ಬೆಂಗಳೂರು: 'ಪ್ರಾಣ ಬಿಟ್ಟೇವು, ಪಿಂಚಣಿ ಬಿಡೆವು' ಎಂದು ನಗರದ ಫ್ರೀಡಂ ಪಾರ್ಕ್ ಬಳಿ ರಾಜ್ಯದ ಅನುದಾನಿತ ವಿದ್ಯಾ ಸಂಸ್ಥೆಗಳ ನೌಕರರು ಪಿಂಚಣಿ ಸೌಲಭ್ಯ ನೀಡುವಂತೆ ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸಿದರು.
ನಗರದ ಫ್ರೀಡಂ ಪಾರ್ಕ್ ಬಳಿ ಬೀಡುಬಿಟ್ಟಿರುವ ನೌಕರರು ಅಹೋರಾತ್ರಿ ಧರಣಿ ನಡೆಸುತ್ತಿದ್ದ ಹಿನ್ನೆಲೆ ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಲು ಸಚಿವ ಸುರೇಶ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು. ಆದರೆ, ಸಚಿವರ ಮನವೊಲಿಕೆಗೆ ಬಗ್ಗದ ನೌಕರರು ಮುಷ್ಕರ ಮುಂದುವರೆಸಿದ್ದಾರೆ. ಸೋಮವಾರದಿಂದ ನೌಕರರು ಹೋರಾಟ ಆರಂಭಿಸಿದ್ದು, ಮೂರನೇ ದಿನವಾದ ಇಂದೂ ಕೂಡ ಪ್ರತಿಭಟನೆ ಮುಂದುವರೆದಿದೆ. ಆದರೆ ಇಂದಿನಿಂದ ಮೌರ್ಯ್ಯ ಪಾರ್ಕ್ನಲ್ಲಿ ಹೋರಾಟ ಮುಂದುವರೆಸಲು ನಿರ್ಧರಿಸಿದ್ದಾರೆ.
ನಮಗೆ ಭರವಸೆ ಬೇಡ, ಕೊಟ್ಟ ಭರವಸೆಗಳನ್ನು ಕಾರ್ಯರೂಪಕ್ಕೆ ತನ್ನಿ ಎಂದು ಸರ್ಕಾರ, ಸಚಿವರು, ಎಂಎಲ್ಸಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಇನ್ನು ಅಹೋರಾತ್ರಿ ಧರಣಿ ನಡೆಸಲು ಮುಂದಾದ ಪ್ರತಿಭಟನಾಕಾರರನ್ನು ಪೊಲೀಸರು ಬಲವಂತವಾಗಿ ಸ್ಥಳದಿಂದ ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದ ದೃಶ್ಯ ಕಂಡುಬಂದಿತು. ಈ ವೇಳೆ ಹೋರಾಟಗಾರರು ಮತ್ತು ಪೊಲೀಸರ ನಡುವೆ ಕೆಲ ಕಾಲ ವಾಗ್ವಾದ ನಡೆಯಿತು.