ಬೆಂಗಳೂರು: ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ 12 ಸಾವಿರ ವೇತನ ನಿಗದಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆ ಒತ್ತಾಯಿಸಿ ಫ್ರೀಡಂಪಾರ್ಕ್ ನಲ್ಲಿ ನಡೆಯುತ್ತಿರುವ ಬೃಹತ್ ಧರಣಿ ಸ್ಥಳಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಭೇಟಿ ಕೊಟ್ಟಿದ್ದಾರೆ.
ಆಶಾ ಕಾರ್ಯಕರ್ತೆಯರ ಬೇಡಿಕೆ ಆಲಿಸಿ ನಂತರ ಸರ್ಕಾರದ ಪರವಾಗಿ ಮಾತನಾಡಿದ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಾವೇದ್ ಅಖ್ತರ್, 15 ತಿಂಗಳ ಗೌರವಧನ ಬಾಕಿ ಇರುವುದು ನಮ್ಮ ಗಮನಕ್ಕೆ ಬಂದಿದೆ. ಇಲಾಖೆಯಲ್ಲಿ ಆರ್ಥಿಕ ಸ್ಥಿತಿ ನೋಡಿಕೊಂಡು ಮಾರ್ಚ್ ಒಳಗೆ ಬಾಕಿ ಹಣ ಬಿಡುಗಡೆ ಮಾಡಲಾಗುವುದು ಎಂದರು. ಎಲ್ಲಾ ಆಶಾ ಕಾರ್ಯಕರ್ತೆಯರಿಗೆ 2 ಜತೆ ಸಮವಸ್ತ್ರ ನೀಡಲಾಗುವುದು. 10 ವರ್ಷ ಕೆಲಸ ಮಾಡಿದ ಆಶಾ ಕಾರ್ಯಕರ್ತೆಯರು ಕಾರ್ಯ ಸ್ಥಗಿತ ಗೊಳಿಸುವುದಾದರೆ 20 ಸಾವಿರ ಹಣ ನೀಡಲಾಗುತ್ತದೆ. ಪ್ರಧಾನ್ ಮಂತ್ರಿ ಜೀವನ್ ಭೀಮಾ ಯೋಜನೆಯಡಿ ಹೆಲ್ತ್ ಇನ್ಸುರೆನ್ಸ್ ಮಾಡಿಸಲಾಗುತ್ತೆ ಎಂದು ಭರವಸೆ ನೀಡಿದರು.
ಆಶಾ ಕಾರ್ಯಕರ್ತೆಯರ ಬೇಡಿಕೆ ಬಗ್ಗೆ ಈಗಾಗಲೇ 4 ಬಾರಿ ಚರ್ಚೆಯಾಗಿದ್ದು, ನಾಲ್ಕು ಸಾವಿರ ಗೌರವಧನ ನೀಡಲಾಗುತ್ತಿದ್ದು, ಇನ್ನೊಂದು ಸಾವಿರಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಸಿಎಂ ಹಾಗೂ ಆರ್ಥಿಕ ಇಲಾಖೆ ಜೊತೆ ಚರ್ಚೆ ನಡೆಸುತ್ತೇವೆ. ಆಶಾ ಸ್ಟಾಪ್ನ ಸಮಸ್ಯೆಗಳನ್ನು ಶೀಘ್ರದಲ್ಲೇ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.