ಬೆಂಗಳೂರು: ಈದ್ಗಾ ಮೈದಾನ ವಿವಾದ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈದ್ಗಾ ಮೈದಾನಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದ ಮತ್ತೊಂದು ಹಂತಕ್ಕೆ ತಲುಪಿದೆ. ಇದೀಗ ಹೊಸ ವಿಚಾರವಾಗಿ ಹಿಂದೂಪರ ಸಂಘಟನೆಗಳು ಧ್ವನಿ ಎತ್ತಿವೆ. ಚಾಮರಾಜಪೇಟೆಯ ಮೈದಾನಲ್ಲಿರುವ ಈದ್ಗಾ ಗೋಡೆಯ ವಿರುದ್ಧವೂ ಸಂಘಟನೆಗಳು ಸಮರ ಸಾರಿವೆ.
ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನದ ವಿವಾದ ಮುಕ್ತಾಯವಾಗುವ ಲಕ್ಷಣ ಕಾಣುತ್ತಿಲ್ಲ. ಮತ್ತೆ ಮತ್ತೆ ಹೊಸ ಹೊಸ ವಿವಾದಗಳು ಕೇಳಿ ಬರುತ್ತಲೇ ಇವೆ. ಈದ್ಗಾ ಮೈದಾನದ ಗೋಡೆ ತೆರವು ಮಾಡುವಂತೆ ಹಿಂದೂ ಪರ ಸಂಘಟನೆಗಳು ಆಗ್ರಹಿಸಿವೆ.
ಚಾಮರಾಜಪೇಟೆ ಈದ್ಗಾ ಮೈದಾನ ಕಂದಾಯ ಇಲಾಖೆಯ ಸ್ವತ್ತು ಎನ್ನುವುದಾದರೆ ಈ ಗೋಡೆ ಯಾಕೆ ಎನ್ನುವುದು ಹಿಂದೂ ಸಂಘಟನೆಗಳ ಪ್ರಶ್ನೆಯಾಗಿದೆ. ಈದ್ಗಾ ಗೋಡೆಯಿಂದ ಹಿಂದೂ ಧಾರ್ಮಿಕ ಆಚರಣೆಗೆ ಅಡ್ಡಿಯಾಗುತ್ತದೆ ಎನ್ನುವುದು ಈ ಸಂಘಟನೆಯ ಆರೋಪವಾಗಿದೆ. ಹಾಗಾಗಿ ಬೇರೆಡೆಗೆ ಸ್ಥಳಾಂತರ ಮಾಡಬೇಕು. ಈ ವಿಚಾರವಾಗಿ ಸರ್ಕಾರ ಪರಿಶೀಲನೆ ಮಾಡಲಿ ಎಂದು ಸಂಘಟನೆಗಳು ಒತ್ತಾಯಿಸಿವೆ. ಅಲ್ಲದೆ, ಸ್ಥಳಾಂತರ ಮಾಡದೇ ಹೋದರೆ ಸಂಪೂರ್ಣ ನೆಲಸಮ ಮಾಡಿ ಬಿಡಿ ಎಂದು ಕೇಳಿಕೊಂಡಿವೆ.
ಸರ್ಕಾರಕ್ಕೆ ಎಚ್ಚರಿಕೆ: ಸರ್ಕಾರಕ್ಕೆ ಕೆಲವು ದಿನಗಳ ಕಾಲವಕಾಶ ಕೊಡುತ್ತೇವೆ. ನಂತರ ಕಾನೂನು ಸಮರ ಸಾರಿ ನಾವೇ ಗೋಡೆಯನ್ನ ಉರುಳಿಸುತ್ತೇವೆ ಎಚ್ಚರಿಕೆ ನೀಡಲಾಗಿದೆ.
ಹೋರಾಟ: ಈ ವಿವಾದ ಬೇಗ ಮುಗಿಸಿ ಎನ್ನುವುದು ಹಿಂದೂ ಜನಜಾಗೃತಿ ಸಮಿತಿ ಮತ್ತು ವಿಶ್ವ ಸನಾತನ ಪರಿಷತ್ನ ಆಗ್ರಹವಾಗಿದೆ. ಈ ಕುರಿತಂತೆ, ಬೆಂಗಳೂರು ನಗರ ಜಿಲ್ಲಾಧಿಕಾರಿ, ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಚಾಮರಾಜಪೇಟೆ ನಾಗರಿಕರ ಒಕ್ಕೂಟ, ಹಿಂದೂಪರ ಸಂಘಟನೆಗಳು ಈ ವಿಚಾರವಾಗಿ ಹೋರಾಟ ಮಾಡುವುದಾಗಿ ಭಾಸ್ಕರನ್ ಹೇಳಿದ್ದಾರೆ.
ಓದಿ:ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ಮಾಡುತ್ತೇವೆ, ಆದ್ರೆ ಗಣೇಶ ಹಬ್ಬಕ್ಕಿಲ್ಲ ಅವಕಾಶ: ಶಾಸಕ ಜಮೀರ್