ಬೆಂಗಳೂರು: ಪಿಎಸ್ಐ ನೇಮಕಾತಿ ಹಗರಣದಲ್ಲಿ ಬಂಧಿತರಾಗಿರುವ ಹಿರಿಯ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಅವರು ಅಕ್ರಮದಲ್ಲಿ ಶಾಮೀಲಾಗಿರುವ ಹಲವಾರು ಗಣ್ಯ ರಾಜಕಾರಣಿಗಳು ಮತ್ತು ಅಧಿಕಾರಿಗಳ ಹೆಸರನ್ನು ಬಹಿರಂಗಪಡಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಹೀಗಾಗಿ ರಾಜ್ಯ ಸರ್ಕಾರದಲ್ಲಿನ ಕೆಲ ಸಚಿವರು ಸೇರಿದಂತೆ ಹಲವರಲ್ಲಿ ಭೀತಿ ಶುರುವಾಗಿದೆ.
ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಪೌಲ್ ಸಿಐಡಿ ತನಿಖೆಗೆ ನಿರೀಕ್ಷಿತ ಪ್ರಮಾಣದಲ್ಲಿ ಸಹಕಾರ ನೀಡಿಲ್ಲವೆಂದು ಹೇಳಲಾಗುತ್ತಿದೆ. ಈ ಕಾರಣಕ್ಕಾಗಿ ಅವರನ್ನು ಸುಳ್ಳು ಪತ್ತೆ ಪರೀಕ್ಷೆಗೆ(ಪಾಲಿಗ್ರಫ್) ಒಳಪಡಿಸಲು ಅನುಮತಿ ನೀಡುವಂತೆ ಸಿಐಡಿ ತನಿಖಾಧಿಕಾರಿಗಳ ತಂಡ ನ್ಯಾಯಾಲಯದ ಅನುಮತಿ ಕೋರಿದೆ.
ಸಿಐಡಿ ತನಿಖಾ ತಂಡದೆದುರು ಹಗರಣಕ್ಕೆ ಸಂಬಂಧಿಸಿದ ಮಹತ್ವದ ಮಾಹಿತಿ ಬಹಿರಂಗಪಡಿಸಲು ನಿರಾಕರಿಸುತ್ತಿರುವ ಅಮೃತ್ ಪೌಲ್, ನ್ಯಾಯಾಧೀಶರ ಮುಂದೆ ಕೆಲವು ಹೇಳಿಕೆಗಳನ್ನು ದಾಖಲಿಸಿದ್ದಾರೆ. ಆರೋಪಿ ಅಧಿಕಾರಿ ತಮ್ಮನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವಂತೆ ಸಿಐಡಿಗೆ ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ. ಅಮೃತ್ ಪೌಲ್ ಕೋರ್ಟ್ನಲ್ಲಿ ನ್ಯಾಯಾಧೀಶರ ಮುಂದೆ ಪಿಎಸ್ಐ ನೇಮಕಾತಿ ಪ್ರಕರಣದಲ್ಲಿ ಭಾಗಿಯಾದ ಗಣ್ಯ ರಾಜಕಾರಣಿಗಳ ಮತ್ತು ಅಧಿಕಾರಿಗಳ ಹೆಸರು ಬಹಿರಂಗಪಡಿಸಿದರೆ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎನ್ನುವ ಆತಂಕ ರಾಜಕಾರಣಿಗಳು ಮತ್ತು ಅಧಿಕಾರಿಗಳದ್ದು.
ಆಸ್ತಿ ಖರೀದಿ ಬಗ್ಗೆ ಮಾಹಿತಿ ಸಂಗ್ರಹ: ಒಂದೊಮ್ಮೆ ಕೋರ್ಟ್ನಲ್ಲಿ ಪ್ರಮುಖ ರಾಜಕಾರಣಿಗಳ ಹೆಸರನ್ನು ಅಮೃತ್ ಪೌಲ್ ಬಹಿರಂಗಪಡಿಸಿದರೆ, ಇದಕ್ಕೆ ಪ್ರತಿಯಾಗಿ ಅಮೃತ್ ಪೌಲ್ ಅವರು ಒಬ್ಬ ಭ್ರಷ್ಟ ಪೊಲೀಸ್ ಅಧಿಕಾರಿಯಾಗಿದ್ದರು, ಈ ಹಿಂದೆ ಕಾರ್ಯನಿರ್ವಹಿಸಿದ ಹಲವಾರು ಕಡೆ ಅವರು ಭ್ರಷ್ಟಾಚಾರವೆಸಗಿದ್ದಾರೆ. ಆದಾಯಕ್ಕಿಂತಲೂ ಹೆಚ್ಚಿನ ಆಸ್ತಿ ಹೊಂದಿದ್ದಾರೆ ಎನ್ನುವುದನ್ನು ಸಾಬೀತುಪಡಿಸಲು ವೇದಿಕೆ ಸಿದ್ಧಪಡಿಸಿಕೊಳ್ಳಲಾಗುತ್ತಿದೆ ಎಂದು ಹೇಳಲಾಗಿದೆ.
ಅಮೃತ್ ಪೌಲ್ ಅವರು ಎಲ್ಲೆಲ್ಲಿ ಆಸ್ತಿ ಮಾಡಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಸ್ಥಳಗಳಲ್ಲಿ ಮತ್ತು ಅವರ ತವರು ರಾಜ್ಯದಲ್ಲಿ ಆಸ್ತಿ ಖರೀದಿಸಿದ ಬಗ್ಗೆ ಸಿಐಡಿ ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಸಿಐಡಿ ತಂಡವು ಅಮೃತ್ ಪೌಲ್ ತವರು ರಾಜ್ಯಕ್ಕೆ ಭೇಟಿ ನೀಡಿ ಜಮೀನು ಖರೀದಿ ಕುರಿತಾದ ದಾಖಲೆಗಳನ್ನು ಕಲೆ ಹಾಕುತ್ತಿದೆ. ಅಷ್ಟೇ ಅಲ್ಲದೇ ಕೇಂದ್ರ ವಲಯದ ಐಜಿಪಿಯಾಗಿದ್ದಾಗ ಚಿಕ್ಕಬಳ್ಳಾಪುರ ತಾಲೂಕಿನ ಹೊಸ ಹುಡ್ಯ ಗ್ರಾಮದಲ್ಲಿ ಫಾರ್ಮ ಹೌಸ್, ಮಾವಿನ ತೋಟ, ಕೃಷಿ ಭೂಮಿ ಸೇರಿದಂತೆ ಹಲವು ಆಸ್ತಿಗಳನ್ನು ಖರೀದಿಸಿದ್ದು, ಕೆಲವು ಆಸ್ತಿಗಳನ್ನು ತಮ್ಮ ತಂದೆ ನೇತುರಾಮ್ ಬನ್ಸಾಲ್ ಅವರ ಹೆಸರಿನಲ್ಲಿ ನೋಂದಣಿ ಮಾಡಿದ್ದಾರೆಂದು ಗೊತ್ತಾಗಿದೆ.
ಶಿಡ್ಲಘಟ್ಟ ತಾಲೂಕಿನ ನೆಲಪ್ಪನಹಳ್ಳಿಯಲ್ಲಿಯೂ ಅಮೃತ್ ಪೌಲ್ ಅವರು ತಮ್ಮ ತಂದೆಯ ಹೆಸರಿನಲ್ಲಿ ಜಮೀನು ಖರೀದಿ ಮಾಡಿದ ಬಗ್ಗೆ ಸಿಐಡಿ ಮಾಹಿತಿ ಸಂಗ್ರಹಿಸುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳು ಮತ್ತು ಉತ್ತರ ಭಾರತದಲ್ಲಿ ಇವರು ಹೊಂದಿದ ಆಸ್ತಿಗಳ ಬಗೆಗೂ ತೀವ್ರ ಶೋಧ ನಡೆಯುತ್ತಿದೆ.
ಇದನ್ನೂ ಓದಿ: ಅಮೃತ್ ಪಾಲ್ ಬಂಧನ ಪ್ರಕರಣ: ಡಿಜಿಟಲ್ ಎವಿಡೆನ್ಸ್ ಸಂಗ್ರಹಿಸುತ್ತಿರುವ ಸಿಐಡಿ