉದಾಹರಣೆ-ಇಂಜಿನಿಯರ್ ಓದಲು ಇಷ್ಟವಿಲ್ಲದೇ ಇದ್ದರೂ ಅದನ್ನೇ ಓದುವಂತೆ ದುಂಬಾಲು ಬೀಳುವುದು ಮಾಡುತ್ತಾರೆ. ಮಣಿಪಾಲ್ ಆಸ್ಪತ್ರೆಯಲ್ಲಿಯೂ ಇಂತಹ ಅದೆಷ್ಟೋ ಪ್ರಕರಣಗಳನ್ನ ಕಂಡಿದ್ದೇವೆ. ಇದಕ್ಕೆ ಪರಿಹಾರವೆಂದರೆ ಪೋಷಕರು ತಮ್ಮ ಮಕ್ಕಳಿಗೆ ಏನುಬೇಕೆಂದು ತಿಳಿದು ಕೊಳ್ಳಬೇಕು. ಆದರೆ, ಭಾಗಶಃ ಪ್ರಕರಣದಲ್ಲಿ ಪೋಷಕರು ತಮ್ಮ ಇಚ್ಛೆಯನ್ನ ಮಕ್ಕಳ ಮೇಲೆ ಹಾಕಿ ಒತ್ತಡವನ್ನ ಹೆಚ್ಚಿಸುತ್ತಾರೆ.
ಇದರ ಬದಲು ಅವರ ಇಚ್ಛೆಯನ್ನ ಅರಿಯುವುದು, ಅದರ ಕುರಿತು ತಿಳುವಳಿಕೆ ನೀಡುವುದು ಅಗತ್ಯ. ಸಮಸ್ಯೆಗೆ ಪರಿಹಾರವೆಂದರೆ ಮಕ್ಕಳ ಜೊತೆಯಲ್ಲೇ ಊಟ ಮಾಡುವುದು, ನಿತ್ಯ 10 ನಿಮಿಷ ಒಟ್ಟಿಗೆ ಮಾತಡಾವುದು, ಪರಸ್ಪರ ದಿನದ ಘಟನೆಯನ್ನ ಹಂಚಿಕೊಳ್ಳುವುದು ಮಾಡಿದ್ದರೆ ಅರ್ಧ ಸಮಸ್ಯೆ ಪರಿಹಾರವಾಗುತ್ತದೆ ಎಂದು ಡಾ. ಸತೀಶ್ ಕುಮಾರ್ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಮಕ್ಕಳು ನಾಪತ್ತೆ ಪ್ರಕರಣ: ಓರ್ವ ಯುವತಿ ಸೇರಿ ನಾಲ್ವರು ಮಂಗಳೂರಿನಲ್ಲಿ ಪತ್ತೆ