ಬೆಂಗಳೂರು : ಪಕ್ಷದ ವೀಕ್ಷಕರಿಗೆ ಜವಾಬ್ದಾರಿ ವಹಿಸಿರುವ ಜಿಲ್ಲೆಗಳಲ್ಲಿ ಜೆಡಿಎಸ್‌ನ ಪರಿಸ್ಥಿತಿ ಕುರಿತು ಮತ್ತು ಪಕ್ಷ ಸಂಘಟನೆಗೆ ಕೈಗೊಳ್ಳಬಹುದಾದ ಪರಿಣಾಮಕಾರಿ ಕ್ರಮಗಳ ಸಮಗ್ರ ವರದಿಯನ್ನು 15 ದಿನಗಳಲ್ಲಿ ನೀಡಬೇಕು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸೂಚಿಸಿದ್ದಾರೆ.
ಪಕ್ಷದ ಕಚೇರಿ ಜೆ ಪಿ ಭವನದಲ್ಲಿ ಇಂದು ಕರೆದಿದ್ದ ಜಿಲ್ಲಾ ಮತ್ತು ತಾಲೂಕು ಮಟ್ಟದ ವೀಕ್ಷಕರ ಸಭೆಯಲ್ಲಿ ಮಾತನಾಡಿದ ಅವರು, ಬೂತ್ ಮಟ್ಟದಿಂದ ಪಕ್ಷ ಸಂಘಟನೆಯಾಗಬೇಕು. ವೀಕ್ಷಕರು ಪರಿಣಾಮಕಾರಿ ಕೆಲಸ ಮಾಡಿದ್ರೆ ಮಾತ್ರ ಪಕ್ಷವನ್ನು ಬಲಗೊಳಿಸಲು ಸಾಧ್ಯ. ಜಿಲ್ಲೆಗಳಿಗೆ ಭೇಟಿ ನೀಡಿ ತಳಮಟ್ಟದಿಂದ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.
ವೀಕ್ಷಕರು ಪರಿಣಾಮಕಾರಿ ಕೆಲಸ ಮಾಡಿ : ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸದ ವೀಕ್ಷಕರನ್ನು ಮುಲಾಜಿಲ್ಲದೆ ತೆಗೆದು ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದ ಹೆಚ್‌ಡಿಕೆ, ವೀಕ್ಷಕರು ಪರಿಣಾಮಕಾರಿ ಕೆಲಸ ಮಾಡಿದ್ರೆ ಮಾತ್ರ ಮುಂದಿನ ದಿನದಲ್ಲಿ ಅವರಿಗೆ ಪಕ್ಷದಲ್ಲಿ ಉತ್ತಮ ಸ್ಥಾನಗಳು ಲಭಿಸಲಿವೆ ಎಂದರು.
ವೀಕ್ಷಕರ ತಂಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರ ನಿಯೋಜನೆ ಮಾಡಬಾರದು ಎಂದು ಭಾವಿಸಿದ್ದೆ. ಆದರೆ, ಒತ್ತಡ ಹಾಕಿ ವೀಕ್ಷಕರ ತಂಡಕ್ಕೆ ಹಲವು ಮಂದಿ ಸೇರಿದ್ದಾರೆ. ತಂಡ ರಚನೆ ಮಾಡಿರುವುದು ಕೇವಲ ಪಕ್ಷವನ್ನು ಬಲಗೊಳಿಸಲು ವಿನಃ ಅದೇನು ಅಧಿಕಾರ ಅಲ್ಲ.
ವೀಕ್ಷಕರು ಹೇಳಿದ ಕೆಲಸಗಳೆಲ್ಲಾ ನಡೆಯುತ್ತಿವೆ ಎಂದು ಭಾವಿಸುವ ಅಗತ್ಯ ಇಲ್ಲ. ಅವರಿಗೆ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಅಧಿಕಾರವಾಗಲಿ, ಭಿ ಫಾರಂ ನೀಡುವ ಅಧಿಕಾರವಾಗಲಿ ನೀಡಿಲ್ಲ. ಜಿಲ್ಲೆಯಲ್ಲಿ ಪಕ್ಷದ ಸಂಘಟನಾ ಶಕ್ತಿಯ ವರದಿ ನೀಡಲು ಮಾತ್ರ ವೀಕ್ಷಕರ ತಂಡ ರಚನೆ ಮಾಡಲಾಗಿದೆ. 15 ದಿನದಲ್ಲಿ ಕ್ಷೇತ್ರವಾರು ಸಂಘಟನೆಯ ಶಕ್ತಿ ಬಗ್ಗೆ ಮಾಹಿತಿ ನೀಡಬೇಕು ಎಂದರು.
98 ಕ್ಷೇತ್ರಗಳ ಪಟ್ಟಿ ತಯಾರು : ನನಗಿರುವ ರಾಜಕೀಯ ಅನುಭವ ಮತ್ತು ಕೈಗೊಂಡಿರುವ ಪ್ರವಾಸದ ಆಧಾರದ ಮೇಲೆ ರಾಜ್ಯದ 98 ಕ್ಷೇತ್ರಗಳ ಪಟ್ಟಿ ಮಾಡಿದ್ದೇನೆ. ಆ ಕ್ಷೇತ್ರದಲ್ಲಿ ಪಕ್ಷದ ಕಡೆ ಹೆಚ್ಚಿನ ಒಲವು ಇರುವ ಬಗ್ಗೆ ಮಾಹಿತಿ ಕೂಡ ಸಂಗ್ರಹಿಸಿದ್ದೇನೆ.
98 ಕ್ಷೇತ್ರಗಳ ಪ್ರಮುಖರ ಸಭೆಯನ್ನು ಪ್ರತ್ಯೇಕವಾಗಿ ಕರೆಯಲಾಗುವುದು. 98 ಕ್ಷೇತ್ರದಲ್ಲಿ ಯಾವ ರೀತಿ ಕೆಲಸ ಮಾಡಬೇಕೆಂಬುದರ ಬಗ್ಗೆ ಸಮಾಲೋಚನೆ ನಡೆಸಲಾಗುವುದು. ಅಲ್ಲಿ ಅಭ್ಯರ್ಥಿಗಳು ಗೆದ್ದು ಬರಲೇಬೇಕು. ಆ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದೇನೆ ಎಂದರು.
ಕೇವಲ 98 ಕ್ಷೇತ್ರದಲ್ಲಿ ಮಾತ್ರವಲ್ಲದೇ, ಇತರೆ ಕ್ಷೇತ್ರದಲ್ಲಿಯೂ ದುಡಿಯಬೇಕು. ಕಾರ್ಯಕರ್ತರಿಂದ ನಾಯಕರಾಗಿ ಉದ್ಭವವಾಗಬೇಕು. ಒಂದು ದಿನದ ಕಾರ್ಯಾಗಾರವನ್ನು ಸಹ ಮಾಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ನಾಯಕತ್ವದ ಕೊರತೆ : ಪಕ್ಷದ ಕಚೇರಿಯಿಂದ ನಾಯಕರಾಗುವುದಿಲ್ಲ. ರಾಜ್ಯದಲ್ಲಿ ನಾಯಕತ್ವದ ಕೊರತೆ ಇದ್ದು, ರಾಜ್ಯ ರಾಜಕೀಯದಲ್ಲಿ ಹೊಸ ನಾಯಕತ್ವ ಸೃಷ್ಟಿಸುವ ವ್ಯವಸ್ಥೆಯಾಗಬೇಕು. ಗುರಿ ಇಟ್ಟುಕೊಂಡು ಸಕ್ರಿಯವಾಗಿ ಕೆಲಸ ಮಾಡಿದ್ರೆ ಯಶಸ್ಸು ಕಾಣಲು ಸಾಧ್ಯ. ಚುನಾವಣೆ ವೇಳೆ ಬಿ ಫಾರಂ ತೆಗೆದುಕೊಂಡು ಹೋಗಿ ಪ್ರಚಾರ ಮಾಡಿದ್ರೆ ಯಾವುದೇ ಪ್ರಯೋಜನ ಇಲ್ಲ.
ಚುನಾವಣೆಗೆ ಇನ್ನು ಎರಡು ವರ್ಷಗಳ ಸಮಯ ಇದೆ. ಮೈದಾನದಲ್ಲಿ ಕಸರತ್ತು ಮಾಡಿದರೆ ಮಾತ್ರ ಫಲ ಸಿಗುತ್ತದೆಯೇ ಹೊರತು ಜೈಕಾರ ಹಾಕಿಕೊಂಡು ಇದ್ದರೆ ಉಪಯೋಗವಾಗುವುದಿಲ್ಲ ಎಂದು ಮುಖಂಡರಿಗೆ ಕಿವಿ ಮಾತು ಹೇಳಿದರು.
ಮಹಿಳೆಯರಿಗೆ ಹೆಚ್ಚಿನ ಜವಾಬ್ದಾರಿ : ಮಹಿಳೆಯರಿಗೆ ಹೆಚ್ಚಿನ ಜವಾಬ್ದಾರಿ ನೀಡಬೇಕು ಜೆಡಿಎಸ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ಸೇರಿಸಿಕೊಳ್ಳುವುದರ ಮೂಲಕ ಅವರಿಗೆ ಪಕ್ಷ ಸಂಘಟನೆಯ ಜವಾಬ್ದಾರಿ ನೀಡಬೇಕು ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಗ್ರಾಪಂ ಚುನಾವಣೆಯಲ್ಲಿ ವಿದ್ಯಾವಂತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದಾರೆ. ಮೀಸಲಾತಿ ಹಿನ್ನೆಲೆ ಜಯಗಳಿಸಲು ಸುಲಭವಾಗಿದೆ. ಪಕ್ಷದ ವೀಕ್ಷಕರು ಸಹ ಮಹಿಳೆಯರ ಬಳಿ ಹೋಗಿ ಅವರ ಸಮಸ್ಯೆಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಮಹಿಳೆಯರ ಸಮಸ್ಯೆಗಳಿಗೆ ಹೊಸ ಕಾರ್ಯಕ್ರಮಗಳನ್ನು ಯಾವ ರೀತಿ ರೂಪಿಸಬೇಕು ಎಂಬುದರ ಚಿಂತನೆ ನಡೆಸಲಾಗುತ್ತಿದೆ ಎಂದರು.
ಮಹಿಳೆಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೆಚ್ಚಿನ ಆದ್ಯತೆ ನೀಡಬೇಕು. ಪಕ್ಷದ ವತಿಯಿಂದ ಒಳ್ಳೆಯ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂಬ ಭಾವನೆ ಮೂಡಿಸಬೇಕು. ಮಹಿಳೆಯರು ಒಮ್ಮೆ ತೀರ್ಮಾನಿಸಿದ್ರೆ ಅವರು ಅದನ್ನು ಬದಲಿಸುವುದಿಲ್ಲ.
ರೈತರ ಸಾಲ ಮನ್ನಾ ಮಾಡಿರುವ ಬಗ್ಗೆ ಹೇಳಿದರೆ ಅವರು ನಮ್ಮ ಕೈಹಿಡಿಯಲಿದ್ದಾರೆ ಎಂದು ಕೊಂಡಿದ್ದೆವು. ಆದರೆ, ನಿರೀಕ್ಷಿತ ಮಟ್ಟದಲ್ಲಿ ಅದು ಸಾಧ್ಯವಾಗುತ್ತಿಲ್ಲ. ಹೀಗಾಗಿ, ತಾಲೂಕು, ಜಿಲ್ಲಾ ಕೇಂದ್ರದಲ್ಲಿ ಮಹಿಳೆಯರನ್ನು ಪಕ್ಷಕ್ಕೆ ಕರೆತಂದು ಸಂಘಟನೆಯ ಜವಾಬ್ದಾರಿ ನೀಡಬೇಕು ಎಂದು ಹೇಳಿದರು.
ಫೆಬ್ರವರಿ 14 ರಂದು ಸಮಾವೇಶ : ನಗರದ ಅರಮನೆ ಮೈದಾನದಲ್ಲಿ ಫೆಬ್ರವರಿ 14ರಂದು ಕಾರ್ಯಕರ್ತರ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ. ಪಕ್ಷದ ವರಿಷ್ಠ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಪಕ್ಷದ ಬಲವರ್ಧನೆ ಕುರಿತು ಕಾರ್ಯಕರ್ತರಿಗೆ ಸಂದೇಶ ನೀಡಲಿದ್ದಾರೆ. ಅಂದು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.