ಬೆಂಗಳೂರು : ರಾಜ್ಯದಲ್ಲಿ ಒಂದು ವರ್ಷ ಕಾಲ "ಅಮೃತ ಭಾರತಿಗೆ ಕನ್ನಡದ ಆರತಿ" ಎಂಬ ಶೀರ್ಷಿಕೆಯಡಿ ಸ್ವಾತಂತ್ರ್ಯ ಹೋರಾಟಕ್ಕೆ ರಾಜ್ಯದ ಕೊಡುಗೆಯನ್ನು ಸ್ಮರಿಸುವ ಮತ್ತು ಹೋರಾಟದಲ್ಲಿ ಕನ್ನಡಿಗರ ಪಾತ್ರದ ಬಗ್ಗೆ ತಿಳಿಸುವ 'ಆಜಾದಿ ಕಾ ಅಮೃತ ಮಹೋತ್ಸವ' ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಚಿವ ವಿ.ಸುನೀಲ್‌ಕುಮಾರ್ ತಿಳಿಸಿದರು.
ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಅಮೃತ ಭಾರತಿಗೆ ಕನ್ನಡದ ಆರತಿ ಹೆಸರಲ್ಲಿ ಒಂದು ವರ್ಷ ಕಾಲ ಅಮೃತ ಮಹೋತ್ಸವ ಕಾರ್ಯಕ್ರಮ ನಡೆಸಲಾಗುವುದು. ಸ್ವಾತಂತ್ರ್ಯ ಹೋರಾಟದಲ್ಲಿ ಕನ್ನಡಿಗರ ಕೊಡುಗೆ ಏನು ಎಂಬುದರ ಬಗ್ಗೆ ದೇಶದ ಜನತೆ ಹಾಗೂ ಇಂದಿನ ಪೀಳಿಗೆಗೆ ತಿಳಿಸುವುದೇ ಈ ಕಾರ್ಯಕ್ರಮದ ಉದ್ದೇಶ ಎಂದರು.
ಅಮೃತಮಹೋತ್ಸವ ಕಾರ್ಯಕ್ರಮವನ್ನು ವಿನೂತನವಾಗಿ ಆಚರಿಸಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಸ್ವಾತಂತ್ರ್ಯಕ್ಕೆ ತ್ಯಾಗ, ಬಲಿದಾನ ಮಾಡಿದ ಕನ್ನಡಿಗರು ಹಾಗೂ ಸ್ವಾತಂತ್ರ್ಯ ಹೋರಾಟದ ಸ್ಥಳಗಳನ್ನು ಗುರುತಿಸಿ ಅವುಗಳ ಸ್ಮರಣೆ ಮಾಡಲಾಗುತ್ತದೆ.
ಹಾಗಾಗಿ, 75ನೇ ಸ್ವಾತಂತ್ರ್ಯ ಯೋಧರ ಪುಸ್ತಕ ರಚನೆ ಹಾಗೂ 'ಸ್ವಾತಂತ್ರ್ಯದ ನೆಲದಲ್ಲಿ ಒಂದು ದಿನ' ಎಂಬ ಕಾರ್ಯಕ್ರಮ ನಡೆಸಲಾಗುತ್ತದೆ ಎಂದರು. ಕೋವಿಡ್ ಪರಿಸ್ಥಿತಿ ನೋಡಿಕೊಂಡು ಫೆಬ್ರವರಿ ಕೊನೆಯ ಅಥವಾ ಮಾರ್ಚ್ ತಿಂಗಳಿಂದ ಒಂದು ವರ್ಷ ಅಮೃತ ಮಹೋತ್ಸವ ಕಾರ್ಯಕ್ರಮ ಮಾಡಲಾಗುವುದು ಎಂದರು.
ಅನುದಾನಕ್ಕಾಗಿ ಕೇಂದ್ರಕ್ಕೆ ಮನವಿ : ಜನವರಿ 26ರ ನಂತರ ದೆಹಲಿಗೆ ತೆರಳಿ ಎರಡೂ ಇಲಾಖೆಗಳಿಗೆ ಸಂಬಂಧಪಟ್ಟಂತೆ ಕೇಂದ್ರದ ಮಂತ್ರಿಗಳನ್ನು ಭೇಟಿ ಮಾಡಿ, ಕರ್ನಾಟಕಕ್ಕೆ ಶಾಸ್ತ್ರೀಯ ಸ್ಥಾನಮಾನಕ್ಕೆ ನೀಡಬೇಕಾದ ಅನುದಾನ ಬಿಡುಗಡೆಗೆ ಮನವಿ ಮಾಡುತ್ತೇನೆ. ಅನುದಾನ ನಿರೀಕ್ಷಿತ ಮಟ್ಟದಲ್ಲಿ ಆಗಬೇಕು.
ಅದೇ ರೀತಿ ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಕೇಂದ್ರ ಸಚಿವರನ್ನು ಮನವಿ ಮಾಡಲಾಗುವುದು ಎಂದು ತಿಳಿಸಿದರು. ಇಂಧನ ಇಲಾಖೆಗೆ ಸಂಬಂಧಪಟ್ಟಂತೆ ಕೇಂದ್ರ ಪುರಸ್ಕೃತ ಆರ್ಡಿಎಸ್ಎಸ್ ಯೋಜನೆಗೆ ಎಲ್ಲಾ ರಾಜ್ಯಗಳಿಗೂ ಅನುದಾನ ಕೊಡುತ್ತಿದೆ. ಹಾಗಾಗಿ, ನಮ್ಮ ರಾಜ್ಯಕ್ಕೂ ಅನುದಾನ ಕೊಡಬೇಕೆಂದು ಮನವಿ ಮಾಡುತ್ತೇನೆ ಎಂದರು.
ಸಂಸ್ಕೃತ ಎಲ್ಲ ಭಾಷೆಗಳ ತಾಯಿ : ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ವಿರೋಧ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕನ್ನಡ ವಿವಿಗೆ ಹೆಚ್ಚಿನ ಅನುದಾನ ನೀಡಬೇಕು. ಆದರೆ, ಸಂಸ್ಕೃತಕ್ಕೆ ವಿರೋಧ ಮಾಡುವುದು ಸರಿಯಲ್ಲ. ಸಂಸ್ಕೃತ ಎಲ್ಲ ಭಾಷೆಗಳ ತಾಯಿ ಎಂದರು. ಸಂಸ್ಕೃತ ಕನ್ನಡದ ತಾಯಿ ಎಂದು ದಾಖಲೆ ಕೇಳುವ ವಿಚಾರ ಅಲ್ಲ. ಅದಕ್ಕೆ ಆರ್‌ಟಿಸಿ ಕೊಡಿ, ಪಹಣಿ ಕೊಡಿ ಅಂದರೆ ಆಗಲ್ಲ. ಆದರೆ, ಕನ್ನಡಕ್ಕೆ ಹೆಚ್ಚಿನ ಆದ್ಯತೆ ಕೊಡಲೇಬೇಕು. ಸಂಸ್ಕೃತಕ್ಕೆ ವಿರೋಧ ಮಾಡುವುದು ಸರಿಯಲ್ಲ. ಮುಂದಿನ ಬಜೆಟ್ನಲ್ಲಿ ಕನ್ನಡಕ್ಕೆ ಹೆಚ್ಚಿನ ಅನುದಾನ ನೀಡುವ ಕೆಲಸ ಸರ್ಕಾರ ಮಾಡಲಿದೆ ಎಂದರು.
ನಾಲ್ಕು ಕಲಾಕ್ಷೇತ್ರ ನಿರ್ಮಾಣ : ಬೆಂಗಳೂರಿನ ಹೊರ ವಲಯದಲ್ಲಿ ರವೀಂದ್ರ ಕಲಾಕ್ಷೇತ್ರದ ಮಾದರಿಯಲ್ಲಿ 4 ಕಲಾಕ್ಷೇತ್ರ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ನಾಲ್ಕು ಕಲಾಕ್ಷೇತ್ರ ನಿರ್ಮಾಣಕ್ಕೆ ದೇವನಹಳ್ಳಿ, ಸೂರ್ಯನಗರ, ಕನಕಪುರ ರಸ್ತೆ ಹಾಗೂ ನೆಲಮಂಗಲ ಕಡೆಗಳಲ್ಲಿ ಜಾಗ ಗುರುತಿಸುವ ಪ್ರಕ್ರಿಯೆ ನಡೆದಿದೆ. ಇದಕ್ಕೆ ಸಂಬಂಧಪಟ್ಟಂತೆ ಬಿಬಿಎಂಪಿ ಹೌಸಿಂಗ್ ಬೋರ್ಡ್ ಜೊತೆ ಚರ್ಚೆ ನಡೆದಿದೆ. ಈ ಕುರಿತು ಬಜೆಟ್ನಲ್ಲಿ ಹಣ ಮೀಸಲಿಡುವ ಬಗ್ಗೆಯೂ ಚರ್ಚೆ ನಡೆದಿದೆ ಎಂದರು. ಕಲಾವಿದರ ಅನುಕೂಲಕ್ಕೋಸ್ಕರ ರವೀಂದ್ರ ಕಲಾಕ್ಷೇತ್ರದ ನವೀಕರಣಕ್ಕೆ ತೀರ್ಮಾನ ಮಾಡಲಾಗಿದೆ. 1.5 ಕೋಟಿ ರೂ. ವೆಚ್ಚದಲ್ಲಿ ನವೀಕರಣ ಮಾಡಲಾಗುತ್ತದೆ ಎಂದರು.
ಆನ್‌ಲೈನ್ ಬುಕ್ಕಿಂಗ್ : ರವೀಂದ್ರ ಕಲಾಕ್ಷೇತ್ರದ ಬುಕ್ಕಿಂಗ್ ಬಗ್ಗೆ ಹಲವು ಅನುಮಾನಗಳು ಮೂಡಿದ್ದವು. ರವೀಂದ್ರ ಕಲಾಕ್ಷೇತ್ರದಲ್ಲಿ ಇನ್ನುಮುಂದೆ ಆನ್‌ಲೈನ್ ಬುಕ್ಕಿಂಗ್ ನಡೆಯುತ್ತದೆ. ತಿಂಗಳು ಮೊದಲೇ ಬುಕ್ಕಿಂಗ್ ಮಾಡಿ ಬೇರೆಯವರಿಗೆ ಸಬ್ ಬುಕ್ ನೀಡಲಾಗುತ್ತಿತ್ತು. ಅದನ್ನು ನಿಯಂತ್ರಣ ಮಾಡಲಾಗುವುದು. ಫೆಬ್ರವರಿ 15 ರಿಂದ ಆನ್‌ಲೈನ್ ಬುಕ್ಕಿಂಗ್ ಪ್ರಕ್ರಿಯೆ ಪ್ರಾರಂಭವಾಗಲಿದೆ.
ಇದನ್ನೂ ಓದಿ: ಜನ ಮೈಮರೆತರೆ ಲಾಕ್ಡೌನ್ ಅನಿವಾರ್ಯವಾಗಬಹುದು : ಆರಗ ಜ್ಞಾನೇಂದ್ರ ಎಚ್ಚರಿಕೆ
ಅದೇ ರೀತಿ ಎಡಿಎ ರಂಗಮಂದಿರ ಹಾಗೂ ನಯನ ರಂಗಮಂದಿರಗಳ ಬುಕ್ಕಿಂಗ್ ಸಹ ಆನ್‌ಲೈನ್‌ನಲ್ಲೇ ನಡೆಯಲಿದೆ. ಜಿಲ್ಲಾಮಟ್ಟದ ರಂಗ ಮಂದಿರಗಳು ಕೂಡ ಆನ್‌ಲೈನ್ ಬುಕ್ಕಿಂಗ್ ಮಾಡುವುದಕ್ಕೆ ಚಿಂತನೆ ನಡೆದಿದೆ ಎಂದರು. ರವೀಂದ್ರ ಕಲಾಕ್ಷೇತ್ರದ ಬಾಡಿಗೆ ದರ ಸ್ವಲ್ಪ ಹೆಚ್ಚಿಗೆ ಮಾಡಬೇಕೆಂದು ಸಲಹೆ ಬಂದಿದೆ. ಇದರ ಬಗ್ಗೆ ಪರಿಶೀಲಿಸಿ ಬಾಡಿಗೆ ದರ ಹೆಚ್ಚಿಸುವ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಇದೇ ವೇಳೆ ಸಚಿವ ಸುನೀಲ್ ಕುಮಾರ್ ಅವರು ಎರಡೂ ಇಲಾಖೆಯ ನೂರು ದಿನಗಳ ಸಾಧನೆ ಪುಸ್ತಕ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು.