ಬೆಂಗಳೂರು: ಐಟಿ, ಇಡಿ, ಸಿಬಿಐ ಮೊದಲಾದ ಸ್ವಾಯತ್ತ ಸಂಸ್ಥೆಗಳನ್ನು ಕೇಂದ್ರ ತನ್ನ ಹಿಡಿತದಲ್ಲಿ ಇಟ್ಟುಕೊಂಡಿರುವುದಲ್ಲದೆ, ರಾಜ್ಯಪಾಲರ ಸ್ಥಾನಮಾನವನ್ನೂ ಭಸ್ಮ ಮಾಡುತ್ತಿದ್ದಾರೆ. ಆದ್ದರಿಂದ ಪ್ರಧಾನಿ ಮೋದಿ ದೇಶದ ಆಧುನಿಕ ಭಸ್ಮಾಸುರ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಹಾಗೂ ದೇಶದ ಜನತೆ ಈ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಮಹಾರಾಷ್ಟ್ರ ರಾಜ್ಯಪಾಲರನ್ನು ಬಿಜೆಪಿಯ ಏಜೆಂಟರನ್ನಾಗಿ ಮಾಡಿಕೊಂಡಿದ್ದಾರೆ. ಸರ್ಕಾರ ರಚಿಸಲು ಬಿಜೆಪಿಗೆ ರಾಜ್ಯಪಾಲರು ಸಾಕಷ್ಟು ಕಾಲಾವಕಾಶ ನೀಡಿದ್ದರು. ಆದರೂ ರಚಿಸಿಲ್ಲ. ಇತ್ತ ಬೇರೆ ಪಕ್ಷಗಳಿಗೆ ಆಹ್ವಾನ ನೀಡುತ್ತಿದ್ದಂತೆ ರಾಜ್ಯಪಾಲರ ಮೂಲಕ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿಸಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿಗೆ ನೀಡಿದಷ್ಟು ಕಾಲಾವಕಾಶ ಶಿವಸೇನೆ, ಎನ್ಸಿಪಿಗೆ ಕೊಟ್ಟಿಲ್ಲ. ತರಾತುರಿಯಲ್ಲಿ ನಿರ್ಧಾರ ಕೈಗೊಂಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆ ಇರುವುದು ರಾಷ್ಟ್ರಪತಿ ಆಡಳಿತಕ್ಕಲ್ಲ. ಸರ್ಕಾರ ರಚಿಸಲು ಎಲ್ಲಾ ಪಕ್ಷಗಳಿಗೂ ಅವಕಾಶವಿದೆ. ಗೋವಾ, ಕರ್ನಾಟಕದ ಹಾಗೆ ಮಹಾರಾಷ್ಟ್ರದಲ್ಲೂ ರಾಜ್ಯಪಾಲರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿಯೇತರ ಸರ್ಕಾರ ರಚಿಸಲು ಮೋದಿ ,ಅಮಿತ್ ಶಾಗೆ ಇಷ್ಟವಿಲ್ಲ. ಪರಿಣಾಮ ವಾಮ ಮಾರ್ಗಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಶಿವಸೇನೆ, ಎನ್ಸಿಪಿಗೆ ಸರ್ಕಾರ ರಚಿಸಲು ರಾಜ್ಯಪಾಲರು ಅವಕಾಶವೇ ನೀಡುತ್ತಿಲ್ಲ. ರಾಷ್ಟ್ರಪತಿ ಆಡಳಿತಕ್ಕೆ ಅವರು ಶಿಫಾರಸು ಮಾಡಿದ್ದಾರೆ. ಇದೆಲ್ಲದಕ್ಕೂ ಮೋದಿ ತಂತ್ರಗಾರಿಕೆಯೇ ಕಾರಣ ಎಂದರು.
ಮಹಾರಾಷ್ಟ್ರದಲ್ಲಿ ಬೇರೆ ಸರ್ಕಾರ ರಚಿಸಲು ಕಸರತ್ತು ನಡೆಸುತ್ತಿರುವ ಹಿನ್ನೆಲೆ ಪ್ರಧಾನಿ ಮೋದಿ, ಅಮಿತ್ ಶಾಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಎಂದು ಹೊರಟಿದ್ದಾರೆ. ಪ್ರಸ್ತುತ ಅಂತ ಸಂದರ್ಭ ಇಲ್ಲ. ಆದ್ದರಿಂದ ಹೀಗೆ ಮಾಡುತ್ತಿದ್ದಾರೆ. ದೇಶದ ಜನ ಬಿಜೆಪಿ ನಾಯಕರ ನಡೆಯನ್ನು ಅರ್ಥ ಮಾಡಿಕೊಳ್ಳಬೇಕು. ಸೋಮವಾರದವರೆಗೂ ಶಿವಸೇನೆ ಎನ್ಡಿಎ ಮೈತ್ರಿಕೂಟದಲ್ಲಿತ್ತು. ಈಗ ಅಲ್ಲಿಂದ ಹೊರ ನಡೆದಿದೆ. ಸರ್ಕಾರ ರಚಿಸಲು ಎನ್ಸಿಪಿ, ಕಾಂಗ್ರೆಸ್ ಜೊತೆ ಮಾತುಕತೆ ನಡೆದಿತ್ತು. ಅದಾಗಲೇ ರಾಜ್ಯಪಾಲರು ಅವಕಾಶ ನಿರಾಕರಿಸಿದ್ದಾರೆ. ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿದ್ದಾರೆ. ಇದೆಲ್ಲವೂ ಪ್ರಧಾನಿ ಅವರ ಕುತಂತ್ರ ಎಂದು ಗುಡುಗಿದರು.