ಬೆಂಗಳೂರು: ಎಲೆಕ್ಟ್ರಿಕ್ ವಾಹನಗಳು (Electric vehicle) ಈಗಿನ ಟ್ರೆಂಡ್ ಆಗುತ್ತಿವೆ. ಇದು ಕೇವಲ ವಾಹನಗಳಿಗೆ ಮಾತ್ರ ಸೀಮಿತವಾಗದೇ ರೈತರ ಕೃಷಿ ಜಮೀನಿಗೂ ಎಂಟ್ರಿ ಕೊಟ್ಟಿದೆ. ಕಡಿಮೆ ನಿರ್ವಹಣೆ ವೆಚ್ಚದ ವಿದ್ಯುತ್ ಚಾಲಿತ ಕೃಷಿ ಯಂತ್ರಗಳನ್ನು ಸಂಸ್ಥೆಯೊಂದು ಸಿದ್ಧಪಡಿಸಿದೆ.
ನಗರದ ಜಿಕೆವಿಕೆ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಕೃಷಿಮೇಳದಲ್ಲಿ ಕಳೆ ಕೀಳುವ ಯಂತ್ರ, ಎಲೆಕ್ಟ್ರಿಕ್ ಪೌಲ್ಟ್ರಿ ರೇಕಿಂಗ್ ಯಂತ್ರ (Poultry Raking Machine) ಹಾಗೂ ಭತ್ತದ ಪೈರು ನಾಟಿ ಮಾಡುವ ಎಲೆಕ್ಟ್ರಿಕ್ ಯಂತ್ರಗಳನ್ನು ಹುಬ್ಬಳ್ಳಿಯ ಆಸಿಲ್ಲೋ ಮಷಿನ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಸಿದ್ಧಪಡಿಸಿ, ಪ್ರದರ್ಶಿಸಿದರು. ಜೊತೆಗೆ ರೈತರು ಸಹ ಈ ಮಳೆಗೆಗೆ ಭೇಟಿ ನೀಡಿ, ಇದರ ಉಪಯೋಗಗಳ ಕುರಿತು ಮಾಹಿತಿ ಪಡೆದರು.
ಆಸಿಲ್ಲೋ ಮಷಿನ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಸಿಇಒ ಪ್ರಜ್ವಲ್.ಎಂ ಮಾತನಾಡಿ, ಎಲೆಕ್ಟ್ರಿಕ್ ಯಂತ್ರಗಳನ್ನು ರಿಜಾರ್ಜ್ ಮಾಡಿ ಮತ್ತೆ ಮತ್ತೆ ಬಳಸಬಹುದಾಗಿದೆ. ಭತ್ತದ ಪೈರು ನಾಟಿ ಮಾಡುವ ಈ ಯಂತ್ರವು ಭತ್ತದ ಸಸಿಗಳ ನಡುವೆ ಸಮಾನ ಸಾಲು ಮತ್ತು ಭತ್ತದ ಅಂತರ ಕಾಪಾಡುತ್ತದೆ ಹಾಗೂ ನೀರನ್ನು ಉಳಿಸುತ್ತದೆ, ಹೆಚ್ಚಿನ ಇಳುವರಿಯನ್ನೂ ಕೊಡುತ್ತದೆ. ಕೃಷಿ ಆಧುನೀಕರಣಗೊಳಿಸಿ, ರೈತರ ಕೆಲಸ ಸುಲಭವಾಗಿಸಲು ಹೊಸ ಯಂತ್ರಗಳನ್ನು ಸಂಶೋಧಿಸಿ, ಸ್ಥಳೀಯ ಕೃಷಿ ಕೆಲಸಗಳ ಸಮಸ್ಯೆಯನ್ನು ವೈಜ್ಞಾನಿಕವಾಗಿ ಬಗೆಹರಿಸಲು ನಮ್ಮ ಯುವಕರ ತಂಡ ಕೆಲಸ ಮಾಡುತ್ತಿದೆ ಎಂದರು.
ಇನ್ನು ಎಲೆಕ್ಟ್ರಿಕ್ ಕಳೆ ಕೀಳುವ ಯಂತ್ರವು ಗದ್ದೆ ಹಾಗೂ ತೋಟ ಎರಡಕ್ಕೂ ಉಪಯುಕ್ತ. ಇದರಲ್ಲಿ ವಿಭಿನ್ನ ರೀತಿಯ ಬ್ಲೇಡ್ಗಳಿರುತ್ತವೆ. ಈ ಎಲ್ಲ ಯಂತ್ರಗಳ ಕಾರ್ಯವಿಧಾನವನ್ನು ಸಂಸ್ಥೆಯ ವೆಬ್ ಸೈಟ್ ಆದ www.oscillomachines.com ನಲ್ಲಿ ನೋಡಲು ಲಭ್ಯವಿದೆ ಎಂದು ಪ್ರಜ್ವಲ್ 'ಈಟಿವಿ ಭಾರತ'ಕ್ಕೆ ತಿಳಿಸಿದರು.