ಬೆಂಗಳೂರು: ರಾಷ್ಟ್ರಪತಿ ಚುನಾವಣೆಗೆ ವೇದಿಕೆ ಸಜ್ಜಾಗಿದೆ. ಇದೇ ಜುಲೈ 18ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ರಾಷ್ಟ್ರಪತಿ ಚುನಾವಣೆಯಲ್ಲಿ ಮತಚಲಾಯಿಸುವ ಶಾಸಕನ ಹಾಗೂ ಸಂಸದರ ಮತಮೌಲ್ಯದ ಆಧಾರದಲ್ಲಿ ಮತ ಎಣಿಕೆ ಮಾಡಲಾಗುತ್ತದೆ. ಓರ್ವ ಶಾಸಕರ ಈ ಮತಮೌಲ್ಯವನ್ನು ಆಯಾ ರಾಜ್ಯಗಳ ಜನಸಂಖ್ಯೆ ಆಧಾರದಲ್ಲಿ ಮಾಡಲಾಗುತ್ತದೆ. ಅದೇ ಸಂಸದರ ಮತಮೌಲ್ಯವನ್ನು ಒಟ್ಟು ಶಾಸಕರ ಮತಮೌಲ್ಯದ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ.
ಶಾಸಕರ ಮತಮೌಲ್ಯ ಹಾಗೂ ಆಯಾ ರಾಜ್ಯದ ಲೋಕಸಭೆ, ವಿಧಾನಸಭೆ ಸೀಟುಗಳ ಸಂಖ್ಯೆಯನ್ನು ಜನಗಣತಿ ಜನಸಂಖ್ಯೆ ಆಧಾರದಲ್ಲಿ ಲೆಕ್ಕಹಾಕಿ ನಿಗದಿ ಮಾಡಲಾಗುತ್ತದೆ. ಹಾಗಂತ ಶಾಸಕರ ಮತಮೌಲ್ಯವನ್ನು ನಿಗದಿಗೊಳಿಸಲು ಇತ್ತೀಚಿಗಿನ ಜನಗಣತಿಯನ್ನು ಆಧಾರವಾಗಿಸುತ್ತಿಲ್ಲ. ವಾಸ್ತವದಲ್ಲಿ ಮತಮೌಲ್ಯ ಲೆಕ್ಕಹಾಕಲು 1971ರ ಜನಗಣತಿಯನ್ನೇ ಪರಿಗಣಿಸಲಾಗುತ್ತಿದೆ.
1971ರ ಜನಗಣತಿ ಹಿಂದಿನ ರಹಸ್ಯ ಏನು?: ಈ ಬಾರಿ ರಾಷ್ಟ್ರಪತಿ ಚುನಾವಣೆಯಲ್ಲಿ ಕರ್ನಾಟಕ ಶಾಸಕನ ಮತಮೌಲ್ಯ 131. 1971ರ ಜನಗಣತಿಯಂತೆ ರಾಜ್ಯದ ಜನಸಂಖ್ಯೆ 2,92,99,014. ಅದನ್ನು ರಾಜ್ಯದ 224 ಶಾಸಕರ ಸಂಖ್ಯೆಯೊಂದಿಗೆ ಭಾಗಿಸಿ ಒಂದು ಸಾವಿರದೊಂದಿಗೆ ಗುಣಿಸಿದಾಗ ಶಾಸಕರ ಮತಮೌಲ್ಯ 131 ಆಗುತ್ತದೆ. (2,92,99,014÷224X1000=131). ಪ್ರತಿ ರಾಜ್ಯಗಳ ಶಾಸಕನ ಮತಮೌಲ್ಯವನ್ನು 1971 ಜನಗಣತಿ ಆಧಾರದಲ್ಲೇ ಮಾಡಲಾಗುತ್ತದೆ.
ಇದರ ಹಿಂದಿನ ಮರ್ಮವೇನು?: ಅರೇ 50 ವರ್ಷಗಳ ಹಳೆಯದಾದ ಜನಗಣತಿ ಆಧಾರದಲ್ಲೇ ಮತಮೌಲ್ಯ ಲೆಕ್ಕಮಾಡುವುದರ ಹಿಂದಿನ ಮರ್ಮ ಏನು?. ಕಳೆದ 50 ವರ್ಷಗಳಲ್ಲಿ ದೇಶದ ಜನಸಂಖ್ಯೆ ಗಣನೀಯ ಏರಿಕೆಯಾಗಿದ್ದು, ಕನಿಷ್ಠ ಇತ್ತೀಚಿನ ಜನಗಣತಿ ಆಧಾರದಲ್ಲಿ ವೈಜ್ಞಾನಿಕವಾಗಿ ಮತಮೌಲ್ಯ ಲೆಕ್ಕಹಾಕಬಹುದಲ್ಲ ಎಂಬ ಪ್ರಶ್ನೆಗಳು ಎಲ್ಲರಲ್ಲೂ ಮೂಡುತ್ತವೆ. ಅಸಲಿಗೆ, 1971 ಜನಗಣತಿಯನ್ನೇ ಪರಿಗಣಿಸಲ್ಪಡುತ್ತಿರುವುದರ ಹಿಂದೆ ಜನಸಂಖ್ಯೆ ನಿಯಂತ್ರಣ ನೀತಿಯ ರಹಸ್ಯ ಅಡಗಿದೆ.
ತುರ್ತು ಪರಿಸ್ಥಿತಿ: 1976ರ ತುರ್ತು ಪರಿಸ್ಥಿತಿ ಸಂದರ್ಭ ಸಂವಿಧಾನದ 42ನೇ ತಿದ್ದುಪಡಿ ತರಲಾಯಿತು. ಈ ತಿದ್ದುಪಡಿಯಲ್ಲಿ ಜನಸಂಖ್ಯೆ ನಿಯಂತ್ರಣ ಹಾಗೂ ಫ್ಯಾಮಿಲಿ ಪ್ಲಾನಿಂಗ್ನ್ನು ಸೇರಿಸಲಾಯಿತು. ಅಂದಿನ ಸರ್ಕಾರ ಜನಸಂಖ್ಯೆ ವೃದ್ಧಿಗೆ ಕಡಿವಾಣ ಹಾಕುವ ಅಗತ್ಯತೆಯನ್ನು ಮನಗಂಡು ಸಂವಿಧಾನದ 42ನೇ ತಿದ್ದುಪಡಿ ತಂದಿತ್ತು. ಅದರಂತೆ ಆಯಾ ರಾಜ್ಯಗಳ ಲೋಕಸಭೆ, ವಿಧಾನಸಭೆ ಸೀಟುಗಳ ಸಂಖ್ಯೆಯನ್ನು ಬದಲಾಯಿಸದಂತೆ ಕೆಲ ನಿಬಂಧನೆಗಳನ್ನು ಸೇರಿಸಿ, 2001ರ ಜನಗಣತಿ ಪ್ರಕಟವಾಗುವವರೆಗೆ 1971ರ ಜನಗಣತಿಯನ್ನೇ ಪರಿಗಣಿಸುವಂತೆ ತಿದ್ದುಪಡಿ ತರಲಾಯಿತು ಎಂದು ನಿವೃತ್ತ ವಿಧಾನಸಭೆ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಓದಿ: ಏಕರೂಪ ನಾಗರಿಕ ಸಂಹಿತೆ ಜಾರಿ, ಔರಂಗಾಬಾದ್ ನಗರದ ಹೆಸರು ಬದಲಿಸಲು ರಾಜ್ ಠಾಕ್ರೆ ಆಗ್ರಹ
ಜನಸಂಖ್ಯೆ ನಿಯಂತ್ರಣದ ನಂಟು: ತಿದ್ದುಪಡಿ ಮೂಲಕ ಲೋಕಸಭೆ/ವಿಧಾನಸಭೆ ಸೀಟ್ ಸಂಖ್ಯೆಯನ್ನು ಬದಲಾಯಿಸದಂತೆ ತಡೆಯಲು ಪ್ರಮುಖ ಕಾರಣ ಜನಸಂಖ್ಯೆ ನಿಯಂತ್ರಣ ನೀತಿಯನ್ನು ಎಲ್ಲಾ ರಾಜ್ಯಗಳು ಗಂಭೀರವಾಗಿ ಜಾರಿಗೊಳಿಸಿ ಸಮಾನ ಜನಸಂಖ್ಯೆ ಬೆಳವಣಿಗೆಯನ್ನು ಖಾತ್ರಿಗೊಳಿಸುವುದಾಗಿತ್ತು. ಒಂದು ವೇಳೆ ಪ್ರತಿ ಜನಗಣತಿಗಳ ಬಳಿಕ ಸೀಟುಗಳನ್ನು ಬದಲಾವಣೆ ಮಾಡಿರುತ್ತಿದ್ದರೆ, ಪರಿಣಾಮಕಾರಿಯಾಗಿ ಜನಸಂಖ್ಯೆ ನಿಯಂತ್ರಣ ಮಾಡಿದ ರಾಜ್ಯಗಳ ಲೋಕಸಭೆ/ವಿಧಾನಸಭೆ ಸೀಟುಗಳು, ಹಾಗೂ ಮತಮೌಲ್ಯ ಕಡಿತವಾಗುತ್ತಿತ್ತು. ಜನಸಂಖ್ಯೆ ನಿಯಂತ್ರಣ ಮಾಡದೇ ಇದ್ದ ರಾಜ್ಯಗಳಲ್ಲಿ ಸೀಟುಗಳ ಸಂಖ್ಯೆ ಹೆಚ್ಚು ಲಾಭ ಪಡೆಯುತ್ತಿದ್ದವು.
ಜನಸಂಖ್ಯೆ ನಿಯಂತ್ರಣ: 2001ರ ಜನಗಣತಿ ಬಳಿಕ ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು, ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಜನಸಂಖ್ಯೆ ನಿಯಂತ್ರಣದಲ್ಲಿ ಉತ್ತಮ ಸಾಧನೆ ಮಾಡಿದ್ದವು. ಅದೇ ಉತ್ತರ ಇತರೆ ರಾಜ್ಯಗಳಾದ ಉ.ಪ್ರದೇಶ, ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ, ಜಾರ್ಖಂಡ್ ಮುಂತಾದ ರಾಜ್ಯಗಳು ಜನಸಂಖ್ಯೆ ನಿಯಂತ್ರಿಸುವಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಿರಲಿಲ್ಲ. ಇದರಿಂದ ಉತ್ತಮ ಸಾಧನೆ ತೋರಿದ ದಕ್ಷಿಣ ಭಾರತದ ರಾಜ್ಯಗಳ ಲೋಕಸಭೆ/ವಿಧಾನಸಭೆ ಸೀಟಿನ ಸಂಖ್ಯೆ, ಮತಮೌಲ್ಯ ಕಡಿತಗೊಳ್ಳುತ್ತಿತ್ತು. ಕಳಪೆ ಪ್ರಗತಿ ತೋರಿದ ಉತ್ತರ ಭಾರತ ರಾಜ್ಯಗಳ ಸೀಟುಗಳ ಸಂಖ್ಯೆ ಹಾಗೂ ಮತಮೌಲ್ಯ ಹೆಚ್ಚಾಗುತ್ತಿತ್ತು.
2026ರವರೆಗೂ 1971 ಜನಗಣತಿಯಂತೆಯೇ ಲೆಕ್ಕ!: ಜನಸಂಖ್ಯೆ ನಿಯಂತ್ರಣದಲ್ಲಿ ಎಲ್ಲಾ ರಾಜ್ಯಗಳು ಸಮಾನ ಪ್ರಗತಿ ಕಾಣದ ಕಾರಣ ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರ 2001ರಲ್ಲಿ ಸಂವಿಧಾನದ 84ನೇ ತಿದ್ದುಪಡಿತಂದು 2026 ವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಿತು. ಹಲವು ರಾಜ್ಯಗಳಲ್ಲಿ ಜನಸಂಖ್ಯೆ ನಿಯಂತ್ರಣ ಕಾರ್ಯಕ್ರಮಗಳ ಪ್ರಗತಿಯನ್ನು ಪರಿಗಣಿಸಿ 2026ರ ವರೆಗೆ ಲೋಕಸಭೆ/ವಿಧಾನಸಭೆ ಸೀಟುಗಳ ಸಂಖ್ಯೆ, ಮತಮೌಲ್ಯ ಬದಲಾಯಿಸದಂತೆ ಮತ್ತೊಮ್ಮೆ ತಿದ್ದುಪಡಿ ತರಲಾಯಿತು.
ವಿವಿಧ ರಾಜ್ಯಗಳು ಜನಸಂಖ್ಯೆ ನಿಯಂತ್ರಣ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಉತ್ತೇಜಿಸುವುದು ಮತ್ತೊಮ್ಮೆ ತಿದ್ದುಪಡಿ ಹಿಂದಿನ ಕಾರಣವಾಗಿತ್ತು. 2026ರ ವೇಳೆಗೆ ಎಲ್ಲಾ ರಾಜ್ಯಗಳು ಜನಸಂಖ್ಯೆ ಬೆಳವಣಿಗೆಗೆ ನಿಯಂತ್ರಣ ಹೇರುವ ನಿರೀಕ್ಷೆ ಹೊಂದಲಾಗಿದೆ. ಇದರ ಅರ್ಥ 2031ರಂದು ಪ್ರಕಟಿಸಲಾಗುವ ಜನಗಣತಿವರೆಗೆ ಯಾವುದೇ ಬದಲಾವಣೆ ಆಗುವುದಿಲ್ಲ. ಅಲ್ಲಿವರೆಗೆ ರಾಜ್ಯಗಳ ಲೋಕಾಸಭೆ ಹಾಗೂ ವಿಧಾನಸಭೆ ಸೀಟುಗಳ ಸಂಖ್ಯೆ, ರಾಷ್ಟ್ರಪತಿ ಚುನಾವಣೆಯಲ್ಲಿನ ಶಾಸಕನ ಮತಮೌಲ್ಯಗಳು 1971ರ ಜನಗಣತಿ ಆಧಾರದಲ್ಲೇ ಮುಂದುವರಿಯಲಿವೆ.