ಬೆಂಗಳೂರು: ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಮರು ಪರೀಕ್ಷೆಗೆ ಸರ್ಕಾರ ಆದೇಶಿಸಿರುವ ವಿರುದ್ಧ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. ಮರು ಪರೀಕ್ಷೆ ನಡೆಸುವ ನಿರ್ಧಾರ ವಾಪಸ್ ಪಡೆಯಬೇಕು ಎಂದು ಈಗಾಗಲೇ ಪಿಎಸ್ಐ ಆಗಿ ಆಯ್ಕೆ ಆದ ಅಭ್ಯರ್ಥಿಗಳು ಇಲ್ಲಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ.
2020-21ನೇ ಸಾಲಿನ ಪಿಎಸ್ಐ ನೇಮಕಾತಿ ಪರೀಕ್ಷೆಯ ಅಕ್ರಮ ಸಂಬಂಧ ಈಗಾಗಲೇ ಸಿಐಡಿ ತನಿಖೆ ಚಾಲ್ತಿಯಲ್ಲಿದೆ. ಮಧ್ಯದಲ್ಲೇ ಸರ್ಕಾರ ಪರೀಕ್ಷೆಯನ್ನ ರದ್ದುಗೊಳಿಸಿ, ಮರು ಪರೀಕ್ಷೆ ನಡೆಸಲು ಮುಂದಾಗಿರುವುದಕ್ಕೆ ಆಯ್ಕೆಯಾದ ಅಭ್ಯರ್ಥಿಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ನೂರು ಜನ ಆರೋಪಿಗಳಿಗೆ ಶಿಕ್ಷೆ ಆಗದಿದ್ದರೂ, ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು ಎಂದು ಕಾನೂನೇ ಹೇಳುತ್ತದೆ. ಆದರೆ, ಸರ್ಕಾರದ ನಿರ್ಧಾರದಿಂದ ನಿರಪರಾಧಿಗಳೇ ಶಿಕ್ಷೆಗೆ ಗುರಿಯಾದಂತಾಗಿದೆ ಎನ್ನುತ್ತಿರುವ ಅಭ್ಯರ್ಥಿಗಳು ಸರ್ಕಾರ ತನ್ನ ನಿರ್ಧಾರ ವಾಪಸ್ ಪಡೆಯುವಂತೆ ಒತ್ತಾಯಿಸುತ್ತಿದ್ದಾರೆ. ಫ್ರೀಡಂ ಪಾರ್ಕ್‌ನಲ್ಲಿ ಅಭ್ಯರ್ಥಿಗಳು ಜಮಾವಣೆ ಆಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.
545 ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮ ಪ್ರಕರಣ ಸಂಬಂಧ ಈಗಾಗಲೇ ಪ್ರಮುಖ ಆರೋಪಿ ದಿವ್ಯಾ ಹಾಗರಿಗಿ ಸೇರಿ ಹಲವರನ್ನು ಸಿಐಡಿ ಬಂಧಿಸಿ ವಿಚಾರಣೆಗೊಳಪಡಿಸಿದೆ. ಈ ಮಧ್ಯೆ ನಿನ್ನೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪರೀಕ್ಷೆ ರದ್ದುಗೊಳಿಸಿ, ಮರು ಪರೀಕ್ಷೆ ಮಾಡುವುದಾಗಿ ಪ್ರಕಟಿಸಿದ್ದಾರೆ. ಇದು ಆಯ್ಕೆ ಆದ ವಿದ್ಯಾರ್ಥಿಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
(ಇದನ್ನೂ ಓದಿ: ಪಿಎಸ್ಐ ನೇಮಕಾತಿ ಪರೀಕ್ಷಾಅಕ್ರಮ: ಪ್ರಕರಣದ ಕಿಂಗ್‌ಪಿನ್ 18 ದಿನಗಳ ಪಯಣ ಹೇಗಿತ್ತು ಗೊತ್ತಾ?)