ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ 2019- 21ರ ಅವಧಿಗೆ ಅಧ್ಯಕ್ಷರಾಗಿ ಡಾ. ಬಿ ಎಲ್ ಶಂಕರ್ ಆಯ್ಕೆಯಾಗಿದ್ದಾರೆ. ನಾಲ್ಕನೇ ಅವಧಿಗೆ ಅವಿರೋಧವಾಗಿ ಇವರು ಆಯ್ಕೆಯಾಗಿದ್ದು ಕರ್ನಾಟಕ ಚಿತ್ರಕಲಾ ಪರಿಷತ್ ಚುನಾವಣಾ ಅಧಿಕಾರಿ ಮುನಿರಾಜು ಮಾಧ್ಯಮ ಪ್ರಕಟಣೆಯಲ್ಲಿ ವಿವರ ತಿಳಿಸಿದ್ದಾರೆ.
ಪರಿಷತ್ತಿಗೆ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆಗಾಗಿ ಜೂ.16ರಂದು ನಿಗದಿಯಾಗಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿ ಬಿಎಲ್ ಶಂಕರ್ ನಾಮಪತ್ರ ಸಲ್ಲಿಸಿದ್ದರು. ಇಂದು ನಾಮಪತ್ರ ವಾಪಸ್ ಪಡೆಯಲು ಕಡೆಯ ದಿನವಾಗಿದ್ದು ಶಂಕರ್ ಅವರಿಗೆ ಯಾವುದೇ ಪ್ರತಿಸ್ಪರ್ಧಿಗಳು ಇಲ್ಲದ ಕಾರಣ ಅವರು ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದ್ದಾರೆ.
ನಾಲ್ಕನೇ ಬಾರಿಗೆ ಪರಿಷತ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶಂಕರ್ ಸುದೀರ್ಘ ಅವಧಿ ಅಧ್ಯಕ್ಷರಾಗಿ ಕಾಲಕಳೆದಂತೆ ಆಗಿದೆ. ಈ ಹಿಂದೆ ಕರ್ನಾಟಕ ಚಿತ್ರಕಲಾ ಪರಿಷತ್ ಗೆ ವಿಧಾನಸಭಾ ಅಧ್ಯಕ್ಷರಾಗಿದ್ದ ವೈಕುಂಠ ಬಾಳಿಗಾ, ಕೆಎಸ್ ನಾಗರತ್ನಮ್ಮ, ಮಾಜಿ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ, ಎಸ್ ಎಂ ಕೃಷ್ಣ ಹಾಗೂ ಜೀವರಾಜ್ ಆಳ್ವ ಅವರು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಕರ್ನಾಟಕ ಚಿತ್ರಕಲಾ ಪರಿಷತ್ತು ಮ್ಯೂಸಿಯಂ ಪ್ರದರ್ಶನ ಗ್ಯಾಲರಿ ಚಿತ್ರಕಲಾ ವಿದ್ಯಾಲಯದ ಪದವಿ ಮತ್ತು ಸ್ನಾತಕೋತ್ತರ ಹಾಗೂ ಸಂಶೋಧನಾ ವಿಭಾಗವನ್ನು ಹೊಂದಿದೆ. ದೇಶದಲ್ಲಿಯೇ ಇದೇ ಮೊದಲ ಬಾರಿಗೆ ಕಳೆದ ಸಾಲಿನಿಂದ ಚಿತ್ರಕಲಾ ಪರಿಷತ್ ಸಂಜೆ ಕಾಲೇಜನ್ನು ಆರಂಭಿಸಿದ್ದು ಪದವಿ ಮತ್ತು ಸ್ನಾತಕೋತ್ತರ ಪದವಿ ವಿಭಾಗವನ್ನು ನಡೆಸುತ್ತಿದೆ.